ಸಾರಾಂಶ
ಯಲ್ಲಾಪುರ: ತಾಲೂಕಿನಲ್ಲಿ ಒಟ್ಟೂ ೯೪ ಸಾರ್ವಜನಿಕ ಗಣೇಶೋತ್ಸವಗಳನ್ನು ಆಚರಿಸುತ್ತಿದ್ದು, ಎಲ್ಲ ಉತ್ಸವವೂ ಮಹತ್ವದ್ದಾಗಿದೆ. ಸಾರ್ವಜನಿಕರ ಮನಸ್ಸಿಗೆ ನೋವಾಗದಂತೆ ಸೌಹಾರ್ದಯುತವಾಗಿ ಉತ್ಸವ ಆಚರಿಸಬೇಕು ಎಂದು ತಹಸೀಲ್ದಾರ್ ಅಶೋಕ ಭಟ್ಟ ಹೇಳಿದರು.
ಪಟ್ಟಣದ ಅಡಿಕೆಭವನದಲ್ಲಿ ತಾಲೂಕು ಆಡಳಿತ, ಪೊಲೀಸ್ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ, ಮುಂಬರುವ ಗಣೇಶೋತ್ಸವ ಮತ್ತು ಈದ್-ಮಿಲಾದ್ ಹಬ್ಬಗಳ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಸಾರ್ವಜನಿಕರನ್ನು ಸಂಘಟಿಸಲೆಂದು ಬಾಲಗಂಗಾಧರ ತಿಲಕರು ಈ ಗಣೇಶೋತ್ಸವ ಆರಂಭಿಸಿದ್ದರು. ಇಂದು ಈ ಉತ್ಸವ ಅತ್ಯಂತ ಪ್ರಬಲವಾಗಿ ಆಚರಣೆಗೊಳ್ಳುತ್ತಿದೆ. ಈದ್-ಮಿಲಾದ್ ಮತ್ತು ಗಣೇಶೋತ್ಸವಗಳ ಆಚರಣೆಯಲ್ಲಿ ಭೇದ-ಭಾವಗಳಿರಬಾರದು. ಉತ್ಸವ ಪರಿಸರ ಸ್ನೇಹಿಯಾಗಿರಬೇಕು. ಉತ್ಸವಗಳಲ್ಲಿ ಬಳಸುವ ಮೈಕ್ ಕೂಡಾ ಪರರಿಗೆ ತೊಂದರೆಯಾಗದಂತಿರಲಿ. ಅಲ್ಲದೇ ಉತ್ಸವಗಳಲ್ಲಿ ಪ್ಲಾಸ್ಟಿಕ್ ಬಳಕೆ ಸರ್ವಥಾ ಅನಗತ್ಯ. ವಿಜೃಂಭಣೆಗಿಂತ ಭಕ್ತಿಗೆ ಪ್ರಾಧಾನ್ಯತೆ ನೀಡುವಂತಿರಲಿ. ಅಲ್ಲದೇ, ಪಟಾಕಿ ಬಳಕೆ ಸಾಧ್ಯವಿದ್ದಷ್ಟು ಕಡಿಮೆಯಿರಲಿ ಎಂದು ಹೇಳಿದರು.ಗಣಪತಿ ಉತ್ಸವಕ್ಕೆ ಅಗತ್ಯವಾಗಿರುವ ಪರವಾನಗಿ ನೀಡಿಕೆಯನ್ನು ಸಾರ್ವಜನಿಕರ ಆಗ್ರಹದಂತೆ ಸರಳೀಕರಣಗೊಳಿಸಲಾಗಿದೆ. ಪರಸ್ಪರ ಬಾಂಧವ್ಯದಿಂದ ಎರಡೂ ಉತ್ಸವಗಳು ಆಚರಣೆಯಾಗಬೇಕು. ಸಾರ್ವಜನಿಕರ ಭಾವನೆಗೆ ಧಕ್ಕೆಯಾಗದ ರೀತಿ ಸರ್ಕಾರದ ಮಾರ್ಗಸೂಚಿ ಅನುಸರಿಸಿ, ಉತ್ಸವವನ್ನು ಆಚರಿಸೋಣ ಎಂದರು.
ಸಿಪಿಐ ರಮೇಶ್ ಹಾನಾಪುರ ಮಾತನಾಡಿ, ಮುಂಬರುವ ಎಲ್ಲ ಹಬ್ಬಗಳ ಮುಂಜಾಗ್ರತೆಯ ನೇತೃತ್ವವನ್ನು ತಹಶೀಲ್ದಾರ್ ಅಶೋಕ ಭಟ್ಟ ಅವರು ವಹಿಸಿಕೊಂಡಿದ್ದಾರೆ. ಹಬ್ಬಗಳು ಕೋಮುವೈಷಮ್ಯಕ್ಕೆ ಎಡೆಕೊಡದೇ ಸಮಾಜಕ್ಕೆ ಮಾದರಿಯಾಗಿರಲಿ. ಯಾರೇ ಆಗಲಿ, ಯಾವುದೋ ಕಾರಣಕ್ಕೆ ಕಾನೂನು ಕೈಗೆತ್ತಿಕೊಳ್ಳಬಾರದು. ಕೇವಲ ಪೊಲೀಸ್ ಇಲಾಖೆಯೊಂದರಿಂದಲೇ ಶಾಂತಿ-ಸೌಹಾರ್ದ ಸಾಧ್ಯವಾಗದು. ಉತ್ಸವಗಳ ಸಂದರ್ಭದಲ್ಲಿ ಎಲ್ಲಾದರೂ ಅಹಿತಕರ ಘಟನೆ ಸಂಭವಿಸಿದರೆ ಪೊಲೀಸ್ ಇಲಾಖೆಯ ಗಮನಕ್ಕೆ ತನ್ನಿ ಎಂದರು.ಪಪಂ ಮುಖ್ಯಾಧಿಕಾರಿ ಸುನೀಲ್ ಗಾವಡೆ ಮಾತನಾಡಿ, ಉತ್ಸವಗಳಲ್ಲಿ ಬಳಸುವ ಪಟಾಕಿಗೆ ಮಿತಿ ಇರಲಿ. ಬಳಸುವ ಪಟಾಕಿಯ ಬದಲಿಗೆ ಅದೇ ಹಣದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಪಟ್ಟಿ, ಪೆನ್ನು ಕೊಡಿಸಿ. ಮುಖ್ಯವಾಗಿ ಉತ್ಸವದಲ್ಲಿ ಕಡ್ಡಾಯವಾಗಿ ಪ್ಲಾಸ್ಟಿಕ್ ತ್ಯಜಿಸಿ ಎಂದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜೇಶ ಧನವಾಡಕರ ಮಾತನಾಡಿ, ಉತ್ಸವದ ನೆಪದಲ್ಲಿ ಪರಿಸರ ಮಾಲಿನ್ಯಕ್ಕೆ ಎಡೆಗೊಡಬಾರದು ಎಂದರು.ಹೆಸ್ಕಾಂ ಅಭಿಯಂತರ ರಮಾಕಾಂತ ನಾಯ್ಕ, ಅಗ್ನಿಶಾಮಕ ಠಾಣಾಧಿಕಾರಿ ಶಂಕ್ರಪ್ಪ ಅಂಗಡಿ, ಡಿ.ಆರ್.ಎಫ್.ಓ. ಶರಣ್, ಲೋಕೋಪಯೋಗಿ ಇಲಾಖೆಯ ಅಭಿಯಂತರ ಅರವಿಂದ, ಸಾರ್ವಜನಿಕರ ಪರವಾಗಿ ನಾಗರಾಜ ಮದ್ಗುಣಿ, ಜಿ.ಎನ್. ಭಟ್ಟ ತಟ್ಟೀಗದ್ದೆ, ಕೇಬಲ್ ನಾಗೇಶ, ಶಿಕ್ಷಕ ಸಂಜೀವಕುಮಾರ ಹೊಸ್ಕೇರಿ ಸಲಹೆ, ಸೂಚನೆಗಳನ್ನು ನೀಡಿದರು.
ಪಿಎಸ್‌ಐ ಸಿದ್ದಪ್ಪ ಗುಡಿ ಸ್ವಾಗತಿಸಿದರು. ರೇಖಾ ಎಂ.ಎಸ್. ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.