ಕವಿ ಕಾವ್ಯ ಬರೆಯೋದು ತನ್ನ ಕಾರಣಕ್ಕಾಗಿ ಅಲ್ಲ: ಡಾ.ಎಲ್.ಎನ್. ಮುಕುಂದರಾಜ್

| Published : May 27 2024, 01:08 AM IST

ಕವಿ ಕಾವ್ಯ ಬರೆಯೋದು ತನ್ನ ಕಾರಣಕ್ಕಾಗಿ ಅಲ್ಲ: ಡಾ.ಎಲ್.ಎನ್. ಮುಕುಂದರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಕವಿ ಕಾವ್ಯ ಬರೆಯೋದು ತನ್ನ ಕಾರಣಕ್ಕಾಗಿ ಅಲ್ಲ. ಲೇಖಕ ತನಗಾಗಿ ಬರೆಯೋದಿಲ್ಲ. ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಗೆ ಮತ ಕೊಟ್ಟು ಆಯ್ಕೆ ಮಾಡುತ್ತೇವೆ. ಲೇಖಕ ಸಮಾಜಕ್ಕೆ ಒದಗಿ ಬರುವುದು ತನ್ನ ಕಾರಣಕ್ಕಾಗಿ ಅಲ್ಲ. ಭಾಷೆ, ಸಾಮಾಜಿಕ, ರಾಜಕೀಯ ಅನಿವಾರ್ಯತೆಯಿಂದ ಒದಗಿ ಬರುತ್ತಾನೆ.

ಕನ್ನಡಪ್ರಭ ವಾರ್ತೆ ಮೈಸೂರು

ಲೇಖಕ ತಾನೇ ಸ್ವಯಂ ಆಗಿ ರೂಪುಗೊಂಡು ಸಮಾಜದ ಹಿತಕ್ಕಾಗಿ ಎಲ್ಲಾ ಸೂಕ್ಷ್ಮಗಳನ್ನು ಸಮಾಜದ ಮುಂದಿಡುತ್ತಾನೆ ಎಂದು ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಎಲ್.ಎನ್. ಮುಕುಂದರಾಜ್ ತಿಳಿಸಿದರು.

ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರಲ್ಲಿ ಚಾಮರಾಜನಗರದ ರಂಗವಾಹಿನಿ, ನೆಲೆ ಹಿನ್ನೆಲೆ ಹಾಗೂ ರಾಮ ಮನೋಹ ಲೋಹಿಯಾ ಟ್ರಸ್ಟ್ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ 12ನೇ ವರ್ಷದ ರಾಜ್ಯ ಮಟ್ಟದ ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜಶೇಖರ ಕೋಟಿ ನೆನಪು ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಕವಿ ಕಾವ್ಯ ಬರೆಯೋದು ತನ್ನ ಕಾರಣಕ್ಕಾಗಿ ಅಲ್ಲ. ಲೇಖಕ ತನಗಾಗಿ ಬರೆಯೋದಿಲ್ಲ. ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಗೆ ಮತ ಕೊಟ್ಟು ಆಯ್ಕೆ ಮಾಡುತ್ತೇವೆ. ಲೇಖಕ ಸಮಾಜಕ್ಕೆ ಒದಗಿ ಬರುವುದು ತನ್ನ ಕಾರಣಕ್ಕಾಗಿ ಅಲ್ಲ. ಭಾಷೆ, ಸಾಮಾಜಿಕ, ರಾಜಕೀಯ ಅನಿವಾರ್ಯತೆಯಿಂದ ಒದಗಿ ಬರುತ್ತಾನೆ ಎಂದು ಅವರು ಹೇಳಿದರು.

ಮುಳ್ಳೂರು ನಾಗರಾಜ್ ಕಾವ್ಯ ಪ್ರಶಸ್ತಿಗೆ ಆಯ್ಕೆಯಾಗುವ ಮುನ್ನ ಜವರಾಜ್ ಹೆಸರು ಕೇಳಿರಲಿಲ್ಲ. ಇದು ಏನನ್ನು ಸೂಚಿಸುತ್ತದೆ ಎಂದರೆ ಮತ್ತೊಬ್ಬ ಲೇಖಕನ ಬರಹ ಓದುವ ಉತ್ಸಾಹ ಇಲ್ಲವಾಗಿದೆ. ಇದು ಕನ್ನಡದ ಮಟ್ಟಿಗೆ ದೊಡ್ಡ ಕೊರತೆ ಅನಿಸುತ್ತದೆ ಎಂದರು.

ನವ್ಯ ಕಾಲದಲ್ಲಿ ಕವಿ ತನ್ನ ಕಾವ್ಯದ ಬಗ್ಗೆ ಹೇಳದೇ ಹೊಸದಾದ ಬರಹವನ್ನು ಪ್ರಚಾರ ಮಾಡುತ್ತಿದ್ದರು. ಲಂಕೇಶ್,ಅಡಿಗರು, ಅನಂತಮೂರ್ತಿ, ಕೀ.ರಂ., ಡಿ.ಆರ್. ನಾಗರಾಜು ಹೊಸ ಲೇಖಕರಿಗೆ ಪ್ರಚಾರ ಕೊಡುತ್ತಿದ್ದರು. ಅದರಿಂದಲೇ ಆ ಕಾಲದಲ್ಲಿ ಸಿನಿಮಾ ನಟರಿಗಿಂತ ಸಾಹಿತಿಗಳು ಸ್ಟಾರ್ ಗಿರಿ ಪಡೆದುಕೊಂಡಿದ್ದರು ಎಂದು ಅವರು ತಿಳಿಸಿದರು.

ಅಪ್ಪಟ ಹೋರಾಟಗಾರ:

ಪ್ರದೇಶಾಭಿವೃದ್ಧಿ ಮಂಡಳಿ ನಿರ್ದೇಶಕ ಡಿ. ಚಂದ್ರಶೇಖರಯ್ಯ ಮಾತನಾಡಿ, ಮುಳ್ಳೂರು ನಾಗರಾಜ ಅವರ ಕಾವ್ಯ ಪ್ರೀತಿ ಅಪರಿಮಿತವಾದದ್ದು, ತಗಡೂರು ಭೂ ಹೋರಾಟದ ವೇಳೆ ಗುಡಿಸಿಲಿನಲ್ಲಿಯೇ ಕವಿತೆಗಳನ್ನು ಬರೆದಿದ್ದನ್ನು ಕಂಡಿದ್ದೇನೆ. ಬದನವಾಳು ದುರಂತದ ಪುಸ್ತಕ ಬರೆದರು. ಪುರೋಹಿತಶಾಹಿ ವಿರೋಧಿಸಿದ್ದರಿಂದ ಪ್ರಶಸ್ತಿಗಳು ಬರಲಿಲ್ಲ. ಆದರೆ ಅಪ್ಪಟ ಹೋರಾಟಗಾರ ಎಂದು ಹೇಳಿದರು.

ದಸಂಸ ಮೂಲ ಹೋರಾಟಗಾರರು ಹೋರಾಟ ಮಾಡಿದ್ದರಿಂದ ವಿದ್ಯೆ, ಉದ್ಯೋಗ ಪಡೆದ ಹಲವು ಜನರಬದುಕು ಸುಧಾರಣೆ ಆಗಿದೆ. ಉದ್ಯೋಗ ಸಿಕ್ಕಿದೆ. ಆದರೆ, ವ್ಯವಸ್ಥೆ ದಿನದಿಂದದಿನವೂ ಕ್ರೂರವಾಗುತ್ತಿದೆ. ದೌರ್ಜನ್ಯದ ಪರಮಾವಧಿ ತಲುಪಿದೆ ಎಂದರು.

ಟಿ. ನರಸೀಪುರದ ಕವಿ ಎಂ. ಜವರಾಜ್ ಅವರಿಗೆ ವಿಶ್ರಾಂತ ಕುಲಪತಿ ಪ್ರೊ. ಮಹದೇವ ಅವರು ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿ ಪ್ರದಾನ ಮಾಡಿದರು. ಕವಿ ಸುಬ್ಬ ಹೊಲೆಯಾರ್ ಪ್ರಶಸ್ತಿ ಪುರಸ್ಕೃತರ ಕುರಿತು ಮಾತನಾಡಿದರು.

ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಡಾ.ಆರ್. ರಾಜು ಅಧ್ಯಕ್ಷತೆ ವಹಿಸಿದ್ದರು. ಒಡನಾಡಿ ಸ್ಟ್ಯಾನ್ಲಿ ಅವರು ರಾಜಶೇಖರ ಕೋಟಿ ಕುರಿತು ಮಾತನಾಡಿದರು. ಆಂದೋಲನ ದಿನಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ರಶ್ಮಿ ಕೋಟಿ, ನೆಲೆ ಹಿನ್ನೆಲೆ ಕೆ.ಆರ್. ಗೋಪಾಲಕೃಷ್ಣ ಇದ್ದರು. ರಂಗವಾಹಿನಿ ಸಂಸ್ಥೆ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ ಸ್ವಾಗತಿಸಿದರು. ಮುಳ್ಳೂರು ರಾಜು ನಿರೂಪಿಸಿದರು. ಗಾನಸುಮಾ ಪಟ್ಟಸೋಮನಹಳ್ಳಿ ಸಾಮರಸ್ಯ ಗೀತೆ ಹಾಡಿದರು. ಹುರುಗಲವಾಡಿ ರಾಮಯ್ಯ ಕ್ರಾಂತಿಗೀತೆ ಹಾಡಿದರು.

ಸಭಾ ಕಾರ್ಯಕ್ರಮದ ನಂತರ ಬೆಂಗಳೂರಿನ ಸಂಸ ಥಿಯೇಟರ್, ರಂಗಧರ್ಮ ತಂಡವೂ ತಿಪಟೂರು ಪ್ರದೀಪ್ ನಿರ್ದೇಶನದಲ್ಲಿ ಮಿಸೆಸ್ ಅಂಬೇಡ್ಕರ್ ನಾಟಕ ಪ್ರದರ್ಶನಗೊಂಡಿತು.