ಸಾರಾಂಶ
ಕನ್ನಡಪ್ರಭ ವಾರ್ತೆ ಇಳಕಲ್ಲ
ಚುನಾವಣೆಗಳಲ್ಲಿ ಗೆದ್ದವರೆಲ್ಲರೂ ನಾಯಕರಾಗಲು ಸಾಧ್ಯವಿಲ್ಲ. ಯಾರಲ್ಲಿ ಸಹನೆ, ಪ್ರೀತಿ, ಕರುಣೆ, ಪರೋಪಕಾರ ಗುಣ, ನೊಂದವರ ವೇದನೆ ನಿವಾರಿಸುವ ಮಾನವೀಯ ಗುಣ ಇರುತ್ತದೆಯೋ ಅಂತವರು ಮಾತ್ರ ನಾಯಕರಾಗುತ್ತಾರೆ ಮತ್ತು ಅವರು ಜನಮಾನಸದಲ್ಲಿ ಸ್ಥಿರವಾಗಿ ಉಳಿಯುತ್ತಾರೆ ಎಂದು ಇಳಕಲ್ಲ-ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಹೇಳಿದರು.ನಗರದ ಶ್ರೀ ವಿಜಯಮಹಾಂತೇಶ ಅನುಭವ ಮಂಟಪದಲ್ಲಿ ಶ್ರೀ ಎಸ್.ಆರ್. ಕಾಶಪ್ಪನವರ ಪ್ರತಿಷ್ಠಾನದಿಂದ ಜನಾನುರಾಗಿ ಮುತ್ಸದ್ದಿ ನಾಯಕ ಮಾಜಿ ಸಚಿವ ಲಿಂ.ಎಸ್.ಆರ್. ಕಾಶಪ್ಪನವರ ೨೨ನೇ ಪೂಣ್ಯ ಸ್ಮರಣೆ ಹಾಗೂ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಪ್ರತಿಭಾನ್ವಿತರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಇಂತಹ ನಾಯಕತ್ವ ಗುಣಗಳಿಂದಾಗಿ ಲಿಂ.ಎಸ್.ಆರ್. ಕಾಶಪ್ಪನವರ ೨೨ ವರ್ಷಗಳಾದರೂ ಅವರು ಈಗಲೂ ಜನಮಾನಸದಲ್ಲಿ ಉಳಿದಿದ್ದಾರೆ. ಅವರ ಪರಂಪರೆಯನ್ನೇ ಶಾಸಕ ವಿಜಯಾನಂದ ಕಾಶಪ್ಪನವರ ಅನುಸರಿಸಿ ಜನಾನುರಾಗಿ ಆಗುತ್ತಿದ್ದಾರೆ ಎಂದು ಹೇಳಿದರು.ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ನಮ್ಮ ತಂದೆಯವರು ನೀರಾವರಿ ಮತ್ತು ಶಿಕ್ಷಣ ಈ ಎರಡು ಕನಸುಗಳನ್ನು ನನ್ನ ಅವಧಿಯಲ್ಲಿ ಈಡೇರಿಸುತ್ತೇನೆ. ಪ್ರಾಥಮಿಕ ಹಂತದಿಂದ ಪದವಿಪೂರ್ವ ಕಾಲೇಜಿನವರೆಗೂ ಪ್ರತಿಯೊಂದು ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್‌ಗಳನ್ನು, ಪ್ರತಿ ಹೋಬಳಿಗೂ ಪ್ರೌಢಶಾಲೆಗಳನ್ನು ಪ್ರಾರಂಭಿಸುತ್ತೇನೆ. ಮಹಿಳಾ ಪದವಿ ಕಾಲೇಜುಗಳನ್ನು ತರುವುದಾಗಿ ಹೇಳಿದ ಅವರು, ಶೀಘ್ರದಲ್ಲಿ ನಂದವಾಡಗಿ ಏತ ನೀರಾವರಿಗೆ ಇನ್ನಷ್ಟು ಅನುದಾನ ತಂದು ಕಾರ್ಯ ಪ್ರಾರಂಭಿಸುತ್ತೇನೆ. ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ನಮ್ಮ ಪ್ರತಿಷ್ಠಾನದ ಮೂಲಕ ದತ್ತು ಪಡೆದು ಅವರ ಮುಂದಿನ ಶಿಕ್ಷಣಕ್ಕೆ ಸಹಾಯ ಒದಗಿಸುತ್ತಿದ್ದು, ನಿಗಮದ ಮೂಲಕ ಪ್ರತಿಭಾನ್ವಿತರಿಗೆ ದೇಶ ಹಾಗೂ ಹೊರದೇಶಗಳಲ್ಲೂ ಕಲಿಯಲು ಸಾಕಷ್ಟು ಅವಕಾಶವಿದ್ದು, ಅರ್ಹರು ಅರ್ಜಿಗಳನ್ನು ಹಾಕುವ ಮೂಲಕ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಶಿರೂರ ಮಹಾಂತ ತೀರ್ಥದ ಡಾ. ಬಸವಲಿಂಗ ಸ್ವಾಮಿಗಳು ಆಶೀರ್ವಚನ ನೀಡಿ, ನಿಮ್ಮ ಅವಧಿಯಲ್ಲಿ ಎಲ್ಲ ಪಂಗಡಗಳನ್ನು ಒಂದುಗೂಡಿಸಿ ಜನಮಾನಸದಲ್ಲಿ ಉಳಿಯುವಂತ ಕಾರ್ಯ ನಿರ್ವಹಿಸುವಂತೆ ಶಾಸಕರಿಗೆ ಸಲಹೆ ನೀಡಿದರು.ಕಾಂಗ್ರೆಸ್ ಮುಖಂಡರಾದ ವೆಂಕಟೇಶ ಸಾಕಾ, ಮಹಾಂತೇಶ ಆವಾರಿ, ಉಸ್ಮಾನಗನಿ ಹುಮ್ನಾಬಾದ್ ಮಾತನಾಡಿದರು. ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯಮೃತ್ಯುಂಜಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ವೇದಿಕೆ ಮೇಲೆ ಪ್ರತಿಷಾನದ ಅಧ್ಯಕ್ಷೆ ಮಾಜಿ ಶಾಸಕಿ ಗೌರಮ್ಮ ಕಾಶಪ್ಪನವರ, ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಸೇರಿದಂತೆ ಅನೇಕ ಮುಖಂಡರು, ನಗರಸಭೆ ಕಾಂಗ್ರೆಸ್ ಸದಸ್ಯರು ಉಪಸ್ಥಿತರಿದ್ದರು. ಇದೇ ವೇಳೆಯಲ್ಲಿ ಇಳಕಲ್ಲ ಹಾಗೂ ಹುನಗುಂದ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪ್ರತಿಷ್ಠಾನದ ಪರವಾಗಿ ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಗಣ್ಯರು ಸತ್ಕರಿಸಿದರು. ಸಂಗಣ್ಣ ಗದ್ದಿ ನಿರೂಪಿಸಿ ವಂದಿಸಿದರು.