ಸಾರಾಂಶ
ಹಾವೇರಿ: ಗಂಗಾ ಪರಮೇಶ್ವರಿ ದೇವಸ್ಥಾನದ ಕಳಸಾರೋಹಣ ಸಂದರ್ಭದಲ್ಲಿ ಕ್ರೇನ್‌ಗೆ ಕಟ್ಟಿದ್ದ ಬಕೆಟ್ ಕಳಚಿ ಬಿದ್ದು ಓರ್ವ ಮೃತಪಟ್ಟು, ಇಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಹಾನಗಲ್ಲ ತಾಲೂಕಿನ ಶೇಷಗಿರಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಈ ಅವಘಡದಲ್ಲಿ ಗ್ರಾಮದ ಮಂಜುನಾಥ ಪಾಟೀಲ (೪೨) ಮೃತಪಟ್ಟಿದ್ದು, ತೀವ್ರವಾಗಿ ಗಾಯಗೊಂಡ ಮಂಜುನಾಥ ಬಡಿಗೇರ ಹಾಗೂ ಕುಸನೂರಿನ ತಿಪ್ಪೇಸ್ವಾಮಿ ಮಠದ ಜ್ಯೋತಿರ್ಲಿಂಗ ಸ್ವಾಮೀಜಿ ಅವರನ್ನು ಹಾನಗಲ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಗ್ರಾಮದಲ್ಲಿ ಗುರುವಾರ ಸಂಭ್ರಮದಿಂದ ಕುಂಭ ಮೆರವಣಿಗೆ ನಡೆಸಲಾಗಿತ್ತು. ಶುಕ್ರವಾರ ಗಂಗಾ ಪರಮೇಶ್ವರಿ ದೇವಸ್ಥಾನದ ಕಳಸಾರೋಹಣ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣಗೊಂಡಿತ್ತು. ಕಳಸಾರೋಹಣ ಕಾರ್ಯಕ್ರಮಕ್ಕಾಗಿ ಗ್ರಾಮಸ್ಥರು ಕ್ರೇನ್ ತರಿಸಿದ್ದರು. ದೇವಾಲಯದ ಪೂಜೆ ಬಳಿಕ ಕ್ರೇನ್‌ನ ಬಕೆಟ್‌ನಲ್ಲಿ ೭ರಿಂದ ೮ ಜನ ಎತ್ತುವಂತಹ ಕಳಸ ಹಾಗೂ ಮಂಜುನಾಥ ಪಾಟೀಲ, ಕುಸನೂರಿನ ತಿಪ್ಪೇಸ್ವಾಮಿಮಠದ ಜ್ಯೋತಿರ್ಲಿಂಗ ಸ್ವಾಮೀಜಿ, ಮಂಜುನಾಥ ಬಡಿಗೇರ ಇದ್ದರು. ಕ್ರೇನ್ ಕಬ್ಬಿಣದ ಬಕೆಟ್‌ನ್ನು ದೇವಸ್ಥಾನದ ಗೋಪುರದ ಸಮೀಪ ತೆಗೆದುಕೊಂಡು ಹೋಗುವಾಗ ಏಕಾಏಕಿ ಬಕೆಟ್ ಕಳಚಿ ಕೆಳಕ್ಕೆ ಬಿದ್ದಿದೆ. ಇದರ ಪರಿಣಾಮ ಕಬ್ಬಿಣದ ಬಕೆಟ್‌ನಲ್ಲಿದ್ದ ಮೂವರ ಪೈಕಿ ಮಂಜುನಾಥ ಪಾಟೀಲ ಎದೆಗೆ ಬಲವಾದ ಪೆಟ್ಟು ಬಿದ್ದು ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿದೆ.
ಈ ಅವಘಡದಿಂದಾಗಿ ಗ್ರಾಮದಲ್ಲಿಗ ಸೂತಕದ ಛಾಯೆ ಆವರಿಸಿದೆ. ಘಟನೆ ಕುರಿತು ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.