ಬಳ್ಳಾರಿ ಜಿಲ್ಲಾ ಸಹಕಾರ ಬ್ಯಾಂಕ್ (ಬಿಡಿಸಿಸಿ)ನ ಕೂಡ್ಲಿಗಿ ತಾಲೂಕಿನ ಚಿಕ್ಕಚೋಗಿಹಳ್ಳಿ ಶಾಖೆಯ ಸಿಬ್ಬಂದಿ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುವ ಮೂಲಕ ಜನರ ಮನಗೆದ್ದಿದ್ದಾರೆ. ಬ್ಯಾಂಕ್ ಗ್ರಾಹಕಸ್ನೇಹಿಯಾಗಿ ರೂಪುಗೊಂಡಿದೆ.

ಭೀಮಣ್ಣ ಗಜಾಪುರ

ಕೂಡ್ಲಿಗಿ: ಅಖಂಡ ಬಳ್ಳಾರಿ ಜಿಲ್ಲೆಯ "ಬಳ್ಳಾರಿ ಜಿಲ್ಲಾ ಸಹಕಾರ ಬ್ಯಾಂಕ್ " (ಬಿಡಿಸಿಸಿ)ನ ಕೂಡ್ಲಿಗಿ ತಾಲೂಕಿನ ಚಿಕ್ಕಚೋಗಿಹಳ್ಳಿ ಶಾಖೆಯ ಸಿಬ್ಬಂದಿ ಗ್ರಾಹಕರಿಗೆ ಮೊದಲ ಆದ್ಯತೆ ನೀಡುತ್ತದೆ. ಅದರಲ್ಲೂ ವೃದ್ಧರಿಗೂ ಅಂಗವಿಕಲರಿಗೂ ವಿಶೇಷ ಕಾಳಜಿವಹಿಸಿ ಬ್ಯಾಂಕ್ ಸೇವೆಗಳನ್ನು ನೀಡಲಾಗುತ್ತಿದೆ.

ಇಲ್ಲಿನ ವ್ಯವಸ್ಥಾಪಕರಿಂದ ಹಿಡಿದು ಸಿಬ್ಬಂದಿ ಗ್ರಾಹಕರನ್ನು ನಗುಮೊಗದಲಿಂದಲೇ ಸ್ವಾಗತಿಸುತ್ತ, ವಿನಮ್ರವಾಗಿ ಗ್ರಾಹಕರ ಕುಂದು-ಕೊರತೆಗಳನ್ನು ಆಲಿಸುತ್ತಾರೆ. ಖಾತೆದಾರರಿಗೆ ಉತ್ತಮ ಸೇವೆ ನೀಡುತ್ತಿರುವುದರಿಂದ ಚಿಕ್ಕಜೋಗಿಹಳ್ಳಿ ಸುತ್ತಮುತ್ತಲ ರೈತರಿಗೆ ಈ ಬ್ಯಾಂಕ್ ವರವಾಗಿದೆ.

2019 ಸೆ. 6ರಂದು ಈ ಬ್ಯಾಂಕ್ ಪ್ರಾರಂಭವಾಗಿದ್ದು, ಮೊದಲು ಸೊಸೈಟಿ ಬಿಲ್ಡಿಂಗ್‌ನಲ್ಲಿತ್ತು. 2025 ಅ. 29ರಂದು ಗುಂಡುಮುಣಗು ಮುಖ್ಯರಸ್ತೆಯ ಪಕ್ಕದ ನೂತನ ಬಾಡಿಗೆ ಬಿಲ್ಡಿಂಗ್‌ಗೆ ಸ್ಥಳಾಂತರಗೊಂಡಿತು. 2500ರಿಂದ ಈಗ 4 ಸಾವಿರ ಗ್ರಾಹಕರಾಗಿದ್ದಾರೆ. ಈ ಬ್ಯಾಂಕ್ ಎಟಿಎಂ ಬಹುಪಾಲು ರೈತರಿಗೆ ವರದಾನವಾಗಿದೆ.

₹50 ಕೋಟಿಗೂ ಹೆಚ್ಚು ಸಾಲ (ಕೖಷಿಯೇತರ ಸಾಲ ₹27.50 ಕೋಟಿ, ಕೖಷಿ ಸಾಲ ₹22.50 ಕೋಟಿ) ನೀಡಿದೆ. ₹20.65 ಕೋಟಿ ಠೇವಣಿ ಇದೆ. ಈ ಬ್ಯಾಂಕ್‌ನ ಸೇವೆ ಗುರುತಿಸಿ 2021-22ರಲ್ಲಿ ಕಡಿಮೆ ಸಿಬ್ಬಂದಿಯಲ್ಲಿ ಠೇವಣಿ ಗುರಿ ಸಾಧನೆಗಾಗಿ ಮಹಾಜನ ಸಭೆಯಲ್ಲಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ. ಎಲ್ಲ ಅತ್ಯಾಧುನಿಕ ಸೌಲಭ್ಯಗಳನ್ನು ಈ ಬ್ಯಾಂಕ್ ಒಳಗೊಂಡಿದೆ.

6 ಸಿಬ್ಬಂದಿ ಇರಬೇಕಾದ ಬ್ಯಾಂಕ್‌ನಲ್ಲಿ ಐದೇ ಜನರಿದ್ದರೂ ಉತ್ತಮ ಸೇವೆ ದೊರೆಯುತ್ತಿದೆ. ಎಚ್.ಎಂ. ಕೊಟ್ರಸ್ವಾಮಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಿಬ್ಬಂದಿ ಎಚ್. ಬಸವರಾಜ, ಎಸ್. ಸುಪ್ರಿತ್, ಸಿ. ಬನ್ನಿಗೌಡ, ಬಿ.ಬಿ. ನಾಗವೇಣಿ, ಕ್ಷೇತ್ರಾಧಿಕಾರಿ ಎಂ. ಕೊಟ್ರೇಶ್ ಅವರ ಜನಪರ ಸೇವೆಯೇ ಈ ಬ್ಯಾಂಕ್ ಮಾದರಿ ಬ್ಯಾಂಕ್ ಆಗಲು ಕಾರಣವಾಗಿದೆ.

ನಮ್ಮ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಇತ್ತೀಚಿನ ಬ್ಯಾಂಕ್‌ಗಳ ಪೈಕಿ ಚಿಕ್ಕಜೋಗಿಹಳ್ಳಿ ಬಿಡಿಸಿಸಿ ಬ್ಯಾಂಕ್ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಎಲ್ಲರ ಗಮನ ಸೆಳೆಯುತ್ತದೆ. ಮಾದರಿ ಗ್ರಾಮ ಚಿಕ್ಕಜೋಗಿಹಳ್ಳಿಯಲ್ಲಿ ಮಾದರಿ ಬ್ಯಾಂಕ್ ಆಗಿ ಹೊರಹೊಮ್ಮುತ್ತಿದೆ. ದಿನದಿಂದ ದಿನಕ್ಕೆ ಜನಸ್ನೇಹಿ ಬ್ಯಾಂಕ್ ಆಗಿ ರೂಪುಗೊಳ್ಳುತ್ತಿದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ. ತಿಪ್ಪೇಸ್ವಾಮಿ ಹೇಳಿದರು.

ನಮ್ಮ ಬಿಡಿಸಿಸಿ ಬ್ಯಾಂಕ್‌ನ ಅಧೀನದಲ್ಲಿ ಸೂಲದಹಳ್ಳಿ, ಹಾರಕಬಾವಿ, ಎಂ.ಬಿ. ಅಯ್ಯನಹಳ್ಳಿ, ಚಿಕ್ಕಜೋಗಿಹಳ್ಳಿ, ಹುರುಳಿಹಾಳ್, ಗಂಡಬೊಮ್ಮನಹಳ್ಳಿಯ ಆರು ಸಹಕಾರ ಸಂಘಗಳು ಬರುತ್ತಿವೆ. ಬ್ಯಾಂಕ್‌ಗೆ ಬರುವ ಗ್ರಾಹಕರನ್ನು ಪ್ರೀತಿಯಿಂದ ಸ್ವಾಗತಿಸಿ ಬ್ಯಾಂಕ್ ಸೇವೆ ತಡವಾಗುವುದಾದರೆ ಮನವರಿಕೆ ಮಾಡಿ ಕೂರಿಸಿ, ಅವರಿಗೆ ಕೆಲಸ ಮಾಡಿಕೊಡುತ್ತೇವೆ, ನಮ್ಮ ಕೈಲಾದ ಸಹಾಯ ಮಾಡುತ್ತೇವೆ ಎಂದು ಶಾಖಾ ವ್ಯವಸ್ಥಾಪಕ ಎಚ್.ಎಂ. ಕೊಟ್ರಸ್ವಾಮಿ ಹೇಳಿದರು.

ಇಲ್ಲಿಯ ಮ್ಯಾನೇಜರ್, ಸಿಬ್ಬಂದಿ ತಾಳ್ಮೆಯಿಂದ ನಮ್ಮ ಸಮಸ್ಯೆ ಆಲಿಸಿ ಕುಂದು-ಕೊರತೆ ಬಗೆಹರಿಸುತ್ತಾರೆ. ಪ್ರೀತಿಯಿಂದ ಸ್ವಾಗತಿಸಿ ಮನೆಯವರಂತೆ ಉಪಚರಿಸಿ, ಬ್ಯಾಂಕ್ ಸೇವೆ ನೀಡುತ್ತಾರೆ ಎಂದು ಕುರಿಹಟ್ಟಿ ಗ್ರಾಮದ ಗ್ರಾಹಕ ಬೋಸಯ್ಯ ಹೇಳಿದರು.