ಸಾರಾಂಶ
ಸಮಾರಂಭದಲ್ಲಿ 120ಕ್ಕೂ ಅಧಿಕ ಕುಟುಂಬಗಳಿಗೆ, ದೇಶಿಯ ಪರಂಪರೆಯಾದ ಗೋಪೂಜೆ, ಕೃಷಿ ಉಪಕರಣಗಳ ಪರಿಚಯ ಮತ್ತು ಪೂಜಾ ವಿಧಾನ, ಹಿರಿಯ ದಂಪತಿಗೆ ಸನ್ಮಾನ, ಪೂರ್ಣ ಕುಂಭಾ ಕಳಸ ಮೆರವಣಿಗೆ, ಶತಾಯುಷಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ದಾಬಸ್‍ಪೇಟೆ: ಇಡೀ ವಿಶ್ವವೇ ಒಂದು ಕುಟುಂಬ, ಮನೆಯಲ್ಲಿರುವ ಸಹ ಸದಸ್ಯರೊಡನೆ ಸಂಪೂರ್ಣವಾಗಿ ಬೆರೆತಾಗ ಮಾತ್ರ, ಆ ವ್ಯಕ್ತಿ ಪರಿಪೂರ್ಣವಾಗುತ್ತಾನೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ ಹೇಳಿದರು.ಸೋಂಪುರ ಹೋಬಳಿಯ ಶಿವಗಂಗೆಯ ಶ್ರೀ ಮೇಲಣಗವಿಮಠದ ಆವರಣದಲ್ಲಿ ಭಾರತೀಯ ಕಿಸಾನ್ ಸಂಘ ಹಾಗೂ ಕುಟುಂಬ ಪ್ರಬೋಧನ ನೆಲಮಂಗಲ ಶಾಖೆಯಿಂದ ಏರ್ಪಡಿಸಿದ್ದ ಕುಟುಂಬ ಮಿಲನ ಕಾರ್ಯಕ್ರಮದ ಅಂಗವಾಗಿ, ಹಿಂದೂ ಕುಟುಂಬ ಕುರಿತು ಸಂವಾದ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಹಿಂದೂ ಕುಟುಂಬಗಳಲ್ಲಿ ಅವಿಭಕ್ತ ಕುಟುಂಬಗಳ ಸಂಖ್ಯೆ ಕಡಿಮೆಯಾಗಬಾರದು, ಪ್ರತಿಯೊಬ್ಬರೂ ಸಹ ಜೀವನಕ್ಕೆ ಒತ್ತು ನೀಡಬೇಕು, ಪ್ರತಿಯೊಬ್ಬ ವ್ಯಕ್ತಿಯೂ ಕುಟುಂಬದ ಜೊತೆ ಹೇಗೆ ಸಹಬಾಳ್ವೆ ಮಾಡಬೇಕು ಎನ್ನುವುದನ್ನು, ಅಖಿಲ ಭಾರತ ಕುಟುಂಬ ಪ್ರಬೋಧನ ತಿಳಿಸುತ್ತಿದೆ, ಈ ಕಾರ್ಯಕ್ರಮವೂ ಇದೇ ಮಾದರಿಯಲ್ಲೇ ನಡೆಯುತ್ತಿದೆ, ಸಹಭೋಜನದಿಂದ ಮಾತ್ರ ಕುಟುಂಬದ ಒಳಗಿನ ಸಾಮರಸ್ಯವನ್ನು ಹೆಚ್ಚು ಮಾಡಿಕೊಳ್ಳಬಹುದು, ಪಾಶ್ಚಿಮಾತ್ಯ ಸಂಸ್ಕ್ರತಿಯನ್ನು ದೂರ ಮಾಡಬೇಕು ಎಂದರೆ ಮೊದಲು ಪಾಶ್ಚಾತ್ಯ ಆಹಾರ ಕ್ರಮವನ್ನು ಸಂಪೂರ್ಣವಾಗಿ ದೂರವಿಡಬೇಕು ಎಂದರು.120 ಕುಟುಂಬ ಭಾಗಿ:
ಸಮಾರಂಭದಲ್ಲಿ 120ಕ್ಕೂ ಅಧಿಕ ಕುಟುಂಬಗಳಿಗೆ, ದೇಶಿಯ ಪರಂಪರೆಯಾದ ಗೋಪೂಜೆ, ಕೃಷಿ ಉಪಕರಣಗಳ ಪರಿಚಯ ಮತ್ತು ಪೂಜಾ ವಿಧಾನ, ಹಿರಿಯ ದಂಪತಿಗೆ ಸನ್ಮಾನ, ಪೂರ್ಣ ಕುಂಭಾ ಕಳಸ ಮೆರವಣಿಗೆ, ಶತಾಯುಷಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ನಾಗರಾಜಯ್ಯ, ಕಾರ್ಯದರ್ಶಿ ನಾರಾಯಣಸ್ವಾಮಿ, ನೆಲಮಂಗಲ ತಾಲೂಕು ಅಧ್ಯಕ್ಷ ಕೆರೆಕತ್ತಿಗನೂರು ಗಂಗಣ್ಣ, ಕೋಡಿಹಳ್ಳಿ ಸಿ.ಅರುಣ್ ಕುಮಾರ್ ಸೇರಿ ತಾಲೂಕು ಕಿಸಾನ್ ಸಂಘದ ಎಲ್ಲಾ ಪದಾಧಿಕಾರಿಗಳು, ನೂರಾರು ಕುಟುಂಬದ ಸಹ ಸದಸ್ಯರು ಹಾಜರಿದ್ದರು.