ಸಿರಿಧಾನ್ಯ ಬಳಕೆಯಿಂದ ಸಂಪ್ರದಾಯದ ಉಳಿಕೆ: ಹೇಮಲತಾ

| Published : Dec 08 2024, 01:15 AM IST

ಸಿರಿಧಾನ್ಯ ಬಳಕೆಯಿಂದ ಸಂಪ್ರದಾಯದ ಉಳಿಕೆ: ಹೇಮಲತಾ
Share this Article
  • FB
  • TW
  • Linkdin
  • Email

ಸಾರಾಂಶ

ಸಿರಿಧಾನ್ಯಗಳು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಹೃದಯ ಆರೋಗ್ಯ, ಮಧುಮೇಹ ನಿಯಂತ್ರಣ ಮತ್ತು ತೂಕ ಸಮತೋಲನಕ್ಕೆ ಬಹಳ ಸಹಾಯಕವಾಗಿವೆ.

ಧಾರವಾಡ:

ಜನರ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸಿರಿಧಾನ್ಯಗಳ ಬಳಕೆ ಮತ್ತು ಸಿರಿಧಾನ್ಯ ಖಾದ್ಯಗಳ ತಯಾರಿಕೆಗೆ ಪ್ರೋತ್ಸಾಹಿಸಬೇಕಾಗಿದೆ ಎಂದು ಡೀನ್ ಸಮುದಾಯ ವಿಜ್ಞಾನ ಕಾಲೇಜ್ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಹೇಮಲತಾ ಎಸ್‌. ತಿಳಿಸಿದರು.

ನಗರದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ಸಿರಿಧಾನ್ಯ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಿರಿಧಾನ್ಯಗಳು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಹೃದಯ ಆರೋಗ್ಯ, ಮಧುಮೇಹ ನಿಯಂತ್ರಣ ಮತ್ತು ತೂಕ ಸಮತೋಲನಕ್ಕೆ ಬಹಳ ಸಹಾಯಕವಾಗಿವೆ. ಈ ಆಹಾರಗಳ ಲಾಭ ಉಪಯಕ್ತತೆ ಮತ್ತು ಬಳಕೆ ಕುರಿತಂತೆ ಹೆಚ್ಚಿನ ರೀತಿಯಲ್ಲಿ ವ್ಯಾಪಕ ಅರಿವು ಮೂಡಿಸುವ ದಿಶೆಯಲ್ಲಿ ಈ ರೀತಿಯ ಸ್ಪರ್ಧೆಗಳು ಬಹಳಷ್ಟು ಉಪಯೋಗಕಾರಿ ಎಂದು ತಿಳಿಸಿದರು.

ಅದೇ ತೆರನಾಗಿ ಪಾರಂಪರಿಕ ಆಹಾರ ಪದ್ಧತಿ ನಶಿಸಿ ಹೋಗುತ್ತಿದ್ದು, ಅಳಿವಿನಂಚಿನಲ್ಲಿವೆ. ಪಾರಂಪರಿಕ ಆಹಾರ ಪದ್ಧತಿಗಳ ಪೌಷ್ಟಿಕಾಂಶದ ಮಹತ್ವ ಮತ್ತು ಅವುಗಳ ಪ್ರಯೋಜನ ಮುಂದಿನ ಪೀಳಿಗೆಗೆ ತಿಳಿಪಡಿಸಿ ಸಾಂಪ್ರದಾಯಿಕತೆಯನ್ನು ಮುಂದೆ ಕೊಂಡೊಯ್ಯುವುದು ಅತೀ ಅವಶ್ಯಕ ಎಂದರು.

ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಸಿರಿಧಾನ್ಯಗಳ ಸಂಸ್ಕರಣೆ, ಬ್ರ‍್ಯಾಂಡಿಂಗ್ ಮತ್ತು ಪ್ಯಾಕಿಂಗ್‌ಗಳಿಗೆ ಸರ್ಕಾರದಿಂದ ದೊರೆಯುವ ಸವಲತ್ತು ಮತ್ತು ಸಹಾಯಧನಗಳ ಕುರಿತಂತೆ ವಿವರಿಸಿದರು.

ಸ್ಪರ್ಧೆಯಲ್ಲಿ ಹುಬ್ಬಳ್ಳಿ, ಕುಂದಗೋಳ, ಧಾರವಾಡ ಕಲಘಟಗಿ ತಾಲೂಕುಗಳಿಂದ 21 ಸ್ಪರ್ಧಿಗಳು ಭಾಗವಹಿಸಿ, ನವಣೆ, ಸಜ್ಜೆ, ಹಾರಕ, ಬರಗು, ಸಾವೆ ಹಾಗೂ ಜೋಳದ ಧಾನ್ಯಗಳಿಂದ ತಯಾರಿಸಿದ ಒಟ್ಟು 21 ವಿವಿಧ ಬಗೆಯ ಖಾದ್ಯ ಪ್ರದರ್ಶಿಸಿದರು. ಸ್ಪರ್ಧೆಯ ತೀರ್ಪುಗಾರರಾಗಿ ಡಾ. ಹೇಮಲತಾ ಎಸ್, ಡಾ. ವೀಣಾ ಜಾದವ ಮತ್ತು ಡಾ. ವಿದ್ಯಾ ಸಂಗಣ್ಣವರ ಭಾಗವಹಿಸಿದ್ದರು.

ಉಪ ಕೃಷಿ ನಿರ್ದೇಶಕರಾದ ಜಯಶ್ರೀ ಹಿರೇಮಠ, ಡಾ. ಸಂದೀಪ ಆರ್.ಜಿ, ಹುಸೇನಸಾಬ, ಸಹಾಯಕ ಕೃಷಿ ನಿರ್ದೇಶಕರಾದ ಗೀತಾ ಕಡಪಟ್ಟಿ, ಸುಷ್ಮಾ ಮಳಿಮಠ ಹಾಗೂ ಕೃಷಿ ಅಧಿಕಾರಿಗಳಾದ ಮಾಲತೇಶ ಪುಟ್ಟಣ್ಣವರ, ಪೃಥ್ವಿ ಟಿ.ಪಿ ಎಂ, ಹರೀಶ, ಶ್ರೀಕಾಂತ ಪಾಟೀಲ, ವಿಜಯಾ ಅಂಗಡಿ, ಕುಮಾರ ಲಮಾಣಿ, ಯಾಸ್ಮಿನ್ ಮುಕಾಸಿ, ಪೂರ್ಣಿಮಾ ಮೇಘಣ್ಣವರ, ಕೃಷಿ ತರಬೇತಿ ಕೇಂದ್ರದ ಸಿಬ್ಬಂದಿ ಕಾರ್ಯಕ್ರಮದಲ್ಲಿ ಹಾಜರಿದ್ದರು.ಪ್ರಶಸ್ತಿ ವಿಜೇತರು:

ಜಿಲ್ಲಾಮಟ್ಟದ ಸಿರಿಧಾನ್ಯ ಹಾಗೂ ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆಯ ಸಿಹಿ ಖಾದ್ಯಗಳ ವಿಭಾಗದಲ್ಲಿ ಅನಿತಾ ರಾಜು ಪ್ರಥಮ, ವೆಂಕಟೇಶ ಜೋಶಿ ದ್ವಿತೀಯ ಹಾಗೂ ತನುಜಾ ಪಾಟೀಲ ತೃತೀಯ ಸ್ಥಾನ ಪಡೆದಿದ್ದಾರೆ. ಖಾರದ ಖಾದ್ಯಗಳ ವಿಭಾಗದಲ್ಲಿ ವಿಜಯಾ ಕುಲಕರ್ಣಿ ಪ್ರಥಮ, ಅಕ್ಷತಾ ಉಪಕಾರಿ ದ್ವಿತೀಯ ಹಾಗೂ ಗಿರಿಜಾ ಸಿ ಹಿರೇಕಲ್ಲ ತೃತೀಯ ಸ್ಥಾನ ಪಡೆದಿದ್ದಾರೆ. ಮರೆತು ಹೋದ ಖಾದ್ಯಗಳ ವಿಭಾಗದಲ್ಲಿ ಶೋಭಾ ಅಡಗಿಮಠ ಪ್ರಥಮ, ಯಲ್ಲವ್ವ ಕದಂ ದ್ವಿತೀಯ ಹಾಗೂ ಕಾವ್ಯಾ.ವಿ. ತೃತೀಯ ಸ್ಥಾನ ಪಡೆದಿದ್ದಾರೆ.