ತಿಂಗಳ ಹಿಂದೆ ಉದ್ಘಾಟನೆಯಾದ ಡಾಂಬರು ರಸ್ತೆ ಮಧ್ಯೆ ಗುಂಡಿ ಪ್ರತ್ಯಕ್ಷ!

| Published : Mar 16 2024, 01:48 AM IST

ಸಾರಾಂಶ

ಸಿದ್ದಾಪುರದ ಮುಲ್ಲೆತೋಡು ಎಂಬಲ್ಲಿ ತೋಡಿಗೆ ಕೆಲವು ತಿಂಗಳ ಹಿಂದೆ ನಿರ್ಮಿಸಿದ ಸೇತುವೆ ಮತ್ತು ರಸ್ತೆ ಡಾಂಬರೀಕರಣವನ್ನು ತಿಂಗಳ ಹಿಂದೆ ವಿರಾಜಪೇಟೆ ಶಾಸಕ ಎ.ಎಸ್‌.ಪೊನ್ನಣ್ಣ ಉದ್ಘಾಟಿಸಿದರು. ಉದ್ಘಾಟನೆಗೊಂಡ ಕೆಲವು ದಿನಗಳಲ್ಲೇ ರಸ್ತೆ ಮಧ್ಯ ಭಾಗದಲ್ಲಿ ದೊಡ್ಡ ಗುಂಡಿಯಾಗಿದ್ದು ಕೆಳಗಿರುವ ಮಣ್ಣು ಕಾಣುತ್ತಿದೆ.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಸಿದ್ದಾಪುರ ಮೈಸೂರು ರಸ್ತೆ ಕಾಮಗಾರಿ ಕಳಪೆಯಾಗಿದ್ದು ತಿಂಗಳ ಹಿಂದೆ ನಿರ್ಮಿಸಿದ ರಸ್ತೆಯ ಮಧ್ಯ ಭಾಗದಲ್ಲಿ ಗುಂಡಿ ಬಿದ್ದಿದ್ದು ಕಾಮಾಗಾರಿ ಕಳಪೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸಿದ್ದಾಪುರದ ಮುಲ್ಲೆತೋಡು ಎಂಬಲ್ಲಿ ತೋಡಿಗೆ ಕೆಲವು ತಿಂಗಳ ಹಿಂದೆ ನಿರ್ಮಿಸಿದ ಸೇತುವೆ ಮತ್ತು ರಸ್ತೆ ಡಾಂಬರೀಕರಣವನ್ನು ತಿಂಗಳ ಹಿಂದೆ ವಿರಾಜಪೇಟೆ ಶಾಸಕ ಎ.ಎಸ್‌.ಪೊನ್ನಣ್ಣ ಉದ್ಘಾಟಿಸಿದರು. ಉದ್ಘಾಟನೆಗೊಂಡ ಕೆಲವು ದಿನಗಳಲ್ಲೇ ರಸ್ತೆ ಮಧ್ಯ ಭಾಗದಲ್ಲಿ ದೊಡ್ಡ ಗುಂಡಿಯಾಗಿದ್ದು ಕೆಳಗಿರುವ ಮಣ್ಣು ಕಾಣುತ್ತಿದೆ. ರಸ್ತೆ ಡಾಂಬರೀಕರಣ ಸಂದರ್ಭ ಡಾಂಬರಿನ ಕೆಳ ಭಾಗದಲ್ಲಿ ಕಲ್ಲು ಮತ್ತು ಕಲ್ಲಿನ ಹುಡಿ ಹಾಕಿದ ನಂತರ ಡಾಂಬರೀಕರಣ ಮಾಡುತ್ತಾರೆ.ಆದರೆ ಇಲ್ಲಿ ಹಾಕಿದ ಡಾಂಬರು ಎದ್ದು ಹೋಗಿದ್ದು ಕೆಳ ಭಾಗದಲ್ಲಿನ ಮಣ್ಣು ಕಾಣುತ್ತಿದ್ದು ಕಾಮಾಗಾರಿ ಕಳಪೆಯಾಗಿರುವುದು ಕಂಡು ಬಂದಿದೆ. ಇನ್ನೆರಡು ದಿನಗಳಲ್ಲಿ ಗುಂಡಿ ದೊಡ್ಡದಾಗಿ ವಾಹನ ಸಂಚಾರಕ್ಕೆ ಆಡಚಣೆಯಾಗಬಹುದೆಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉದ್ಘಾಟನೆ ನಡೆದು ತಿಂಗಳು ಪೂರೈಸುವ ಮುನ್ನವೆ ಈ ಅವಸ್ಥೆಯಾದಲ್ಲಿ ಮಳೆಗಾಲದಲ್ಲಿ ನೀರಿನ ಹರಿವು ಜಾಸ್ತಿಯಾದರೆ ಸಂಪೂರ್ಣ ರಸ್ತೆಯೆ ಇಲ್ಲದಾಗುತ್ತದೆ. ಆದ್ದರಿಂದ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಚ್‌.ಬಿ. ರಮೇಶ್ ಒತ್ತಾಯಿಸಿದ್ದಾರೆ.-----------

ಕೆಲ ದಿನಗಳ ಹಿಂದೆ ಉದ್ಘಾಟನೆಗೊಂಡ ಸೇತುವೆ ಮತ್ತು ರಸ್ತೆ ಕಾಮಗಾರಿ ಕಳಪೆಯಾಗಿದೆ. ಶಾಸಕರು ಉದ್ಘಾಟನೆ ಸಂದರ್ಭ, ಕಾಮಗಾರಿ ಹಿಂದಿನ ಸರ್ಕಾರದ ಮೂಲಕ ನಡೆದಿದ್ದು, ಕೇವಲ ರಸ್ತೆ ಡಾಂಬರೀಕರಣ ಮಾತ್ರ ನನ್ನ ಅವಧಿಯ ಕೆಲಸ ಎಂದು ಹೇಳಿದ್ದಾರೆ. ಆದರೆ ರಸ್ತೆಯ ಮಧ್ಯಭಾಗದಲ್ಲಿ ಗುಂಡಿ ಕಾಣಿಸಿಕೊಂಡಿದ್ದು ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬುದು ಸಾಬೀತಾಗಿದೆ. ಶಾಸಕರು ಈ ಕಾಮಗಾರಿ ನಡೆಸಿದವರ ಮೇಲೆ ಕ್ರಮ ಕೈಗೊಳ್ಳಬೇಕು.

-ಎಚ್‌.ಬಿ.ರಮೇಶ್‌, ಸಿಪಿಎಂ ಜಿಲ್ಲಾ ಕಾರ್ಯದರ್ಶಿ.