ಸಾರಾಂಶ
ನರೇಗಲ್ಲ ಬೀಚಿ ಬಳಗದ ದಶಮಾನ ಸಂಭ್ರಮ ಕಾರ್ಯಕ್ರಮ
ನರೇಗಲ್ಲ: ''''ಭೀಮಸೇನ ರಾಯಸಂ'''' ಎನ್ನುವ ವ್ಯಕ್ತಿ ಬೀಚಿ ಎಂಬ ಹೆಸರಿನೊಂದಿಗೆ ಈ ನಾಡಿನಲ್ಲಿ ಜನಿಸಿ, ತಮ್ಮ ಸಂದೇಶಗಳನ್ನು ಹಾಸ್ಯದ ಮೂಲಕ ಜನರಿಗೆ ಉಣ ಬಡಿಸಿದರು. ಅವರ ಹಾಸ್ಯದಲ್ಲಿ ವಿಡಂಬನೆ ಇತ್ತಾದರೂ ಅದರಲ್ಲಿ ಅರ್ಥ ಇರುತ್ತಿತ್ತು. ಹೀಗಾಗಿ ಬೀಚಿ ಕನ್ನಡ ನಾಡಿನ ಅಪರೂಪದ ಸಾಹಿತಿಯಾಗಿದ್ದಾರೆ ಎಂದು ನಾಡಿನ ಖ್ಯಾತ ಭಾಷಣಕಾರ ಗಂಗಾವತಿ ಪ್ರಾಣೇಶ್ ಹೇಳಿದರು.ಅವರು ಸ್ಥಳೀಯ ಹಿರೇಮಠದ ಸಭಾ ಭವನದಲ್ಲಿ ಜರುಗಿದ ನರೇಗಲ್ಲ ಬೀಚಿ ಬಳಗದ ದಶಮಾನ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಬಳಗದ ಹಿಂದಿನ ಅಧ್ಯಕ್ಷರನ್ನು ಸನ್ಮಾನಿಸಿ ಮಾತನಾಡಿದರು.
ಮನುಷ್ಯ ಬೆಳೆದಂತೆ ಅವನ ಆಯುಷ್ಯ ಕಡಿಮೆಯಾಗುತ್ತ ಹೋಗುತ್ತದೆ. ಆದರೆ ಸಂಘಟನೆಗಳು ಬೆಳೆದಂತೆ ಅವುಗಳ ಆಯುಷ್ಯ ಹೆಚ್ಚಾಗುತ್ತದೆ. ಆದ್ದರಿಂದಲೆ ಸಂಘ-ಸಂಸ್ಥೆಗಳು ಹತ್ತು, ಇಪ್ಪತ್ತೈದು, ಐವತ್ತು ಹೀಗೆ ವರ್ಷಗಳನ್ನು ಹೆಚ್ಚಿಸಿಕೊಳ್ಳುತ್ತ ಹೋದಂತೆ ಅವುಗಳ ದಶಮಾನೋತ್ಸವ, ಬೆಳ್ಳಿ ಮಹೋತ್ಸವ, ಸುವರ್ಣ ಮಹೋತ್ಸವ, ಅಮೃತ ಮಹೋತ್ಸವ, ಶತಮಾನೋತ್ಸವಗಳನ್ನು ಆಚರಿಸುವ ರೂಢಿ ನಮ್ಮಲ್ಲಿದೆ. ನರೇಗಲ್ಲದ ಈ ಬೀಚಿ ಬಳಗವು ಶತಮಾನೋತ್ಸವವನ್ನು ಆಚರಿಸುವಂತಾಗಬೇಕು. ಹೀಗಾಗಬೇಕಾದರೆ ನರೇಗಲ್ಲ ಮತ್ತು ಸುತ್ತಲಿನ ಗ್ರಾಮಗಳ ಎಲ್ಲ ಜನತೆ ಈ ಸಂಘಟನೆಯ ಸದಸ್ಯತ್ವ ಪಡೆಯಬೇಕೆಂದು ಪ್ರಾಣೇಶ್ ಹೇಳಿದರು.ಬಿ. ಪ್ರಾಣೇಶ ತಮ್ಮ ಎಂದಿನ ಹಾಸ್ಯದ ಮಾತುಗಳ ಧಾಟಿಯಲ್ಲಿ ಅನೇಕ ಪ್ರಸಂಗಗಳನ್ನು ಹೇಳಿ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು. ಇದಕ್ಕೂ ಮುಂಚೆ ನಿವೃತ್ತ ಪ್ರಾಚಾರ್ಯ ಗದಗನ ಅನಿಲ ವೈದ್ಯ ಮಾತನಾಡಿ, ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು. ಇನ್ನಿಬ್ಬರು ಮುಖ್ಯ ಭಾಷಣಕಾರರಾದ ಬಸವರಾಜ ಮಹಾಮನಿ ಮತ್ತು ನರಸಿಂಹ ಜೋಷಿಯವರ ಜುಗಲಬಂದಿ ಕಾರ್ಯಕ್ರಮವು ಪ್ರೇಕ್ಷಕರು ಬಿದ್ದು ಬಿದ್ದು ನಗುವಂತೆ ಮಾಡಿತು.
ಬೀಚಿ ಬಳಗದ ಈ ಹಿಂದಿನ ಅಧ್ಯಕ್ಷರುಗಳಾದ ಡಿ. ಎ. ಅರವಟಗಿಮಠ, ಎಂ. ಎಸ್. ದಢೇಸೂರಮಠ, ಅರುಣ ಬಿ. ಕುಲಕರ್ಣಿ, ಡಾ. ಎಸ್. ಜಿ. ಗುರಿಕಾರ, ಎಸ್. ಸಿ. ಗುಳಗಣ್ಣವರ, ಡಾ. ಆರ್. ಕೆ. ಗಚ್ಚಿನಮಠ, ಸುರೇಶ ಹಳ್ಳಿಕೇರಿ , ಸ್ಮರಣ ಸಂಚಿಕೆಯ ಸಂಪಾದಕ ಡಾ. ಕಲ್ಲಯ್ಯ ಹಿರೇಮಠ ಅವರುಗಳನ್ನು ಗಂಗಾವತಿ ಪ್ರಾಣೇಶ್ ಮತ್ತು ವೇದಿಕೆಯ ಮೇಲಿನ ಪೂಜ್ಯರು, ಗಣ್ಯರು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್, ಮಲ್ಲಿಕಾರ್ಜುನ ಶಿವಾಚಾರ್ಯರು, ಹಾಲಕೆರೆಯ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳವರು, ಬೀಚಿ ಬಳಗದ ಅಧ್ಯಕ್ಷ ಕೆ. ಎಸ್. ಕಳಕಣ್ಣವರ, ಮಿಥುನ ಪಾಟೀಲ, ಗಣ್ಯರಾದ ಡಾ. ಶೇಖರ ಡಿ. ಸಜ್ಜನರ, ಡಾ. ಕೆ. ಬಿ. ಧನ್ನೂರ, ಎಸ್. ಎ. ವಿ.ವಿ. ಪಿ. ಸಮಿತಿಯ ಆಡಳಿತಾಧಿಕಾರಿ ಎನ್. ಆರ್. ಗೌಡರ, ಇನ್ನೂ ಅನೇಕರಲ್ಲದೆ ಗದಗ, ರೋಣ, ಹಾಲಕೆರೆ ಕೋಟುಮಚಗಿ, ಅಬ್ಬಿಗೆರೆ, ತೋಟಗಂಟಿ, ಲಕ್ಕುಂಡಿ, ಇನ್ನಿತರ ಗ್ರಾಮಗಳ ಅನೇಕ ಗಣ್ಯರು ಉಪಸ್ಥಿತರಿದ್ದರು.