ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಿಂದೂ ಸಮಾವೇಶದ ನಿಮಿತ್ತ ನಡೆದ ಶೋಭಾಯಾತ್ರೆಯಲ್ಲಿ ಹತ್ತಾರು ಜಾನಪದ ವಾದ್ಯಗಳ ಸಂಭ್ರಮ ಹಾಗೂ ದೈವ ಮಂಡಳಿಗಳು ಮೆರವಣಿಗೆಗೆ ಮೆರಗು ನೀಡಿತು.

ವೈಭವ ಚಿತ್ರಮಂದಿರದಿಂದ ಹೊರಟು ಸೋಮವಾರ ಪೇಟೆ, ಮಂಗಳವಾರ ಪೇಟೆ ಮೂಲಕ ಕಾಡಸಿದ್ಧೇಶ್ವರ ದೇವಾಲಯ ಮುಂಭಾಗದ ಕುಸ್ತಿ ಮೈದಾನದಲ್ಲಿ ಜರುಗುವ ಸಮಾವೇಶ ನಡೆಯುವ ಸ್ಥಳಕ್ಕೆ ಆಗಮಿಸಿತು. ನಾಡದೇವಿ, ಭಗವದ್ಗೀತೆ, ಸ್ವಾಮಿ ವಿವೇಕಾನಂದ, ಸುಭಾಷಚಂದ್ರ ಬೋಸ್, ಭಗತ್ ಸಿಂಗ್, ಝಾನ್ಸಿರಾಣಿ ಲಕ್ಷ್ಮೀಬಾಯಿ ಹೀಗೆ ಅನೇಕ ಚಿತ್ರಗಳ ಮೆರವಣಿಗೆ ಗಮನ ಸೆಳೆಯಿತು.

ಸಂಸ್ಕೃತಿ ಅನಾವರಣ: ನಗರ ಹಾಗೂ ಸುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಅನೇಕ ಮಹಿಳಾ ತಂಡಗಳು ನಾನಾ ಸಾಂಪ್ರದಾಯಿಕ ವೇಷ-ಭೂಷಣಗಳೊಂದಿಗೆ ದೇಸಿ ಸಂಸ್ಕೃತಿಯ ಶ್ರೀಮಂತಿಕೆ ಬಿಂಬಿಸಿದರು. ಶ್ವೇತ ವರ್ಣದ ಸೀರೆ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಕಹಳೆ ವಾದನ, ಹಲಗೆ, ಡೊಳ್ಳು, ವೀರಗಾಸೆ, ಸಮಾಳ, ಶಂಕು ವಾದನ, ಕೋಲಾಟ, ನೃತ್ಯ, ತಾಷರಂಡೋಲು, ಬೊಂಬೆ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಶೋಭಾಯಾತ್ರೆಗೆ ಮೆರಗು ನೀಡಿದವು.


ದೈವ ಮಂಡಳಿಗಳು ಭಾಗಿ:

ಇದೇ ಪ್ರಥಮ ಬಾರಿಗೆ ಸೋಮವಾರ ಪೇಟೆ ಸಮಸ್ತ ದೈವ ಮಂಡಳಿಯ ದೈವದ ಚಲಾವದಿ ಘಂಟೆಯೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮಂಗಳವಾರ ಪೇಟೆ ಹಟಗಾರ ದೈವ ಮಂಡಳಿ, ಗೌಡರು ಮತ್ತು ರೈತರ ದೈವ ಸಮಾಜ ಸೇರಿದಂತೆ ಅನೇಕ ದೈವ ಮಂಡಳಿಯ ಹಿರಿಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು.

ಶಾಸಕ ಸಿದ್ದು ಸವದಿ, ಸಿದ್ಧನಗೌಡ ಪಾಟೀಲ, ಶ್ರೀಶೈಲ ದಭಾಡಿ, ಪ್ರಶಾಂತ ಕೊಳಕಿ, ಸುರೇಶ ಚಿಂಡಕ, ಶ್ರೀಶೈಲ ಬೀಳಗಿ, ನಂದು ಗಾಯಕವಾಡ, ಶಿವು ಗುಂಡಿ, ಕಿರಣ ಭದ್ರನ್ನವರ, ಶಂಕರ ಕೆಸರಗೊಪ್ಪ, ವಿದ್ಯಾಧರ ಸವದಿ, ಶ್ರೀಶೈಲ ಯಾದವಾಡ, ಆನಂದ ಕಂಪು, ಶ್ರೀಶೈಲ ಗೊಬ್ಬಾಣಿ, ಬಸವರಾಜ ಬೆಳಗಲಿ, ಮಲ್ಲಿಕಾರ್ಜುನ ತುಂಗಳ, ಈರಣ್ಣ ಗೊಬ್ಬಾಣಿ, ಶಿವು ಬಾಗೇವಾಡಿ, ಕಲ್ಪನಾ ಖಮಿತ್ಕರ, ಶಾಂತಾ ಸೊರಗಾಂವಿ ಸೇರಿದಂತೆ ಅನೇಕ ಸಂಘ-ಸಂಸ್ಥೆ ಮುಖಂಡರು ಸಾವಿರಾರು ಜನ ಭಾಗಿಯಾಗಿದ್ದರು.