ಸಾರಾಂಶ
ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ೨೦೨೪-೨೫ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ರಿಯಲ್ ಹೀರೋ ಎಂಬ ವಿನೂತನ ಸಾಮಾಜಿಕ ಕಳಕಳಿಯ ಕಾರ್ಯಕ್ರಮ ಉದ್ಘಾಟನೆಗೊಂಡಿತು.
ಕನ್ನಡಪ್ರಭ ವಾರ್ತೆ ಉಡುಪಿ
ಇಂದಿನ ಶಿಕ್ಷಿತರೇ ಅನಾಗರಿಕರಂತೆ ವರ್ತಿಸುತ್ತಿದ್ದು, ಅಶಿಕ್ಷಿತರೇ ಸುಸಂಸ್ಕೃತ ಜೀವನ ನಡೆಸುತ್ತಿದ್ದಾರೆ. ಶಿಕ್ಷಣವು ನಿಸ್ವಾರ್ಥತೆ, ಸೌಹಾರ್ದತೆ, ಸಂಸ್ಕಾರ, ಮಾನವೀಯತೆ, ಸೇವಾ ಮನೋಭಾವನೆ, ತಾಳ್ಮೆ, ತ್ಯಾಗ ಇವೇ ಮೊದಲಾದ ಸದ್ಗುಣಗಳನ್ನು ಬೆಳೆಸಬೇಕು. ಪ್ರತಿಯೊಬ್ಬರೂ ತನ್ನ ಸಾಮಾಜಿಕ ಋಣ ತೀರಿಸಲು ಸಂಪಾದನೆಯ ಒಂದಂಶ ಮೀಸಲಿಡಬೇಕು. ಸರಳತೆಯಿಂದ ಜೀವನ ನಡೆಸಿ ಸಮಾಜಕ್ಕೆ ಉಪಕಾರಿಯಾಗುವವನೇ ರಿಯಲ್ ಹೀರೋ ಎಂದು ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ಹೇಳಿದರು.ಅವರು ನಗರದ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ೨೦೨೪-೨೫ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ರಿಯಲ್ ಹೀರೋ ಎಂಬ ವಿನೂತನ ಸಾಮಾಜಿಕ ಕಳಕಳಿಯ ಕಾರ್ಯಕ್ರಮ ಉದ್ಘಾಟಿಸಿದರು.ಇಂದಿನ ಯುವ ಪೀಳಿಗೆ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವುದು ಖೇದನೀಯ. ಯುವಕರು ಸಾಂತ್ವನ ಕೇಂದ್ರಗಳಲ್ಲಿ, ಮಾನಸಿಕ ಖಿನ್ನತೆಗೆ ಒಳಗಾಗಿ ಆಸ್ಪತ್ರೆಗಳಲ್ಲಿ ಕಾಣಸಿಗುವುದು ನೋಡಿದರೆ ಭವಿಷ್ಯದ ಯುವ ಜನತೆ ಎತ್ತ ಕಡೆ ಸಾಗುತ್ತಲಿದೆ ಎಂಬ ಆತಂಕವಾಗುತ್ತಿದೆ. ಆದ್ದರಿಂದ ಎನ್‌ಎಸ್‌ಎಸ್ ಘಟಕಗಳು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಉತ್ತಮ ವೇದಿಕೆಯಾಬೇಕು. ಹೆತ್ತವರಿಗೆ ಒಳ್ಳೆಯ ಮಗ, ಮಗಳಾಗಿ ಸಮಾಜಕ್ಕೆ ಒಬ್ಬೊಳ್ಳೆ ಪ್ರಜೆಯಾಗಿ ಸಹಕಾರ, ಸಹಬಾಳ್ವೆ ಮತ್ತು ಸರಳ ಜೀವನ ನಡೆಸಬೇಕೆಂದು ಕರೆಯಿತ್ತರು.ಈ ಸಂದರ್ಭ ಕಾಲೇಜಿನ ಹಳೆ ವಿದ್ಯಾರ್ಥಿ ಪ್ರೇಮ್ ಸಾಯಿ ಸಿದ್ಧಪಡಿಸಿದ್ದ ವಿಶು ಶೆಟ್ಟಿಯವರ ಸಾಮಾಜಿಕ ಜೀವನದ ಸಾಕ್ಷ್ಯ ಚಿತ್ರ ಪ್ರದರ್ಶಿಸಲ್ಪಟ್ಟಿತು. ನಂತರ ಕಾಲೇಜಿನ ವತಿಯಿಂದ ಸಾಮಾಜಿಕ ಕಾರ್ಯಕರ್ತ ರಿಯಲ್ ಹೀರೋ ವಿಶು ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.ಎನ್ಎಸ್ಎಸ್ ಘಟಕದ ವಿದ್ಯಾರ್ಥಿ ಪ್ರತಿನಿಧಿಗಳಾಗಿ ಆಯ್ಕೆಯಾದ ವಿನಾಯಕ್, ಪ್ರತೀಶ್, ಶುಭನ್, ನಿಹಾರ್, ಕೃತಿಕಾ, ಸಿಂಚನಾ, ವೀಕ್ಷಿತಾ, ಭೂಮಿಕಾ ಅವರನ್ನು ಅಭಿನಂದಿಸಲಾಯಿತು.ಕಾಲೇಜಿನ ಪ್ರಾಚಾರ್ಯರಾದ ಆಶಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ರಾ. ಸೇ. ಯೋಜನೆಯ ಯೋಜನಾಧಿಕಾರಿ ರಾಜೇಶ್ ಕುಮಾರ್ ಪ್ರಸ್ತಾವನೆಯ ಮೂಲಕ ಸ್ವಾಗತಿಸಿದರು, ಸಹ ಯೋಜನಾಧಿಕಾರಿ ಚಂದ್ರಶೇಖರ್ ವಂದಿಸಿದರು. ವಾಣಿಜ್ಯ ಉಪನ್ಯಾಸಕ ರಾಘವೇಂದ್ರ ಜಿ. ಜಿ. ಕಾರ್ಯಕ್ರಮ ನಿರೂಪಿಸಿದರು.