ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕೇಂದ್ರ, ರಾಜ್ಯ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಕನ್ನಡಿಗರ ಉದ್ಯೋಗಕ್ಕೆ ಆಗ್ರಹಿಸಿ ಸೋಮವಾರ ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮನವಿ ಸಲ್ಲಿಸಿದರು.ಜಿಲ್ಲಾಧಿಕಾರಿ ಕಚೇರಿ ಬಳಿ ತಾಲೂಕು ಕರವೇ ಅಧ್ಯಕ್ಷ ಡಿ.ಅಶೋಕ್ ನೇತೃತ್ವದಲ್ಲಿ ಸೇರಿದ ಕಾರ್ಯಕರ್ತರು ಉದ್ಯೋಗಕ್ಕಾಗಿ ಆಗ್ರಹಿಸಿ ಘೋಷಣೆ ಕೂಗಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಸಹಾಯಕರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದರು.
ಕರವೇ ರಾಜ್ಯ ಉಪಾಧ್ಯಕ್ಷ ಮಾ.ಸೋ.ಚಿದಂಬರ್ ಮಾತನಾಡಿ, ಖಾಸಗಿ ವಲಯದ ಶೇ.೧೦೦ ರಷ್ಟು ಹುದ್ದೆಗಳು ಕನ್ನಡಿಗರಿಗೇ ದಕ್ಕಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರ ನೇತೃತ್ವದಲ್ಲಿ ಕರವೇ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ರಾಜ್ಯಾಧ್ಯಂತ ಎಲ್ಲಾ ತಾಲೂಕು ಮಟ್ಟದಿಂದ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸುತ್ತಿದ್ದೇವೆ ಎಂದರು.ಕನ್ನಡ ನಾಡಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಎಲ್ಲಾ ಹಂತದ ಉದ್ಯೋಗಗಳನ್ನು ಕನ್ನಡಿಗರಿಗೆ ನೀಡುವಂತೆ ಸೂಕ್ತ ಕಾಯ್ದೆಯನ್ನು ರೂಪಿಸಿ ಜಾರಿಗೊಳಿಸುವಂತೆ ಆಗ್ರಹಿಸಿದರು.
ಇತರೆ ರಾಜ್ಯಗಳಿಂದ ಉದ್ಯೋಗ ಅರಸಿ ಬೆಂಗಳೂರಿನತ್ತ ವಲಸೆ ಬರುವವರ ಸಂಖ್ಯೆ ಹೆಚ್ಚಳವಾಗಿದೆ. ಖಾಸಗಿ ವಲಯಗಳಲ್ಲಿ ಕನ್ನಡೇತರರಿಗೆ ಹೆಚ್ಚಿನ ಉದ್ಯೋಗ ಅವಕಾಶ ನೀಡಲಾಗುತ್ತಿದೆ. ಇದರಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಖಾಸಗಿ ವಲಯದಲ್ಲಿ ಸಿ ಮತ್ತು ಡಿ ದರ್ಜೆ ಹುದೆಗಳಲ್ಲಿ ಶೇ. ೧೦೦ ರಷ್ಟು ಕನ್ನಡಿಗರಿಗೆ ಮೀಸಲಾತಿ ನೀಡಬೇಕು. ಇತರೆ ಗ್ರೂಪ್‌ಗಳಲ್ಲಿ ಶೇ.೮೦ ರಷ್ಟು ಮೀಸಲಾತಿ ನೀಡುವಂತೆ ಒತ್ತಾಯಿಸಿದರು.ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಮೀಸಲಿಡಬೇಕು ಎಂಬ ಡಾ.ಸರೋಜಿನಿ ಮಹಿಷಿ ವರದಿ ಜಾರಿಯಾಗುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಹೋರಾಟ ನಡೆಸಲಾಗುತ್ತಿದ್ದು, ಇದಕ್ಕೆ ಸಮಸ್ತ ಕನ್ನಡಿಗರು ನಾಮಫಲಕ ಹೋರಾಟಕ್ಕೆ ಕೊಟ್ಟಷ್ಟೇ ಬೆಂಬಲವನ್ನು ನೀಡಿದ್ದಾರೆ ಎಂದರು.
ಸರೋಜಿನಿ ಮಹಿಷಿ ವರದಿ ಜಾರಿಯಾಗುವುದು ಕನ್ನಡಿಗರ ಬದುಕಿನ ಮತ್ತು ಉದ್ಯೋಗದ ಪ್ರಶ್ನೆಯಾಗಿದೆ. ರಾಮಕೃಷ್ಣ ಹೆಗಡೆ ಅವಧಿಯ ವೇಳೆ ತಯಾರಾಗಿದ್ದ ವರದಿಯು ಕಾಯ್ದೆಯಾಗದೇ ನನೆಗುದಿಗೆ ಬಿದ್ದಿದೆ. ಅಧಿಕಾರಕ್ಕೆ ಬಂದ ಯಾವ ಪಕ್ಷವು ವರದಿ ಜಾರಿ ಮಾಡಲು ಆಸಕ್ತಿ ತೋರದೆ ಕನ್ನಡಿಗರಿಗೆ ಅನ್ಯಾಯ ಮಾಡಿವೆ ಎಂದು ಬೇಸರ ವ್ಯಕ್ತಪಡಿಸಿದರು.ಬಹುರಾಷ್ಟ್ರಿಯ ಕಂಪನಿಗಳು ಕರ್ನಾಟಕಕ್ಕೆ ಬರುತ್ತಿವೆ ಆದರೆ, ಈ ನೆಲದ ಮಕ್ಕಳಿಗೆ ಕೆಲಸ ನೀಡುತ್ತಿಲ್ಲ. ಕೇವಲ ಡಿ ದರ್ಜೆ ಕೆಲಸ ನೀಡುತ್ತಿವೆಯೇ ವಿನಃ ಎ,ಬಿ, ಸಿ ದರ್ಜೆಯ ವೃತ್ತಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುತ್ತಿಲ್ಲ. ಆದ್ದರಿಂದ ಮಹಿಷಿ ವರದಿಯಂತೆ ಖಾಸಗಿ ಸಂಸ್ಥೆಗಳಲ್ಲಿ ಶೇಕಡ ೧೦೦ರಷ್ಟು ಸಿ ಮತ್ತು ಡಿ ದರ್ಜೆಯ ಕೆಲಸಗಳನ್ನು ಹಾಗೆಯೇ ಎ ಮತ್ತು ಬಿ ದರ್ಜೆಯಲ್ಲಿ ಶೇಕಡ ೭೦-೮೦ರಷ್ಟು ಕೆಲಸಗಳನ್ನು ಕನ್ನಡಿಗರಿಗೆ ಮೀಸಲಿಡಬೇಕಾಗಿ ರಾಜ್ಯ ಸರ್ಕಾರವನ್ನು ಒತ್ತಾಯ ಮಾಡಲು ಈ ಹೋರಾಟ ಹಮ್ಮಿಕೊಂಡಿದ್ದೇವೆ. ಈ ಪ್ರತಿಭಟನೆಯು ಶಾಂತಿ ಸ್ವರೂಪದಲ್ಲಿದ್ದು ರಾಜ್ಯ ಸರ್ಕಾರವೇನಾದರೂ ಹದಿನೈದು ದಿನಗಳಲ್ಲಿ ಏನೂ ನಿರ್ಧಾರ ತೆಗೆದುಕೊಳ್ಳದೆ ಹೋದರೆ ಮುಂದಿನ ಹೋರಾಟ ಕ್ರಾಂತಿ ಸ್ವರೂಪದ್ದಾಗಿರುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಕರವೇ ತಾಲೂಕು ಡಿ.ಅಶೋಕ್, ಸಾತನೂರು ಶ್ರೀಧರ್, ಪುಟ್ಟಮಲ್ಲಯ್ಯ, ಜಯರಾಂ, ವರದೇಗೌಡ, ಶಿವರಾಜು, ಎಚ್.ಎಸ್.ನಾಗರಾಜು, ಎಂ.ಪಿ.ಸ್ವಾಮಿ ಮತ್ತಿತರರಿದ್ದರು.