ಕ್ಷುಲ್ಲಕ ಕಾರಣದಿಂದ ಜಗಳ ನಡೆದು ವ್ಯಕ್ತಿಯೊಬ್ಬ ಚಾಕುವಿನಿಂದ ಹೊಟ್ಟೆಗೆ ತಿವಿದ ಪರಿಣಾಮ ಯುವಕ ಗೋಪಾಲನಾಯ್ಕ್‌ (40) ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ

ಪಾವಗಡ: ಕ್ಷುಲ್ಲಕ ಕಾರಣದಿಂದ ಜಗಳ ನಡೆದು ವ್ಯಕ್ತಿಯೊಬ್ಬ ಚಾಕುವಿನಿಂದ ಹೊಟ್ಟೆಗೆ ತಿವಿದ ಪರಿಣಾಮ ಯುವಕ ಗೋಪಾಲನಾಯ್ಕ್‌ (40) ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ಘಟನೆಗೆ ಸಂಬಂಧಪಟ್ಟಂತೆ ನಾಲ್ವರಿಗೆ ಗಂಭೀರ ಗಾಯಗಳಾದ ಘಟನೆ ಗುರುವಾರ ರಾತ್ರಿ ತಾಲೂಕಿನ ನಾಗಲಮಡಿಕೆ ಹೋಬಳಿಯ ಭೂಪೂರು ತಾಂಡದಲ್ಲಿ ನಡೆದಿದೆ.

ಪಾವಗಡ ತಾಲೂಕು ಬಿ.ಕೆ.ಹಳ್ಳಿ ಗ್ರಾಪಂ ವ್ಯಾಪ್ತಿಯ ಭೂಪೂರು ತಾಂಡದ ವಾಸಿಗಳಾದ ಗೋಪಾಲನಾಯ್ಕ್‌ ಹಾಗೂ ಹನಿ ನೀರಾವರಿ ಡ್ರಿಪ್‌ ವಿತರಣೆಯ ಮಾಲೀಕ ನಾಗರಾಜ್‌ ನಾಯ್ಕ್‌ (ನಾಗರಿ) ಎಂಬುವರ ಮಧ್ಯೆ ಹಣಕಾಸಿನ ವ್ಯವಹಾರವಿತ್ತು ಎನ್ನಲಾಗಿದೆ. ಗೋಪಾಲನಾಯ್ಕ್ ನಾಗರಾಜ್ಕೊ ನಾಯ್ಕ್ ನನ್ನು ಸಾಲವಾಗಿ ಕೊಟ್ಟ ಹಣ ವಾಪಸ್ ಕೇಳಿದ ಹಿನ್ನೆಲೆ ರಾತ್ರಿ ಗ್ರಾಮದಲ್ಲಿ ಇಬ್ಬರ ನಡುವೆ ಜಗಳ ನಡೆದಿದೆ. ಒಬ್ಬರಿಗೂಬ್ಬರು ಹೊಡೆದಾಡಿಕೊಂಡಿದ್ದು, ಸಾಲವಾಗಿ ಹಣ ಪಡೆದಿದ್ದ ನಾಗರಾಜ್‌ನಾಯ್ಕ್‌ ಮನೆಯಲ್ಲಿದ್ದ ಚಾಕು ತಂದು ಗೋಪಾಲನಾಯ್ಕ್ ನ ಹೊಟ್ಟೆಗೆ ತಿವಿದ ಪರಿಣಾಮ ಗೋಪಾಲನಾಯ್ಕ್‌ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಜಗಳದಲ್ಲಿ ಆರೋಪಿ ನಾಗರಾಜ್‌ನಾಯ್ಕ್‌ನಿಗೂ ಗಂಭೀರ ಗಾಯಗಳಾಗಿದ್ದು, ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದಿದೆ. ಘಟನೆಗೆ ಸಂಬಂಧಿಸಿದಂತೆ ಮೃತನ ಕುಟುಂಬದವರು ನೀಡಿದ ದೂರಿನ ಮೇರೆಗೆ ತಾಲೂಕಿನ ತಿರುಮಣಿ ಸಿಪಿಐ ಗಿರೀಶ್‌ ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಮಾಹಿತಿ ಪಡೆದು ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.