ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದಿಂದ ಜ.6 ಮತ್ತು 7ರಂದು ಆಯೋಜನೆಗೊಳ್ಳುತ್ತಿರುವ ಹಾಸನ ಸಾಹಿತ್ಯೋತ್ಸವ-೨೦೨೫ಕ್ಕೆ ಚನ್ನರಾಯಪಟ್ಟಣ ತಾಲೂಕಿನ ಪರಿಷತ್ತಿನ ಅಜೀವ ಸದಸ್ಯರು, ಕನ್ನಡಪರ ಸಂಘಟನೆಗಳು, ಸಾಹಿತಿಗಳು, ಶಿಕ್ಷಕರು, ನೌಕರರು, ಸೇರಿದಂತೆ ಎಲ್ಲ ಕನ್ನಡ ಮನಸುಗಳು ಆಗಮಿಸಿ ಸಾಹಿತ್ಯೋತ್ಸವವನ್ನು ಯಶ್ವಸಿಗೊಳಿಸಬೇಕೆಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಡೇನಹಳ್ಳಿ ಲೋಕೇಶ್ ಮನವಿ ಮಾಡಿದರು.ಅವರು ಪಟ್ಟಣದಲ್ಲಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎರಡು ದಿನಗಳು ಜಿಲ್ಲಾ ಕೇಂದ್ರದಲ್ಲಿ ನಡೆಯುವ ಸಾಹಿತ್ಯೋತ್ಸವವು ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಜನವರಿ ೬ರ ಸೋಮವಾರದಂದು ಸಾಹಿತಿ ಡಾ.ಹಂಪ ನಾಗರಾಜಯ್ಯ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕತರಾದ ಡಾ.ಚಂದ್ರಶೇಖರ ಕಂಬಾರ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪರಿಷತ್ತಿನ ರಾಜಾಧ್ಯಕ್ಷರಾದ ನಾಡೋಜ ಮಹೇಶ್ ಜೋಷಿ, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಅಶೋಕ್ ಹಾರನಹಳ್ಳಿ, ಹಾಸನ ನಗರಸಭೆ ಅಧ್ಯಕ್ಷರಾದ ಚಂದ್ರೇಗೌಡ ಭಾಗವಹಿಸಲಿದ್ದಾರೆ. ತದನಂತರ ಎರಡು ದಿನಗಳಲ್ಲಿ ೮ ವಿವಿಧ ಗೋಷ್ಠಿಗಳು ನಡೆದು ಜ. ೭ರ ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಜಲೇಂದ್ರ ಮಾತನಾಡಿ, ಜಿಲ್ಲೆಯಲ್ಲಿ ನಡೆಯುವ ಸಾಹಿತ್ಯೋತ್ಸವಕ್ಕೆ ಹೆಚ್ಚಿನ ಜನ ಸೇರಬೇಕು ಎಂಬ ಉದ್ದೇಶದೊಂದಿಗೆ ಶಿಕ್ಷಕರಿಗೆ ಜಿಲ್ಲಾಡಳಿತ ಒಒಡಿ ವ್ಯವಸ್ಥೆ ಕಲ್ಪಿಸಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರಿಗೆ ಒಒಡಿ ವ್ಯವಸ್ಥೆ ಮಾಡಿದ್ದು, ಇದರ ಪ್ರಯೋಜನಕ್ಕೆ ಶಿಕ್ಷಕರು ಮುಂದಾಗಬೇಕು. ಜ. ೬ರ ಮೊದಲ ದಿನ ನೋಂದಣಿಗೆ ಅವಶ್ಯಕತೆಯಿದ್ದು, ತಾಲೂಕುವಾರು ಪ್ರತ್ಯೇಕ ನೋಂದಣಿ ಕೌಂಟರ್ ತೆರೆಯಲಾಗುತ್ತದೆ. ಜಿಲ್ಲೆಯ ಮಂದಿಗೆ ನೋಂದಣಿ ಉಚಿತವಾಗಿದ್ದು, ಹೊರ ಜಿಲ್ಲೆಯವರಿಗೆ ನೋಂದಣಿಗಾಗಿ ೨೫೦ ರು. ಪಾವತಿಸಬೇಕಾಗಿದೆ. ಅವರಿಗೆ ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಶಿವನಗೌಡ ಪಾಟೀಲ್, ದಿಂಡಗೂರು ಗೋವಿಂದರಾಜ್, ಮುಳ್ಳಕೆರೆ ಪ್ರಕಾಶ್, ಮಲ್ಲೇಶಪ್ಪ, ಯಶೋಧ ಜೈನ್ ಇದ್ದರು.