ಮತದಾನದಿಂದ ಸಮೃದ್ಧ ನಾಡು ಕಟ್ಟಲು ಸಾಧ್ಯ

| Published : Mar 29 2024, 12:46 AM IST

ಸಾರಾಂಶ

ಜನತಂತ್ರ ವ್ಯವಸ್ಥೆಯಲ್ಲಿ ಮತದಾರರ ಪಾತ್ರ ಬಹುಮುಖ್ಯವಾಗಿದ್ದು, ಪ್ರತಿಯೊಬ್ಬರೂ ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು

ಶಿರಹಟ್ಟಿ: ಮತದಾನ ಎಂಬುದು ಸಾರ್ವಜನಿಕರಿಗೆ ಸಂವಿಧಾನ ನೀಡಿದ ಮಹತ್ವದ ಅಧಿಕಾರ. ಇದನ್ನು ಸಮರ್ಪಕವಾಗಿ ಬಳಸಿಕೊಂಡು ಸಮೃದ್ಧ ಕನಸಿನ ನಾಡು ಕಟ್ಟಬೇಕು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಸುರೇಶ ಕುಂಬಾರ ಕರೆ ನೀಡಿದರು.

ಭಾರತ ಚುನಾವಣಾ ಆಯೋಗ ಜಿಲ್ಲಾಡಳಿತ ಮತ್ತು ಜಿಪಂ, ಜಿಲ್ಲಾ ಸ್ವೀಫ್ ಸಮಿತಿ ಗದಗ, ತಾಲೂಕು ಸ್ವೀಪ್ ಸಮಿತಿ ಶಿರಹಟ್ಟಿ, ಲಕ್ಷ್ಮೇಶ್ವರ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ ೨೦೨೪ರ ಅಂಗವಾಗಿ ಗುರುವಾರ ಜಾಗೃತಿ ಜಾಥಾ ಕಾರ್ಯಕ್ರಮ ನಡೆಸಿ ಮಾತನಾಡಿದರು.

ಜನತಂತ್ರ ವ್ಯವಸ್ಥೆಯಲ್ಲಿ ಮತದಾರರ ಪಾತ್ರ ಬಹುಮುಖ್ಯವಾಗಿದ್ದು, ಪ್ರತಿಯೊಬ್ಬರೂ ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಚುನಾವಣೆಗಳಲ್ಲಿ ಮತದಾನ ಮಾಡುವುದು ಪ್ರತಿಯೊಬ್ಬನಾಗರಿಕನ ಸಂವಿಧಾನಬದ್ದ ಹಕ್ಕಾಗಿದೆ. ಎಲ್ಲರೂ ಕಡ್ಡಾಯವಾಗಿ ಪವಿತ್ರವಾದ ಮತದಾನ ಚಲಾಯಿಸಬೇಕು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಪ್ರಜಾಸತಾತ್ಮಕ ಮೌಲ್ಯಗಳನ್ನು ಬೇರುಮಟ್ಟದಲ್ಲಿ ಸ್ವೀಕರಿಸಿ ನಮ್ಮ ಜೀವನದಲ್ಲಿ ಚಾಚು ತಪ್ಪದೇ ಅಳವಡಿಸಿಕೊಳ್ಳಬೇಕು. ಯುವಕರು ಕಡ್ಡಾಯವಾಗಿ ಮತದಾರರ ನೋಂದಣಿ ಪಟ್ಟಿಗೆ ಸೇರ್ಪಡೆಯಾಗಿ ಉತ್ತಮ ನಾಯಕನನ್ನು ಆಯ್ಕೆ ಮಾಡಬೇಕು. ಪ್ರಜಾಪ್ರಭುತ್ವ ಸುಭದ್ರಗೊಳಿಸಲು ಪ್ರತಿಯೊಂದು ಮತವೂ ಕೂಡ ಅಮೂಲ್ಯವಾದದ್ದು ಆ ಮತದ ಬಗ್ಗೆ ಜಾಗೃತರಾಗಬೇಕು ಎಂದರು.

ಪ್ರಜಾಪ್ರಭುತ್ವದಲ್ಲಿ ದೃಢವಿಶ್ವಾಸವುಳ್ಳ ಭಾರತದ ಪೌರರಾದ ನಾವು ನಮ್ಮ ದೇಶದ ಪ್ರಜಾಸತಾತ್ಮಕ ಸಂಪ್ರದಾಯ ಮತ್ತು ಮುಕ್ತ ನ್ಯಾಯ ಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆ ಎತ್ತಿ ಹಿಡಿಯುತ್ತೇವೆಂದು ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭಿತಿಯಿಂದ ಮತ್ತು ಧರ್ಮ, ಜನಾಂಗ, ಜಾತಿ, ಮತ ಭಾಷೆ ಅಥವಾ ಯಾವುದೇ ಪ್ರೇರಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೇ ಮತ ಚಲಾಯಿಸುತ್ತೇನೆಂದು ಎಲ್ಲರೂ ಪ್ರತಿಜ್ಞೆ ಮಾಡಬೇಕು ಎಂದರು.

ಕೃಷಿ ಇಲಾಖೆ ಅಧಿಕಾರಿ ರೇವಣೆಪ್ಪ ಮನಗೂಳಿ ಮಾತನಾಡಿ, ನಿವೃತ್ತ ಚುನಾವಣಾ ಆಯುಕ್ತ ಟಿ.ಎನ್.ಶೇಷನ್ ಅವರು ಭಾರತದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಸೇವೆ ಹಾಗೂ ಕಾರ್ಯಗಳನ್ನು ಸ್ಮರಿಸಿದ ಅವರು, ಗುಣಾತ್ಮಕ ಮತ್ತು ಪಾರದರ್ಶಕ ಮತದಾನ ಜರುಗಲು ಪ್ರತಿಯೊಬ್ಬರಲ್ಲಿ ಜಾಗೃತಿ, ತಿಳಿವಳಿಕೆ ಮೂಡಿಸಬೇಕು. ಆಸೆ, ಆಮಿಷಗಳಿಗೆ ಬಲಿಯಾಗದೇ ದೇಶದ ಭವಿಷ್ಯ ನಿರ್ಧರಿಸುವ ಶಕ್ತಿ ನಿಮ್ಮ ಕೈಯಲ್ಲೇ ಇದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಯೊಬ್ಬರೂ ಸರಿಯಾದ ವ್ಯಕ್ತಿಗೆ ಮತ ನೀಡಬೇಕು ಎಂದು ಹೇಳಿದರು.

ಮತಹಕ್ಕು ಮಾರಾಟ ದ್ರೋಹದ ಕೆಲಸ:

ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ನೀಡಿರುವ ಮತದಾನದ ಹಕ್ಕನ್ನು ಚುನಾವಣೆಯಲ್ಲಿ ಯಾರಾದರೂ ಮಾರಿಕೊಂಡರೆ ಅದಕ್ಕಿಂತಲೂ ದೊಡ್ಡ ದ್ರೋಹದ ಕೆಲಸ ಮತ್ತೊಂದಿಲ್ಲ. ಸಂವಿಧಾನದಲ್ಲಿ ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಮತದಾನದ ಹಕ್ಕು ನೀಡಲಾಗಿದೆ. ಅಮೂಲ್ಯವಾದ ಮತವನ್ನು ಯಾರಾದರೂ ಮಾರಿಕೊಳ್ಳುತ್ತಾರೆಂದರೆ ನಿಜವಾಗಿಯೂ ದ್ರೋಹದ ಕೆಲಸ ಎಂದರು.

ವಿದ್ಯಾವಂತರು, ಆರ್ಥಿಕವಾಗಿ ಸಬಲರಿದ್ದವರೇ ಇಂದು ಆಸೆ, ಆಮಿಷೆಗಳಿಗೆ ಬಲಿಯಾಗಿ ತಮ್ಮತನ ಮಾರಿಕೊಳ್ಳುತ್ತಿರುವ ಕೆಟ್ಟ ವ್ಯವಸ್ಥೆ ಕಣ್ಣಾರೆ ಕಾಣುತ್ತಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನವೇ ಪ್ರಬಲ ಅಸ್ತ್ರವಾಗಿದ್ದು ಪ್ರತಿಯೊಬ್ಬರೂ ಕಡ್ಡಾಯವಾಗಿ ವಿವೇಚನೆಯಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಧರ್ಮ, ಜಾತಿ, ಪ್ರೇರಣೆಗೆ ಬಲಿಯಾಗದೇ ಭಾರತ ವಿಶ್ವದಲ್ಲಿಯೇ ದೊಡ್ಡ ಪ್ರಜಾಪ್ರಭುತ್ವ ಹೊಂದಿದ ದೇಶವಾಗಿದೆ. ೧೮ ವರ್ಷ ಮೇಲ್ಪಟ್ಟವರು ಮತದಾರ ಪಟ್ಟಿಯಿಂದ ಹೊರಗುಳಿಯದೇ ಎಲ್ಲರೂ ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ ಕಡ್ಡಾಯವಾಗಿ ಮತ ಚಲಾವಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು. ವಿವಿಧ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪಟ್ಟಣದಲ್ಲಿ ಮತದಾನ ಕುರಿತು ಜಾಗೃತಿ ಜಾಥಾ ನಡೆಸಿದರು.