ಸಾರಾಂಶ
ಹುಬ್ಬಳ್ಳಿ:
ಡಾ. ಬಿ.ಆರ್. ಅಂಬೇಡ್ಕರ್ ಜೀವಿತಾವಧಿಯಲ್ಲಿ ಅವರಿಗೆ ನಿರಂತರವಾಗಿ ಅಪಮಾನ ಮಾಡಿದ್ದ ಕಾಂಗ್ರೆಸ್ ಈಗ ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿಯೊಂದಿಗೆ ಅಂಬೇಡ್ಕರ್ ಹೆಸರಿನಲ್ಲಿ ಸಮಾವೇಶ ನಡೆಸುವ ಮೂಲಕ ಅವರಿಗೆ ಕ್ಷಮೆ ಕೇಳುವ ನಾಟಕ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದರು.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಹಿಂದೆ ಅಂಬೇಡ್ಕರ್ ಅವರಿಗೆ ಘನಘೋರ ಅಪಮಾನ ಮಾಡಿದೆ. ಸಂವಿಧಾನ ಶಿಲ್ಪಿಯ ಮನೆ ಸ್ಮಾರಕ ಮಾಡಲಿಲ್ಲ. ಅವರನ್ನು ಸಂಸತ್ತಿಗೆ ಬಾರದಂತೆ ನೋಡಿಕೊಂಡಿತು. ಅಂತ್ಯಕ್ರಿಯೆಗೂ ಜಾಗ ನೀಡಲಿಲ್ಲ. ಇಷ್ಟೆಲ್ಲ ಅಪಮಾನ ಮಾಡಿದ್ದ ಕಾಂಗ್ರೆಸ್ ಈಗ ಅಂಬೇಡ್ಕರ್ ಅವರಿಗೆ ಕ್ಷಮೆ ಕೇಳುತ್ತಿದೆಯೆ? ಎಂದು ಪ್ರಶ್ನಿಸಿದರು.
ಹೆದರುವ ಪ್ರಶ್ನೆಯೇ ಇಲ್ಲ:ಕಾಂಗ್ರೆಸ್ ಸಮಾವೇಶಕ್ಕೆ ನಾವು ಹೆದರುವ ಪ್ರಶ್ನೆಯೇ ಇಲ್ಲ. ಮೊದಲು ದೇಶದಲ್ಲಿ ಅವರ ಪರಿಸ್ಥಿತಿ ಏನಿದೆ ಎಂಬುದು ಅರಿತುಕೊಳ್ಳಲಿ. ಯಾವುದೇ ರೀತಿಯ ಸ್ಪಷ್ಟವಾದ ನಿಲುವು ಇಲ್ಲದ ಕಾಂಗ್ರೆಸ್ ಬಸ್ ನಿಲ್ದಾಣದಲ್ಲಿನ ಬಸ್‌ನಂತಾಗಿದೆ ಎಂದು ಕುಟುಕಿದರು.
ಕೇಂದ್ರವು ಸ್ವತಂತ್ರ ಸಂಸ್ಥೆಗಳ ಮೂಲಕ ಕಾಂಗ್ರೆಸ್ ಗುರಿಯಾಗಿಸುತ್ತಿದೆ ಎಂಬ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಹೇಳಿಕೆಗೆ ಪ್ರತಿಕ್ರಿಯಿಸಿದ ಜೋಶಿ, ನಾವು ಕಾಂಗ್ರೆಸ್‌ನ ಯಾವ ನಾಯಕರನ್ನು ಗುರಿಯಾಗಿಸಿಲ್ಲ. ಭ್ರಷ್ಟಾಚಾರದಲ್ಲಿ ತೊಡಗಿದವರು ಹೆದರಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಅಷ್ಟೇ ಎಂದರು.ರಾಹುಲ್ ಮನಸ್ಥಿತಿ ಬದಲಿಸಿ:
ದೇಶದಲ್ಲಿ ಕಾಂಗ್ರೆಸ್ ಅನ್ನು ಜನರೇ ಸ್ವಚ್ಛ ಮಾಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಲಿ. ಕೆಪಿಸಿಸಿ ಅಧ್ಯಕ್ಷರ ಸ್ಥಿತಿ ಪಕ್ಷದಲ್ಲಿ ಏನಿದೆ ಎಂಬುದು ನಮಗೂ ಗೊತ್ತಿದೆ. ಒಂದು ವೇಳೆ ಕೊಳೆ ಸ್ವಚ್ಛಗೊಳಿಸುವುದಿದ್ದರೆ ರಾಹುಲ್ ಗಾಂಧಿ ಮನಸ್ಥಿತಿ ಬದಲಿಸಿ ಎಂದು ಕುಟುಕಿದರು.ಅಕ್ಕಿ ಖರೀದಿಸಿ ನೀಡಲಿ:ಕೇಂದ್ರ ಸರ್ಕಾರವು ದೇಶದ ಜನರಿಗೆ ಸಹಕಾರಿಯಾಗಲಿ ಎಂಬ ಸದುದ್ದೇಶದಿಂದ ಉಚಿತವಾಗಿ 5 ಕೆಜಿ ಅಕ್ಕಿ ನೀಡುತ್ತಿದೆಯೇ ಹೊರತು ಯಾವುದೇ ರಾಜ್ಯಗಳಿಂದ ಅಕ್ಕಿ ನೀಡುತ್ತಿಲ್ಲ. ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ರಾಜ್ಯದ ಪ್ರತಿ ಕುಟುಂಬಕ್ಕೂ 10 ಕೆಜಿ ಉಚಿತ ಅಕ್ಕಿ ನೀಡುವುದಾಗಿ ಹೇಳಿದ್ದರು. ಆದರೆ, 5 ಕೆಜಿ ಅಕ್ಕಿಯನ್ನು ಸಹ ನೀಡಲು ಆಗುತ್ತಿಲ್ಲ. ಹಿಂದೆ ಎಫ್‌ಸಿಐನಲ್ಲಿ ಅಕ್ಕಿ ಸಂಗ್ರಹವಿರದ ವೇಳೆ ಎಫ್‌ಸಿಐ ದರದಲ್ಲಿ ಅಕ್ಕಿ ನೀಡಿದರೆ ಖರೀದಿಸಲು ಸಿದ್ಧ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಹೇಳಿತ್ತು. ಆದರೆ, ಈಗ ಅದರ ಕುರಿತು ಮಾತೇ ಎತ್ತುತ್ತಿಲ್ಲ. ನಮ್ಮ ಬಳಿ ಈಗ ರಾಜ್ಯಕ್ಕೆ ಆಗುವಷ್ಟು ಅಕ್ಕಿ ಸಂಗ್ರಹವಿದೆ. ಅಲ್ಲದೇ ಹಿಂದೆ ಪ್ರತಿ ಕೆಜಿಗೆ ₹28 ಬೆಲೆಯಲ್ಲಿ ಅಕ್ಕಿ ನೀಡಲಾಗುತ್ತಿತ್ತು. ಆದರೆ, ಈಗ ₹22.50 ನೀಡಲಾಗುತ್ತಿದೆ. ಆದರೆ, ರಾಜ್ಯದಿಂದ ಈ ವರೆಗೂ ಅಕ್ಕಿ ಖರೀದಿಸುವ ಯಾವುದೇ ಬೇಡಿಕೆ ನಮಗೆ ಬಂದಿಲ್ಲ. ನಮ್ಮ ಬಳಿ ಅಕ್ಕಿ ಸಂಗ್ರಹವಿರದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಯಂಕರವಾಗಿ ಮಾತನಾಡಿದ್ದರು. ಈಗ ರಾಜ್ಯದ ಜನರಿಗೆ ಅಕ್ಕಿ ನೀಡುವ ಮನಸ್ಸಿದ್ದರೆ ರಾಜ್ಯ ಸರ್ಕಾರ ಅಕ್ಕಿ ಖರೀದಿಸಿ ನೀಡಲಿ ಎಂದು ಜೋಶಿ ಸವಾಲು ಹಾಕಿದರು.