ವಿಮಾನ ನಿಲ್ದಾಣದಲ್ಲಿ ವಿಕಿರಣ ಸೋರಿಕೆ ಅಣಕು ಪ್ರದರ್ಶನ
KannadaprabhaNewsNetwork | Published : Oct 21 2023, 12:30 AM IST
ವಿಮಾನ ನಿಲ್ದಾಣದಲ್ಲಿ ವಿಕಿರಣ ಸೋರಿಕೆ ಅಣಕು ಪ್ರದರ್ಶನ
ಸಾರಾಂಶ
ಕುಂದಾಣ: ವಿಪತ್ತುಗಳು ಆಕಸ್ಮಿಕವಾಗಿ ಸಂಭವಿಸುವುದರಿಂದ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ವಿಪತ್ತುಗಳನ್ನು ಎದುರಿಸಲು ಸದಾ ಸನ್ನದ್ದರಾಗಿರಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಡಾ.ಶಿವಶಂಕರ್ ಹೇಳಿದರು.
ಕುಂದಾಣ: ವಿಪತ್ತುಗಳು ಆಕಸ್ಮಿಕವಾಗಿ ಸಂಭವಿಸುವುದರಿಂದ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ವಿಪತ್ತುಗಳನ್ನು ಎದುರಿಸಲು ಸದಾ ಸನ್ನದ್ದರಾಗಿರಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಡಾ.ಶಿವಶಂಕರ್ ಹೇಳಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಡಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿರುವ ಹಜ್ ಟರ್ಮಿನಲ್ ಪ್ರದೇಶದಲ್ಲಿ ವಿಕಿರಣ ಸೋರಿಕೆ ಸ್ಪಂದನ ಮತ್ತು ಮೌಲ್ಯೀಕರಣದ ಬಗ್ಗೆ ಅಣಕು ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಲ್ಲಾ ಇಲಾಖೆಗಳು ವಿಪತ್ತುಗಳು ಸಂಭವಿಸಿದಾಗ ಸರ್ವಸನ್ನದ್ಧರಾಗಿರಲು ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ನೈಜ ಘಟನೆಯಂತೆ ಸೃಷ್ಟಿಸಿರುವ ಈ ಅಣಕು ಪ್ರದರ್ಶನ ವಿಪತ್ತು ಸಂಭವಿಸಿದಾಗ ಇಲಾಖೆಗಳ ಜವಾಬ್ದಾರಿಯ ಅರಿವು ಮೂಡಿಸಲು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಕಾರ್ಯಾಚರಣೆಯಲ್ಲಿ ಎನ್ ಡಿ ಆರ್ ಎಫ್ ತಂಡ, ಡಿಐಎಫ್, ಅಗ್ನಿಶಾಮಕ, ಆರ್ಮಿ, ಎರ್ ಫೋರ್ಸ್, ಪೊಲೀಸ್ ತಂಡಗಳು ರಕ್ಷಣೆಗೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದರು. ಎನ್ ಡಿ ಆರ್ ಎಸ್ ತಂಡ ವಿಕಿರಣ ಸೋರಿಕೆಯಿಂದ ಹಾನಿಗೊಳಗಾದ ಸಂತ್ರಸ್ತರನ್ನು ರಕ್ಷಿಸಿದರು. ಅಂತಿಮವಾಗಿ ಕಾರ್ಯಾಚರಣೆಯ ಸಂಪೂರ್ಣ ಮಾಹಿತಿಯನ್ನು ಆಯಾ ತಂಡಗಳ ಮುಖ್ಯಸ್ಥರು ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ ನಂತರ ಜಿಲ್ಲಾಧಿಕಾರಿ ವಿಪತ್ತು ನಿರ್ವಹಣೆ ಕಾರ್ಯಚರಣೆ ಯಶಸ್ವಿಯಾಗಿ ಮುಕ್ತಾಯವಾಗಿದೆ ಎಂದು ಘೋಷಿಸಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿವೃತ್ತ ಬ್ರಿಗೇಡಿಯರ್ ಮತ್ತು ಸಲಹೆಗಾರ ಠಾಕೂರ್, ಡಿಐಎ ಮುಖ್ಯಸ್ಥ ಡಾ.ಕೆ.ಎಚ್ ದೇವದಾಸೀಯ, ಡಿಜಿಎಜಿ ಮುಖ್ಯಸ್ಥರು, ಡಿಎಇ ವಿಜ್ಞಾನಿಗಳು, ಉಪವಿಭಾಗಾಧಿಕಾರಿ ಶ್ರೀನಿವಾಸ್, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವಿಪತ್ತು ನಿರ್ವಹಣಾ ಪರಿಣಿತ ನಿತಿನ್ ಕಾಲ್ವಾ, ಬೆಂಗಳೂರು ಗ್ರಾಮಾಂತರ ಜಿಲ್ಲಾ ವಿಪತ್ತು ನಿರ್ವಹಣಾ ಬಸವರಾಜು, ಕಾರ್ಖಾನೆಗಳು ಮತ್ತು ಬಾಯ್ಲರ್ ಇಲಾಖೆ ಉಪನಿರ್ದೇಶಕ ಸೋಮಶೇಖರ್, ಜಿಲ್ಲಾ , ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.