ಕುಶಾಲನಗರ ಯೋಜನಾ ಪ್ರಾಧಿಕಾರ ನೂತನ ತಂಡ ಪದಗ್ರಹಣ

| Published : Jul 04 2024, 01:06 AM IST

ಸಾರಾಂಶ

ಕುಶಾಲನಗರ ಯೋಜನಾ ಪ್ರಾಧಿಕಾರ ನೂತನ ಅಧ್ಯಕ್ಷರಾಗಿ ಪ್ರಮೋದ್ ಮುತ್ತಪ್ಪ, ಸದಸ್ಯರಾಗಿ ವಿ.ಎಸ್.ಸಜಿ, ಕೆ ಆರ್ ಸಂಗೀತ, ಕೆ.ಆರ್.ಕಿರಣ್ ಕುಮಾರ್ ಅಧಿಕಾರ ವಹಿಸಿಕೊಂಡರು. ಶಾಲನಗರದ ಶ್ರೀ ಗಣಪತಿ ದೇವಾಲಯದಲ್ಲಿ ಪೂಜೆ‌ ಸಲ್ಲಿಸಿ, ನಂತರ ಪ್ರಾಧಿಕಾರದ ಕಚೇರಿಯಲ್ಲಿ ಹೋಮ‌, ಪೂಜಾ ಕಾರ್ಯಕ್ರಮ ನೆರವೇರಿಸಿದ ಬಳಿಕ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕಾರ ಮಾಡಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರ ಯೋಜನಾ ಪ್ರಾಧಿಕಾರ ನೂತನ ಅಧ್ಯಕ್ಷರಾಗಿ ಪ್ರಮೋದ್ ಮುತ್ತಪ್ಪ, ಸದಸ್ಯರಾಗಿ ವಿ.ಎಸ್.ಸಜಿ, ಕೆ ಆರ್ ಸಂಗೀತ, ಕೆ.ಆರ್.ಕಿರಣ್ ಕುಮಾರ್ ಅಧಿಕಾರ ವಹಿಸಿಕೊಂಡರು.

ಕುಶಾಲನಗರದ ಶ್ರೀ ಗಣಪತಿ ದೇವಾಲಯದಲ್ಲಿ ಪೂಜೆ‌ ಸಲ್ಲಿಸಿ, ನಂತರ ಪ್ರಾಧಿಕಾರದ ಕಚೇರಿಯಲ್ಲಿ ಹೋಮ‌, ಪೂಜಾ ಕಾರ್ಯಕ್ರಮ ನೆರವೇರಿಸಿದ ಬಳಿಕ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕಾರ ಮಾಡಿದರು.

ನಂತರ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿದ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಜನಸಾಮಾನ್ಯರ ಕೆಲಸ ಕಾರ್ಯಗಳು ಕಾನೂನಿನ‌ ಚೌಕಟ್ಟಿನಲ್ಲಿ ನಡೆಯುವಂತಾಗಬೇಕಿದೆ. ಜನಸೇವೆಗೆ ನೂತನ ಪದಾಧಿಕಾರಿಗಳು ಹಾಗೂ ಅಧಿಕಾರಿ ವರ್ಗದವರು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ ಎಂದರು.

ಅಧಿಕಾರದ ದರ್ಪ ತೋರದೆ ಕಚೇರಿಗೆ ಬರುವವರನ್ನು ಸೌಜನ್ಯದಿಂದ ರಾಜಕೀಯ ರಹಿತವಾಗಿ ಸೇವಾ ಮನೋಭಾವದೊಂದಿಗೆ ಸ್ಪಂದಿಸಿ ಕುಶಾಲನಗರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮವಹಿಸಬೇಕಿದೆ ಎಂದು ಕರೆ ನೀಡಿದರು.

ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ‌ ಮಾತನಾಡಿ,

ಕೊಡಗಿನ ವಾಣಿಜ್ಯ ನಗರಿ ಕುಶಾಲನಗರ ವೇಗವಾಗಿ ಬೆಳೆಯುತ್ತಿದೆ. ಹಲವು ಪ್ರಮುಖ ಯೋಜನೆಗಳು ಇಲ್ಲಿ‌ ಅನುಷ್ಠಾನಗೊಳ್ಳುತ್ತಿದ್ದು ಇದನ್ನು ಸುಸೂತ್ರವಾಗಿ ನಿರ್ವಹಿಸಿ ಸಮರ್ಪಕವಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿ ಪ್ರಾಧಿಕಾರದ ಕಾರ್ಯಯೋಜನೆ ಆಗಬೇಕು. ಕುಶಾಲನಗರವನ್ನು‌ ಮತ್ತಷ್ಟು ಅಭಿವೃದ್ಧಿಗೊಳಿಸುವ ಅವಕಾಶವನ್ನು ನೂತನ ಪದಾಧಿಕಾರಿಗಳು ಎಲ್ಲರ ಸಹಕಾರದ ಮೂಲಕ ಸಮರ್ಥವಾಗಿ ನಿಭಾಯಿಸುವಂತೆ ಸಲಹೆ ನೀಡಿದರು.

ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡುರಾವ್ ಮಾತನಾಡಿ, ನೂತನ ಪದಾಧಿಕಾರಿಗಳ ಅವಧಿಯಲ್ಲಿ ಕುಶಾಲನಗರದ ಐತಿಹಾಸಿಕ ಕೆರೆಗಳು ಅಭಿವೃದ್ದಿ ಹೊಂದಬೇಕಿದೆ ಎಂದರು. ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಊರಿನ ಆಸ್ತಿಗಳನ್ನು ಉಳಿಸುವಲ್ಲಿ ಪ್ರಾಧಿಕಾರದ ಪದಾಧಿಕಾರಿಗಳು ದುಡಿಯಬೇಕು. ಎಲ್ಲರಿಗೂ ಮಾದರಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.

ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಮಾತನಾಡಿ, ಸ್ವಾರ್ಥ ರಹಿತವಾಗಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಪ್ರಾಧಿಕಾರ ನಡೆಸುವಂತಾಗಲಿ ಎಂದರು.

ಅಧಿಕಾರ ವಹಿಸಿಕೊಂಡ ನೂತನ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಮಾತನಾಡಿ, ಸ್ಥಾನಮಾನಗಳಿಗೆ ಪೈಪೋಟಿ ಸಾಮಾನ್ಯ. ದೊರೆತ ಅಧಿಕಾರವನ್ನು ಜನಸಾಮಾನ್ಯರ ಸೇವೆ ಒದಗಿಸಲು ನೂತನ ಪದಾಧಿಕಾರಿಗಳ ಸಹಕಾರದೊಂದಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ತಿಳಿಸಿದರು.

ಕುಶಾಲನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ. ಚರಣ್, ತಹಸೀಲ್ದಾರ್ ಕಿರಣ್ ಗೌರಯ್ಯ, ಪುರಸಭಾ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸ್ವಾತಿ ಸೇರಿದಂತೆ ಪುರಸಭಾ ಸದಸ್ಯರು, ಕಾಂಗ್ರೆಸ್ ವಿವಿಧ ಘಟಕಗಳ ಪ್ರಮುಖರು ಇದ್ದರು.