ಸಾರಾಂಶ
ಸಾಹೇಬ್ರ, ನಿಮ್ಗ ಕಾಲು ಬೀಳ್ತಿವ್ರಿ. ನಮ್ಗ ಶಾಶ್ವತ ಪರಿಹಾರ ಒದಗಿಸಿಕೊಡ್ರಿ. 20 ವರ್ಷಗಳಿಂದ ನಮ್ಮ ಬಾಳೇ ನೀರಾಗ ಮುಳಗೈತ್ರಿ. ಪ್ರತಿವರ್ಷ ಪ್ರವಾಹ ಬಂದಾಗ ನಿಮ್ಮಂತ ಮಂತ್ರಿಗಳು ಬಂದು ನಮ್ಮ ಗೋಳು ಕೇಳಿ ಹೋಗ್ತಾರು. ಅವರೇನು ಮಾಡಲಿಲ್ಲ. ನೀವಾದ್ರೂ ನಮ್ಗೊಂದು ಶಾಶ್ವತ ಸೂರು ನೀಡಿ ಪುಣ್ಯಕಟ್ಟಿಕೊಳ್ರಿ ಎಂದು ಸಂತ್ರಸ್ತರು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಎದುರು ಕೈ ಮುಗಿದು ಕಣ್ಣೀರು ಹಾಕಿದರು.
ಕನ್ನಡಪ್ರಭ ವಾರ್ತೆ ಮುಧೋಳ
ಸಾಹೇಬ್ರ, ನಿಮ್ಗ ಕಾಲು ಬೀಳ್ತಿವ್ರಿ. ನಮ್ಗ ಶಾಶ್ವತ ಪರಿಹಾರ ಒದಗಿಸಿಕೊಡ್ರಿ. 20 ವರ್ಷಗಳಿಂದ ನಮ್ಮ ಬಾಳೇ ನೀರಾಗ ಮುಳಗೈತ್ರಿ. ಪ್ರತಿವರ್ಷ ಪ್ರವಾಹ ಬಂದಾಗ ನಿಮ್ಮಂತ ಮಂತ್ರಿಗಳು ಬಂದು ನಮ್ಮ ಗೋಳು ಕೇಳಿ ಹೋಗ್ತಾರು. ಅವರೇನು ಮಾಡಲಿಲ್ಲ. ನೀವಾದ್ರೂ ನಮ್ಗೊಂದು ಶಾಶ್ವತ ಸೂರು ನೀಡಿ ಪುಣ್ಯಕಟ್ಟಿಕೊಳ್ರಿ ಎಂದು ಸಂತ್ರಸ್ತರು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಎದುರು ಕೈ ಮುಗಿದು ಕಣ್ಣೀರು ಹಾಕಿದರು.ಸ್ಥಳೀಯ ಎಂ.ಕೆ.ಬಿ.ಎಸ್ ಶಾಲೆಯ ಕಾಳಜಿ ಕೇಂದ್ರದಲ್ಲಿರುವ ಇರುವ ನಿರಾಶ್ರಿತರ ಸಮಸ್ಯೆ ಆಲಿಸಲು ಕಂದಾಯ ಸಚಿವರು ಬಂದಾಗ ಅಲ್ಲಿಯ ಮಹಿಳೆಯರು ಅಂಗಲಾಚಿ ಸಚಿವರನ್ನು ಈ ರೀತಿಯಾಗಿ ಬೇಡಿಕೊಂಡರು.
ಕ್ಷೇತ್ರದ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹಾಗೂ ವಿ.ಪ ಸದಸ್ಯೆ ಉಮಾಶ್ರೀ ಅವರ ನೇತೃತ್ವದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಂಗಳವಾರ ಮುಧೋಳ ಸಮೀಪದಲ್ಲಿ ಹರಿದಿರುವ ಘಟಪ್ರಭ ನದಿಗೆ ಭೇಟಿ ನೀಡಿದ ಬಳಿಕ ನಗರದ ಕಲ್ಮೇಶ್ವರ ಎಂ.ಕೆ.ಬಿ.ಎಸ್ ಶಾಲೆಯಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ನಿರಾಶ್ರಿತರನ್ನು ಮಾತನಾಡಿಸಿದಾಗ ಪ್ರತಿವರ್ಷ ಪ್ರವಾಹ ಬಂದಾಗ ನಮ್ಮನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಳಿಸುವುದು, ಉಟೋಪಚಾರ ಮಾಡುವುದು ಬೇಡ, ತಾವು ಏನಾದ್ರೂ ಮಾಡುವುದಿದ್ದರೆ ನಮಗೊಂದು ಶಾಶ್ವತ ಸೂರು ನೀಡಿ ಉಪಕಾರ ಮಾಡ್ರಿ ಎಂದು ನಿರಾಶ್ರಿತರು ಸಚಿವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು.ನಿರಾಶ್ರಿತರ ಮಾತನ್ನು ಆಲಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಥಳದಲ್ಲಿದ್ದ ಸಚಿವ ಆರ್.ಬಿ.ತಿಮ್ಮಾಪೂರ ಹಾಗೂ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಅವರ ಜೊತೆ ಮಾತನಾಡಿ, ಈ ಕೂಡಲೇ ನಿರಾಶ್ರಿತರಿಗೆ ವಾಸಿಸಲು ಜಾಗವೊಂದನ್ನು ಗುರುತಿಸಿ ಅವರಿಗೊಂದು ಶಾಶ್ವತ ಪರಿಹಾರ ಒದಗಿಸಿ ಕೊಡುವಂತೆ ಸೂಚಿಸಿ ಹೊರಟರು.
ನಂತರ ಕಂದಾಯ ಸಚಿವ ಕೃಷ್ಣ ಬೈರೇಗೌಡರು ತಾಲೂಕಿನ ಮಳಲಿ ಗ್ರಾಮಕ್ಕೆ ತೆರಳಿ ಅಲ್ಲಿನ ಪರಿಸ್ಥಿತಿ ಪರಿಶೀಲಿಸಿ, ಸಂತ್ರಸ್ತರನ್ನು ಮಾತನಾಡಿಸಿ ಅವರ ಬೇಕು, ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು. ತಾಲೂಕು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಸೇರಿದಂತೆ ಗ್ರಾಮಸ್ಥರು ಇದ್ದರು.