ಶಾಶ್ವತ ತೂಗುಸೇತುವೆಗೆ ಕಾಯುತ್ತಿದೆ ಪಾವೂರು ಉಳಿಯ ದ್ವೀಪ!

| Published : Apr 29 2024, 01:33 AM IST

ಶಾಶ್ವತ ತೂಗುಸೇತುವೆಗೆ ಕಾಯುತ್ತಿದೆ ಪಾವೂರು ಉಳಿಯ ದ್ವೀಪ!
Share this Article
  • FB
  • TW
  • Linkdin
  • Email

ಸಾರಾಂಶ

ಅಡ್ಯಾರಿಗೆ ಬಂದುಹೋಗಲು ಬೇಸಗೆಯಲ್ಲಿ ತಾತ್ಕಾಲಿಕ ತೂಗು ಸೇತುವೆ ನಿರ್ಮಿಸುತ್ತಾರೆ. ಮಳೆಗಾಲದಲ್ಲಿ ಇದು ಪ್ರವಾಹಕ್ಕೆ ನಿಲ್ಲುವುದಿಲ್ಲ. ಹಾಗಾಗಿ ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿ ಸೇತುವೆ ನಿರ್ಮಿಸಿ ಮಳೆಗಾಲ ವೇಳೆಗೆ ತೆಗೆದು ಹಾಕುವುದು ಅನಿವಾರ್ಯ. ಹೀಗೆ ಸಾಗುತ್ತಿದೆ ಇಲ್ಲಿನ ದ್ವೀಪವಾಸಿಗಳ ಬದುಕು.

ಆತ್ಮಭೂಷಣ್‌

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ತಾಲೂಕಿನ ಪಾವೂರು ಉಳಿಯ ದ್ವೀಪ ಪ್ರದೇಶದ ವಾಸಿಗಳಿಗೆ ಹಲವು ದಶಕಗಳಿಂದ ಶಾಶ್ವತ ಸಂಪರ್ಕ ವ್ಯವಸ್ಥೆ ಮರೀಚಿಕೆಯಾಗಿದೆ. ಸುಮಾರು 50 ಎಕರೆ ವಿಸ್ತೀರ್ಣದ ಪಾವೂರು ಉಳಿಯ ದ್ವೀಪದ ಸುತ್ತಲೂ ನೇತ್ರಾವತಿ ನದಿ ಹರಿಯುತ್ತಿದೆ. ಮಳೆಗಾಲದಲ್ಲಿ ಇಲ್ಲಿ ಅಕ್ಷರಶಃ ದ್ವೀಪಸದೃಶ ಬದುಕು, ಹೊರಜಗತ್ತಿಗೆ ಹೋಗಬೇಕಾದರೆ ದೋಣಿಯನ್ನು ಅವಲಂಬಿಸಬೇಕು. ಉಕ್ಕಿ ಹರಿಯುವ ನದಿಯನ್ನು ದೋಣಿ ಮೂಲಕ ದಾಟುವುದೇ ಹರಸಾಹಸ. ತುರ್ತು ಸಂದರ್ಭಗಳಲ್ಲಿ ತೆರಳಬೇಕಾದರೆ ದೇವರೇ ಗತಿ.

ದ್ವೀಪ ಪ್ರದೇಶ ಪಾವೂರು ಉಳಿಯದಿಂದ ಪಾವೂರು ಗ್ರಾಮ ಪಂಚಾಯ್ತಿಗೆ ತೆರಳಬೇಕಾದರೆ ದೋಣಿ ಆಶ್ರಯಿಸಬೇಕು. ಇನ್ನೊಂದು ಬದಿ ಅಡ್ಯಾರು. ಎರಡೂ ಕಡೆಗಳಿಗೆ ದ್ವೀಪ ಪ್ರದೇಶದಿಂದ 500 ಮೀಟರ್‌ ದೂರ ಇದೆ. ರಾಷ್ಟ್ರೀಯ ಹೆದ್ದಾರಿ 75 ಹಾದುಹೋಗುವ ಅಡ್ಯಾರನ್ನು ಸಂಪರ್ಕಿಸಿದರೆ ಅಲ್ಲಿಂದ ದ.ಕ. ಜಿಲ್ಲಾ ಕೇಂದ್ರ ಮಂಗಳೂರಿಗೆ ಕೇವಲ ಎಂಟು ಕಿಲೋ ಮೀಟರ್‌. ಪಾವೂರು ಹಳ್ಳಿ ಪ್ರದೇಶವಾದ್ದರಿಂದ ದ್ವೀಪದ ಜನತೆ ಬೇಕು, ಬೇಡಗಳಿಗೆ ಅಡ್ಯಾರನ್ನೇ ಅವಲಂಬಿಸಿದ್ದಾರೆ. ಪೇಟೆ, ಕಚೇರಿ, ಶಾಲೆ, ಮಾರ್ಕೆಟ್‌ ಹೀಗೆ ಎಲ್ಲದಕ್ಕೂ ಅಡ್ಯಾರಿಗೆ ಬರಲೇ ಬೇಕು.

ಅಡ್ಯಾರಿಗೆ ಬಂದುಹೋಗಲು ಬೇಸಗೆಯಲ್ಲಿ ತಾತ್ಕಾಲಿಕ ತೂಗು ಸೇತುವೆ ನಿರ್ಮಿಸುತ್ತಾರೆ. ಮಳೆಗಾಲದಲ್ಲಿ ಇದು ಪ್ರವಾಹಕ್ಕೆ ನಿಲ್ಲುವುದಿಲ್ಲ. ಹಾಗಾಗಿ ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿ ಸೇತುವೆ ನಿರ್ಮಿಸಿ ಮಳೆಗಾಲ ವೇಳೆಗೆ ತೆಗೆದು ಹಾಕುವುದು ಅನಿವಾರ್ಯ. ಹೀಗೆ ಸಾಗುತ್ತಿದೆ ಇಲ್ಲಿನ ದ್ವೀಪವಾಸಿಗಳ ಬದುಕು.

ಸಂಪರ್ಕವೇ ಕೊರತೆ:

ಪಾವೂರು ಉಳಿಯ ದ್ವೀಪ ಪ್ರದೇಶದಲ್ಲಿ ಸುಮಾರು 58 ಕುಟುಂಬಗಳಿದ್ದು, 200 ಮಂದಿ ಇದ್ದಾರೆ. ಒಂದು ದಲಿತ ಕುಟುಂಬ ಹೊರತುಪಡಿಸಿದರೆ ಬೇರೆಲ್ಲ ಕ್ರೈಸ್ತರು. ಒಂದು ಚರ್ಚ್ ಇದೆ. ಮೂಲಭೂತ ರಸ್ತೆ ಸಂಪರ್ಕ ಕೊರತೆಯಿಂದ ಹೆಚ್ಚಿನ ಮಂದಿ ಬೇರೆ ಕಡೆ ವಲಸೆ ಹೋಗಿದ್ದಾರೆ. ಇನ್ನೂ ಕೆಲವರು ಬಂದುಹೋಗುತ್ತಿದ್ದಾರೆ. ಮೊನ್ನೆ ನಡೆದ ಲೋಕಸಭಾ ಚುನಾವಣೆಗೂ ದ್ವೀಪವಾಸಿಗಳು ಪಾವೂರಿನ ಗಾಡಿಗದ್ದೆ ಮತದಾನ ಕೇಂದ್ರಕ್ಕೆ ದೋಣಿಯಲ್ಲಿ ತೆರಳಿ ಮತದಾನ ಮಾಡಿದ್ದಾರೆ. ಪಂಚಾಯ್ತಿ ಕೆಲಸ ಇದ್ದರೆ ಮಾತ್ರ ದೋಣಿಯಲ್ಲಿ ಸಂಚಾರ. ಬಾಕಿ ಕೆಲಸಕ್ಕೆಲ್ಲ ಅಡ್ಯಾರಿಗೆ ತಾತ್ಕಾಲಿಕ ಸೇತುವೆಯಲ್ಲಿ ಓಡಾಟ. ಸದ್ಯಕ್ಕೆ ತಾತ್ಕಾಲಿಕ ಆಸರೆ:

2013ರ ಮೊದಲು ನದಿ ದಾಟಲು ದೋಣಿಯಲ್ಲದೆ, ಬೇಸಿಗೆಯಲ್ಲಿ ಮರದ ಸಂಕ ನಿರ್ಮಿಸುತ್ತಿದ್ದರು. ಬಳಿಕ ಮರದ ಹಲಗೆಗೆ ಕಬ್ಬಿಣದ ಸಲಾಕೆ ಬಳಸಿ ತಾತ್ಕಾಲಿಕ ತೂಗು ಸೇತುವೆ ನಿರ್ಮಿಸಲಾಗುತ್ತಿದೆ. ದ್ವೀಪ ಪ್ರದೇಶದ ಇನ್‌ಫೆಂಟ್‌ ಜೀಸಸ್‌ ಚಾಪೆಲ್‌ನ ಧರ್ಮಗುರು ರೆ.ಫಾ. ಜೆರಾಲ್ಡ್‌ ಲೋಬೋ ಮುತುವರ್ಜಿಯಲ್ಲಿ ತಾತ್ಕಾಲಿತ ತೂಗುಸೇತುವೆ ನಿರ್ಮಾಣವಾಗುತ್ತಿತ್ತು. ಈಗ ಬೇಸಗೆಯಲ್ಲಿ ದ್ವೀಪವಾಸಿಗಳಿಗೆ ತಾತ್ಕಾಲಿಕ ತೂಗುಸೇತುವೆಯೇ ಆಸರೆ. ಶಾಶ್ವತ ತೂಗು ಸೇತುವೆ ಬೇಡಿಕೆ:

ಪಾವೂರು ಉಳಿಯ ದ್ವೀಪದಿಂದ ಅಡ್ಯಾರು ಸಂಪರ್ಕಿಸುವಲ್ಲಿ ಶಾಶ್ವತ ತೂಗುಸೇತುವೆ ನಿರ್ಮಾಣದ ಬೇಡಿಕೆ ಇನ್ನೂ ಈಡೇರಿಲ್ಲ.

ಪಾವೂರು ಉಳಿಯ ದ್ವೀಪಕ್ಕೆ ಸೇತುವೆ ನಿರ್ಮಿಸುವಂತೆ ಮೊದಲು ದ್ವೀಪವಾಸಿಗಳು ಬೇಡಿಕೆ ಇರಿಸಿದ್ದರು. ಕಾಂಕ್ರಿಟ್‌ ಸೇತುವೆ ನಿರ್ಮಾಣಕ್ಕೆ ಸುಮಾರು 300 ಕೋಟಿ ರು.ಗೂ ಅಧಿಕ ಮೊತ್ತ ಬೇಕು. ಅಷ್ಟೊಂದು ಮೊತ್ತ ವೆಚ್ಚ ಮಾಡಿ ಸೇತುವೆ ನಿರ್ಮಿಸಿದರೆ ಅಷ್ಟೇನೂ ಪ್ರಯೋಜನವಿಲ್ಲ. ಸೇತುವೆಯ ಪಿಲ್ಲರ್‌ಗಳು ದೋಣಿ ಸಂಚಾರಕ್ಕೆ ತೊಡಕಾಗಿ ಪರಿಣಮಿಸಬಹುದು ಎಂದು ಸೇತುವೆ ಯೋಜನೆಯನ್ನು ಅಧಿಕಾರಿಗಳು ಕೈಬಿಟ್ಟರು.

ಈ ಹಿಂದೆ ಸುಮಾರು 7 ಕೋಟಿ ರು.ಗಳಲ್ಲಿ ಶಾಶ್ವತ ತೂಗುಸೇತುವೆ ಪ್ರಸ್ತಾಪಿಸಲಾಗಿತ್ತು. ಆದರೆ ಕನಿಷ್ಠ ದ್ವಿಚಕ್ರ ವಾಹನ ಸಂಚಾರಕ್ಕೆ ಅವಕಾಶ ಇರುವ ಸೇತುವೆ ನಿರ್ಮಿಸುವಂತೆ ದ್ವೀಪವಾಸಿಗಳು ಕೋರಿದ್ದರು. ಹಾಗಾಗಿ ಗುಣಮಟ್ಟದ ಶಾಶ್ವತ ತೂಗುಸೇತುವೆ ನಿರ್ಮಿಸುವುದು ವಿಳಂಬವಾಗಿದೆ ಎನ್ನುತ್ತಾರೆ ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯ ರಿಯಾದ್‌.

ಮಳೆಗಾಲದಲ್ಲಿ ತೂಗುಸೇತುವೆ ಮುಳುಗುವ ತಾಪತ್ರಯ ಇರುತ್ತದೆ. ಹಾಗಾಗಿ ತೂಗುಸೇತುವೆಯನ್ನು ಎತ್ತರಿಸಬೇಕು. ಅಲ್ಲದೆ ಗಾಳಿ, ಮಳೆಗೆ ತೊಂದರೆಯಾಗದಂತೆ ಸೇತುವೆ ನಿರ್ಮಾಣದ ವಿನ್ಯಾಸ ಇರಬೇಕು. ಇದಕ್ಕಾಗಿ ಈಗ ಹೊಸದಾಗಿ 12 ಕೋಟಿ ರು.ಗಳ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ.

ಹೀಗಿದೆ ದ್ವೀಪವಾಸಿಗಳ ಬದುಕು

ಪಾವೂರು ಉಳಿಯ ದ್ವೀಪದಲ್ಲಿ ಕೊಳವೆಬಾವಿ, ತೆರೆದ ಬಾವಿ ಇದೆ. ಇಲ್ಲಿರುವ ಕುಟುಂಬಗಳು ಕೃಷಿ ಜತೆ ಮೀನುಗಾರಿಕೆ ನಡೆಸುತ್ತಿದ್ದರು. ಭತ್ತ, ಕಬ್ಬು, ತೆಂಗು ಕೃಷಿ ಈಗ ಕಡಿಮೆಯಾಗಿದೆ. ಜಿಲ್ಲಾ ಪಂಚಾಯ್ತಿಯಿಂದ ನಾಲ್ಕು ವರ್ಷಗಳ ಹಿಂದೆ ದೋಣಿ ನೀಡಲಾಗಿತ್ತು. ಆಗ ನಾಲ್ಕೈದು ದೋಣಿಗಳಲ್ಲಿ ಮೀನುಗಾರಿಕೆ ನಡೆಸುತ್ತಾ ಜೀವನ ಸಾಗಿಸುತ್ತಿದ್ದರು. ಈಗ ಹರೇಕಳ ಎಂಬಲ್ಲಿ ಅಣೆಕಟ್ಟೆ ನಿರ್ಮಾಣವಾದ ಕಾರಣ ಮೀನುಗಾರಿಕೆ ನಡೆಸಲು ಆಗುತ್ತಿಲ್ಲ. ವಳಚ್ಚಿಲ್‌, ಅರ್ಕುಳದಲ್ಲಿ ಅಕ್ರಮ ಮರಳುಗಾರಿಕೆಯೂ ಸಾಂಪ್ರದಾಯಿಕ ಮೀನುಗಾರಿಕೆಗೆ ತೊಡಕಾಗಿದೆ ಎನ್ನುವುದು ಸ್ಥಳೀಯರ ಆರೋಪ. ದ್ವೀಪದಲ್ಲಿ ನಾಲ್ಕನೇ ತರಗತಿ ವರೆಗಿನ ಶಾಲೆಯೊಂದು ಇದೆ, ಆದರೆ ರಸ್ತೆ ಸಂಪರ್ಕ ಇಲ್ಲದ ಕಾರಣ ಶಿಕ್ಷಕರೇ ಬಾರದೆ ಶಾಲೆ ಮುಚ್ಚಿದೆ. ಮಳೆಗಾಲದಲ್ಲಿ ತುರ್ತು ಸಂಪರ್ಕಕ್ಕೆ ದೋಣಿಯನ್ನೇ ಅವಲಂಬಿಸಬೇಕು.2022ರಿಂದಲೇ ಶಾಶ್ವತ ತೂಗುಸೇತುವೆಗೆ ಪ್ರಯತ್ನಿಸಲಾಗಿದೆ. ದ್ವಿಚಕ್ರ ವಾಹನ ಸಂಚಾರಕ್ಕೆ ಅನುಕೂಲವಾಗಲು 12 ಕೋಟಿ ರು.ಗಳ ತೂಗುಸೇತುವೆಗೆ ಪ್ರಸ್ತಾಪಿಸಲಾಗಿದೆ. ಈಗ ಕಡತ ಗ್ರಾಮೀಣಾಭಿವೃದ್ಧಿ ಸಚಿವಾಲಯದಲ್ಲಿದೆ. ಚುನಾವಣಾ ನೀತಿಸಂಹಿತೆ ಮುಕ್ತಾಯ ಬಳಿಕ ಅನುಮೋದನೆ ಪಡೆದುಕೊಳ್ಳಲಾಗುವುದು.

-ಯು.ಟಿ.ಖಾದರ್‌, ಸ್ಥಳೀಯ ಶಾಸಕ ಹಾಗೂ ಸ್ಪೀಕರ್‌ ಕರ್ನಾಟಕ ವಿಧಾನಸಭೆ