ಸಂಡೂರು: ಪುರಸಭೆ ಅಧಿಕಾರಿಗಳು ಕೈಗೊಂಡ ಜಾಗೃತಿ ಕಾರ್ಯಕ್ರಮದಿಂದಾಗಿ ಕಸದ ತೊಟ್ಟಿಯಂತಾಗಿದ್ದ ಸ್ಥಳವೀಗ ಸ್ವಚ್ಛ ಸ್ಥಳವಾಗಿದೆ.

ಅಲ್ಲಿನ ಗೋಡೆಯ ಮೇಲೆ ತ್ಯಾಜ್ಯ ವಿಂಗಡಣೆಯ ಚಿತ್ರಗಳು ಮೂಡಿವೆ. ನೆಲದ ಮೇಲೆ ಸಸಿಗಳನ್ನು ಕಾಣಬಹುದಾಗಿದೆ.

ಈ ಬದಲಾವಣೆ ಕಂಡು ಬಂದಿದ್ದು ಪಟ್ಟಣದ ಬಳ್ಳಾರಿ ರಸ್ತೆಯಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್ ಬಳಿಯ ಸ್ಥಳದಲ್ಲಿ. ತ್ಯಾಜ್ಯ ಸಂಗ್ರಹ ವಾಹನ ಮನೆಗಳ ಬಳಿಗೆ ಬಂದರೂ ಅವುಗಳಲ್ಲಿ ತ್ಯಾಜ್ಯವನ್ನು ಹಾಕದೆ, ಕೆಲವರು ಹಾಸ್ಟೆಲ್ ಬಳಿ ಸುರಿದು ಹೋಗುತ್ತಿದ್ದರು. ಬಿಡಾಡಿ ದನ, ಹಂದಿ, ನಾಯಿಗಳಿಂದಾಗಿ ಅಲ್ಲಿ ಬೀಳುತ್ತಿದ್ದ ತ್ಯಾಜ್ಯವು ರಾಜ್ಯ ಹೆದ್ದಾರಿಗೆ ಬಂದು ಬಿದ್ದು, ಅಲ್ಲಿನ ವಾತಾವರಣವನ್ನೇ ಕಲುಷಿತಗೊಳಿಸಿತ್ತು.

ಇದನ್ನು ಗಮನಿಸಿದ ಪುರಸಭೆ ಅಧಿಕಾರಿಗಳು ಈ ಸ್ಥಳದ ಸುತ್ತ ನೆಲೆಸಿರುವ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಮನೆಗಳಲ್ಲಿನ ತ್ಯಾಜ್ಯವನ್ನು ರಸ್ತೆಗೆ ತಂದು ಸುರಿಯದಂತೆ ಮತ್ತು ಅದನ್ನು ತ್ಯಾಜ್ಯ ಸಂಗ್ರಹ ವಾಹನಗಳಲ್ಲಿ ಹಾಕುವಂತೆ ಸೂಚಿಸಿದರು.

ಈ ಪ್ರದೇಶದಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯ ತೆರವುಗೊಳಿಸಿ, ಅಲ್ಲಿನ ಗೋಡೆಗೆ ಸುಣ್ಣ ಬಳಿದು, ಅದರ ಮೇಲೆ ತ್ಯಾಜ್ಯಗಳ ವಿಂಗಡನೆ ಕುರಿತ ಚಿತ್ರ ಬಿಡಿಸಿ, ಇಲ್ಲಿ ತ್ಯಾಜ್ಯವನ್ನು ಹಾಕಬಾರದು ಎಂಬ ಸೂಚನೆ ಬರೆಸಿದ್ದರಿಂದ ಮತ್ತು ಪುರಸಭೆ ಸಿಬ್ಬಂದಿ ಈ ಸ್ಥಳದಲ್ಲಿ ಸಾರ್ವಜನಿಕರು ಕಸ ಹಾಕದಂತೆ ಗಮನ ಹರಿಸುತ್ತಿರುವುದರಿಂದ ಕೆಲ ದಿನಗಳಿಂದ ಅಲ್ಲಿ ಸ್ವಚ್ಛತೆ ಮನೆ ಮಾಡಿದೆ. ಅಲ್ಲಿದ್ದ ಕಲುಷಿತ ವಾತಾವರಣ ಮರೆಯಾಗಿದೆ.


ಜಾಗೃತಿ ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಬಿ.ವಿನಯ್‌ಕುಮಾರ್ ಗೌಡ, ಪರಿಸರ ಅಭಿಯಂತರೆ ಅನ್ನಪೂರ್ಣ ಡಿ., ಕಿರಿಯ ಅರೋಗ್ಯ ನಿರೀಕ್ಷಕಿ ಕೆ. ಶಿವರಂಜಿನಿ, ಮೇಲ್ವಿಚಾರಕಿ ಶಾಂತಾ ಹಾಗೂ ವಿಜಯ್, ಸಮುದಾಯ ಸಂಘಟಕರಾದ ಕಾವ್ಯಾಂಜಲಿ, ಮಾರಕ್ಕ, ಅನಿತಾ, ಚೈತ್ರಾ ಭಾಗವಹಿಸಿದ್ದರು.