ದುಶ್ಚಟಕ್ಕೆ ಒಳಗಾದ ವ್ಯಕ್ತಿಗೆ ಶ್ರಮದ ಫಲ ದೊರಕುವುದಿಲ್ಲ: ತಿಲಕ್ ರಾಜ್

| Published : Nov 25 2024, 01:01 AM IST

ದುಶ್ಚಟಕ್ಕೆ ಒಳಗಾದ ವ್ಯಕ್ತಿಗೆ ಶ್ರಮದ ಫಲ ದೊರಕುವುದಿಲ್ಲ: ತಿಲಕ್ ರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಸಪ್ತ ವ್ಯಸನಗಳಲ್ಲಿ ಮದ್ಯಪಾನವೇ ಮೊದಲ ಮೆಟ್ಟಿಲು. ಇದರಲ್ಲಿ ಜಾರಿದರೆ ನಮ್ಮ ಬದುಕಿನ ಯಶಸ್ಸಿನ ಗುರಿ ಮುಟ್ಟವ ಬದಲು ಎಲ್ಲದರಲ್ಲೂ ನಾವು ಜಾರಿ ಬೀಳುತ್ತೇವೆ. ಕಷ್ಟ ಮರೆಯಲು ಕುಡಿತದ ಚಟಕ್ಕೆ ಒಳಗಾದರೆ ನಮ್ಮ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಕಷ್ಟ ಬರುತ್ತದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತೂತು ಬಿದ್ದ ಪಾತ್ರೆಗೆ ಎಷ್ಟೇ ನೀರು ತುಂಬಿದರೂ ಸೋರುತ್ತದೆ. ಅದೇ ರೀತಿ ದುಶ್ಚಟಗಳಿಗೆ ಒಳಗಾದ ವ್ಯಕ್ತಿ ಎಷ್ಟೇ ಸಂಪಾದಿಸಿದರೂ ಶ್ರಮದ ಫಲ ದೊರಕುವುದಿಲ್ಲ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ತಿಲಕ್ ರಾಜ್ ಅಭಿಪ್ರಾಯಪಟ್ಟರು.ತಾಲೂಕಿನ ಬೂಕನಕೆರೆ ಗ್ರಾಮದ ಸರ್ಕಾರಿ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಆಶ್ರಯದಲ್ಲಿ ಆಯೋಜಿಸಿದ್ದ 1887ನೇ ಮದ್ಯ ವರ್ಜನ ಶಿಬಿರದಲ್ಲಿ ಕುಡಿತದ ಚಟದಿಂದ ಬಿಡುಗಡೆಯಾಗಿರುವ ಶಿಬಿರಾರ್ಥಿಗಳ ಜೊತೆ ಸಂವಹನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಪ್ತ ವ್ಯಸನಗಳಲ್ಲಿ ಮದ್ಯಪಾನವೇ ಮೊದಲ ಮೆಟ್ಟಿಲು. ಇದರಲ್ಲಿ ಜಾರಿದರೆ ನಮ್ಮ ಬದುಕಿನ ಯಶಸ್ಸಿನ ಗುರಿ ಮುಟ್ಟವ ಬದಲು ಎಲ್ಲದರಲ್ಲೂ ನಾವು ಜಾರಿ ಬೀಳುತ್ತೇವೆ. ಕಷ್ಟ ಮರೆಯಲು ಕುಡಿತದ ಚಟಕ್ಕೆ ಒಳಗಾದರೆ ನಮ್ಮ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಕಷ್ಟ ಬರುತ್ತದೆ ಎಂದರು.

ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಧರ್ಮಸ್ಥಳ ಸಂಸ್ಥೆ ನಿರಂತರ ಶ್ರಮಿಸುತ್ತಿದೆ. ರಾಜ್ಯದ ಉದ್ದಗಲಕ್ಕೂ ಮದ್ಯ ವರ್ಜನ ಶಿಬಿರ ಆಯೋಜಿಸಿ ಕುಡಿತದ ಚಟಕ್ಕೆ ಒಳಗಾದ ವ್ಯಕ್ತಿಗಳನ್ನು ಚಟ ಮುಕ್ತಗೊಳಿಸಿ ಸಮಾಜದ ಮುಖ್ಯ ವಾಹಿನಿಗೆ ತಂದು ನಿಲ್ಲಿಸುವ ಕೆಲಸ ಮಾಡುತ್ತಿದೆ ಎಂದರು.

ರಾಜ್ಯದಲ್ಲಿ ಇದುವರೆಗೆ 1.20 ಲಕ್ಷ ಜನ ನಮ್ಮ ಶಿಬಿರದ ಮೂಲಕ ಕುಡಿತದ ಚಟದಿಂದ ಬಿಡುಗಡೆಯಾಗಿ ಸುಂದರ ಬದುಕು ಸಾಗಿಸುತ್ತಿದ್ದಾರೆ. ಹಿಂದಿನ ಶಿಬಿರಗಳಲ್ಲಿ ಕುಡಿತದ ಚಟದಿಂದ ಮುಕ್ತಿ ಪಡೆದವರು ಇಂದಿನ ಶಿಬಿರಗಳಲ್ಲಿ ಸ್ವಯಂ ಸೇವಕರಂತೆ ಕೆಲಸ ಮಾಡುತ್ತಿದ್ದು ಸಮಾಜದ ಮತ್ತು ಕುಟುಂಬದ ಪ್ರೀತಿ ವಿಶ್ವಾಸಕ್ಕೆ ಭಾಜನರಾಗಿದ್ದಾರೆ ಎಂದರು.

ಒಂದು ಕುಟುಂಬದ ಸದಸ್ಯನನ್ನು ಕುಡಿತದ ಚಟದಿಂದ ಮುಕ್ತಗೊಳಿಸಿದರೆ ಕುಟುಂಬಕ್ಕೊಂದು ದೇವಾಲಯವನ್ನು ನಿರ್ಮಿಸಿದಂತೆ. ಪ್ರಸಕ್ತ ಬೂಕನಕೆರೆಯ ಮದ್ಯವರ್ಜನ ಶಿಬಿರದಲ್ಲಿ 65 ಜನ ಕುಡಿತದ ಚಟದಿಂದ ಬಿಡುಗಡೆಯಾಗಿ ಬದಲಾವಣೆಯ ಬದುಕಿನತ್ತ ಸಾಗುತ್ತಿದ್ದಾರೆ ಎಂದರು.

ಕುಡಿತ ಬಿಟ್ಟ ನಂತರ ನಿಮ್ಮ ಬೆವರಿನ ಫಲ ನಿಮ್ಮ ಕುಟುಂಬಕ್ಕೆ ಮೀಸಲಾಗಿರಲಿ. ಜೀವನ ಸಾಗಿಸಲು ದುಡಿಮೆ ಇದ್ದರೆ ನಮ್ಮ ಮನಸ್ಸು ಪ್ರಗತಿಯತ್ತ ಯೋಚಿಸುತ್ತದೆ. ನೀವು ಮನೆಗೆ ಒಳ್ಳೆಯ ಮಗನಾಗಿ, ಸಮಾಜಕ್ಕೆ ಉತ್ತಮ ವ್ಯಕ್ತಿಗಳಾಗಿ ಮಕ್ಕಳಿಗೆ ಆದರ್ಶವಾಗಬೇಕು ಎಂದರು.

ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್ ವಿಶೇಷ ಉಪನ್ಯಾಸ ನೀಡಿದರು. ಬೂಕನಕೆರೆ ಗ್ರಾಪಂ ಅಧ್ಯಕ್ಷ ಬಿ.ಆರ್.ಶ್ಯಾಮ್ ಪ್ರಸಾದ್ ಮಾತನಾಡಿದರು. ಸರ್ಕಾರಿ ಪ್ರೌಢಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ಮಲ್ಲಿಕಾರ್ಜುನ್, ಗ್ರಾಮದ ಮುಖಂಡ ಮಹೇಶ್, ಪ್ರಾದೇಶಿಕ ಜನಜಾಗೃತಿ ವಿಭಾಗದ ಯೋಜನಾಧಿಕಾರಿ ಮಾಧವ ನಾಯಕ್ ಮೇಲ್ವಿಚಾರಕ ಪ್ರಕಾಶ್ ಆಚಾರ್ಯ ಸೇರಿದಂತೆ ಹಲವರಿದ್ದರು.