ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ, ಅದರಲ್ಲೂ ವಿಶೇಷವಾಗಿ ಮಲೆನಾಡು ಭಾಗದಲ್ಲಿ ಕೇಳಿ ಬರುತ್ತಿರುವ ನಿರಂತರ ಕೂಗು ಮಾನವ-ವನ್ಯಜೀವಿ ಸಂಘರ್ಷ.

ಮಹಾಬಲೇಶ್ವರ ಹೊನ್ನೆಮಡಿಕೆಕನ್ನಡಪ್ರಭ ವಾರ್ತೆ ಬೆಂಗಳೂರು:

ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ, ಅದರಲ್ಲೂ ವಿಶೇಷವಾಗಿ ಮಲೆನಾಡು ಭಾಗದಲ್ಲಿ ಕೇಳಿ ಬರುತ್ತಿರುವ ನಿರಂತರ ಕೂಗು ಮಾನವ-ವನ್ಯಜೀವಿ ಸಂಘರ್ಷ.ಸರ್ಕಾರದ ಅಧಿಕೃತ ಅಂಕಿ-ಅಂಶಗಳ ಪ್ರಕಾರವೇ, ದೇಶದಲ್ಲಿ ಕಳೆದ 5 ವರ್ಷಗಳ ಅವಧಿಯಲ್ಲಿ 3,251 ಜನ ಕಾಡುಪ್ರಾಣಿಗಳಿಗೆ ಬಲಿಯಾಗಿದ್ದರೆ, ರಾಜ್ಯದಲ್ಲಿ ಈ ಸಂಖ್ಯೆ 259. ಅಂದರೆ, ವರ್ಷಕ್ಕೆ ಸರಾಸರಿ 55-60 ಜನರ ಸಾವು ಸಂಭವಿಸಿದೆ. ಈ ಪೈಕಿ, ರಾಜ್ಯದಲ್ಲಿ ಆನೆ ಮತ್ತು ಚಿರತೆ ದಾಳಿಗೆ ಬಲಿಯಾದವರ ಸಂಖ್ಯೆಯೇ ಹೆಚ್ಚು. ಆನೆ ದಾಳಿಯೊಂದರಲ್ಲೇ 170ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಅದರಲ್ಲೂ ಮೈಸೂರು, ಚಾಮರಾಜನಗರ, ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯ ಜನರೇ ಕಾಡು ಪ್ರಾಣಿಗಳಿಗೆ ಹೆಚ್ಚಚ್ಚು ಆಹಾರವಾಗುತ್ತಿದ್ದಾರೆ.

ಬೇಟೆಯಾಡಿದರೆ ಜೈಲು, ₹1 ಲಕ್ಷ ದಂಡ:1972ರ ವನ್ಯಜೀವಿ ಕಾಯ್ದೆ ಸೆಕ್ಷನ್ 51ರ ಪ್ರಕಾರ ಕಾಡುಪ್ರಾಣಿಗಳನ್ನು ಬೇಟೆಯಾಡುವುದು ಅಪರಾಧ. ಇದಕ್ಕೆ 3-7 ವರ್ಷ ಜೈಲು, 1 ಲಕ್ಷ ರು.ವರೆಗೆ ದಂಡ ವಿಧಿಸಬಹುದು. ಬೇಟೆಗೆ ಬಳಸಿದ ಬಂದೂಕು ಇನ್ನಿತರ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. ಬಂದೂಕು ಪರವಾನಗಿ, ವನ್ಯಜೀವಿ ಇಲಾಖೆಯ ಇನ್ನಿತರ ಪರವಾನಗಿ ತಕ್ಷಣವೇ ರದ್ದಾಗಬಹುದು. ಅಪರೂಪದ ಪ್ರಾಣಿಗಳನ್ನು ಕೊಂದರಂತೂ ಜಾಮೀನು ಸಿಗುವುದೂ ಕಷ್ಟ.ಪಕ್ಕದ ಕೇರಳದಲ್ಲಿ ಕೆಲವು ನಿಬಂಧನೆಗಳಡಿ ಹಂದಿ ಬೇಟೆಗೆ ಅವಕಾಶವಿದೆ. ಕರ್ನಾಟಕದಲ್ಲಿ ಇದಕ್ಕೆ ಅವಕಾಶ ಇಲ್ಲ. ಹಂದಿಯಿಂದ ತೊಂದರೆ ಆಗುತ್ತಿದ್ದರೆ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದಾಗ ಆ ಹಂದಿ ಅಪಾಯಕಾರಿ ಎಂಬುದು ಸಾಬೀತಾದರೆ, ಆ ಹಂದಿಯನ್ನು ಮಾತ್ರ ಕೊಲ್ಲಲು ಅವಕಾಶವಿದೆ. ಅಂದರೆ, ನಿಮಗೆ ತೊಂದರೆ ಕೊಡುತ್ತಿರುವ ಹಂದಿ ಯಾವುದು ಎಂಬುದು ಗೊತ್ತಿರಬೇಕು. ಬೇರೆ ಹಂದಿ ಕೊಂದರೆ ಶಿಕ್ಷೆ ಗ್ಯಾರಂಟಿ.

ಇತ್ತೀಚೆಗೆ ನಮ್ಮಲ್ಲಿ ಬೀದಿ ನಾಯಿಗಳ ಕಾಟ ವಿಪರೀತವಾಗಿದೆ. ಆದರೆ, ನಮಗೆ ನಾಯಿ ಕಡಿದರೂ ಅವುಗಳನ್ನು ಕೊಲ್ಲುವುದಿರಲಿ, ಹಿಡಿದು ಸ್ಥಳಾಂತರಿಸುವ ಅಧಿಕಾರವೂ ಇಲ್ಲ. ಕೊಂದರೆ 2-5 ವರ್ಷಗಳ ಜೈಲು ಶಿಕ್ಷೆ ಗ್ಯಾರಂಟಿ. ಚಿರತೆಗಳ ನಿಯಂತ್ರಣದ ಬಗ್ಗೆ ಸಂಶೋಧನೆ ನಡೆಸಿದ ಪುಣೆಯ ವಿದ್ಯಾ ಎಂಬ ಸಂಶೋಧಕಿಯ ಪ್ರಕಾರ, ನಗರಗಳಿಗೆ ಬರುವ ಚಿರತೆಗಳಿಗೆ ಬೀದಿ ನಾಯಿಗಳೇ ಪ್ರಮುಖ ಆಹಾರ. ಹೀಗಾಗಿ, ನಗರಗಳ ಬೀದಿ ನಾಯಿಗಳನ್ನುನಿಯಂತ್ರಿಸಬೇಕು. ಆಗ ಚಿರತೆಗಳು ನಗರಕ್ಕೆ ಬರುವುದನ್ನು ನಿಲ್ಲಿಸುತ್ತವೆ.

ಮಂಗನ ಸಮಸ್ಯೆಗೂ ಶಾಶ್ವತ ಪರಿಹಾರವಿಲ್ಲ:ಇನ್ನು ಮಂಗಗಳಿಂದ ಕೃಷಿ ಬೆಳೆ ಹಾನಿಯಾಗುತ್ತಿದ್ದರೆ ದೂರು ಕೊಡಬೇಕು. ಕೋತಿಗಳನ್ನು ಸ್ಥಳಾಂತರಿಸುವ ಅಧಿಕಾರ ಗ್ರಾಪಂ ವ್ಯಾಪ್ತಿಗೆ ಬರುತ್ತದೆ. ಆದರೆ, ಅಲ್ಲಿ ಕೋತಿ ಹಿಡಿಯುವ ಪರಿಣತರೇ ಇರುವುದಿಲ್ಲ. ಅಷ್ಟಕ್ಕೂ ಅವರು ಒಂದು ಸ್ಥಳದಲ್ಲಿ ಹಿಡಿದ ಪ್ರಾಣಿಯನ್ನು ಇನ್ನೊಂದು ಸ್ಥಳದಲ್ಲಿ ಬಿಡುತ್ತಾರೆಯೇ ಹೊರತು, ಇದಕ್ಕೊಂದು ಶಾಶ್ವತ ಪರಿಹಾರವನ್ನು ಕಂಡು ಹಿಡಿಯುವುದಿಲ್ಲ. ಇನ್ನು, ಕೋತಿಗಳ ಹಾವಳಿಯಿಂದ ಹಣ್ಣು, ತರಕಾರಿ, ಬೆಳೆ ನಾಶವಾದರೆ, ದಾಳಿ ಮಾಡಿ ನಿಮಗೆ ಗಾಯ ಮಾಡಿದರೆ ಅದಕ್ಕೆ ಪರಿಹಾರ ಸಿಗಲ್ಲ. ಒಂದು ವೇಳೆ, ಕಾಡು ಪ್ರಾಣಿಗಳಿಂದ ವ್ಯಕ್ತಿ ಸತ್ತರೆ ಆಗ ಆ ಕುಟುಂಬಕ್ಕೆ 15 ಲಕ್ಷ ರು.ವರೆಗೆ ಪರಿಹಾರ ಸಿಗುತ್ತೆ.ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದ ಕಾಲದಲ್ಲಿ ಇಂತಹ ಒಂದು ಪ್ರಯತ್ನ ಆಗಿತ್ತು. ಶಿವಮೊಗ್ಗ ಜಿಲ್ಲೆಯ ಶರಾವತಿ ಹಿನ್ನೀರು ಪ್ರದೇಶವ್ಯಾಪ್ತಿಯಲ್ಲಿ ಸುಮಾರು 6.25 ಕೋಟಿ ರೂ.ವೆಚ್ಚದಲ್ಲಿ ‘ಮಂಕಿಪಾರ್ಕ್’ ನಿರ್ಮಿಸಲು ಸರ್ಕಾರ ಯೋಜಿಸಿತ್ತು. ಇದಕ್ಕಾಗಿ ಸಾಗರ, ಹೊಸನಗರ ತಾಲೂಕಲ್ಲಿ 5 ಕಡೆ ಸುಮಾರು 170 ಎಕರೆ ಜಾಗವನ್ನು ಗುರುತಿಸಲಾಗಿತ್ತು. ಈ ಪ್ರದೇಶದಲ್ಲಿ ಕೋತಿಗಳಿಗೆ ಆಹಾರವಾಗಬಹುದಾದ ಹಣ್ಣಿನ ಮರಗಳನ್ನು ಬೆಳೆಸಿ, ಬೆಳೆಗಳಿಗೆ ಹಾನಿ ಉಂಟು ಮಾಡುವ ಕೋತಿಗಳನ್ನು ಇಲ್ಲಿಗೆ ತಂದು ಬಿಡುವ ಯೋಜನೆ ಅದಾಗಿತ್ತು. ಆದರೆ, ಸ್ಥಳೀಯರ ವಿರೋಧದಿಂದಾಗಿ ಈ ಯೋಜನೆ ಜಾರಿಯಾಗಲೇ ಇಲ್ಲ.

ರಾಜ್ಯದ ಶೇ.22 ಮೀಸಲು ಅರಣ್ಯ:ರಾಜ್ಯದ ಒಟ್ಟು 43,382 ಚದರ ಕಿಲೋಮೀಟರ್ ಅರಣ್ಯ ಪ್ರದೇಶದ ಪೈಕಿ ಸುಮಾರು 38,720 ಚದರ ಕಿಲೋಮೀಟರ್ ಅರಣ್ಯ ಭೂಮಿ ಮೀಸಲು ಹಾಗೂ ಸಂರಕ್ಷಿತ ಪ್ರದೇಶವಾಗಿದ್ದು, ಇದು ರಾಜ್ಯದ ಭೌಗೋಳಿಕ ವ್ಯಾಪ್ತಿಯ ಶೇ.22ರಷ್ಟಿದೆ. ಬಂಡೀಪುರ, ನಾಗರಹೊಳೆ ಸೇರಿ 5 ಹುಲಿ ಸಂರಕ್ಷಿತ ಪ್ರದೇಶಗಳು, 30 ವನ್ಯಜೀವಿ ಅಭಯಾರಣ್ಯಗಳು, 15 ಸಂರಕ್ಷಣಾ ಮೀಸಲುಗಳು ಮತ್ತು 1 ಸಮುದಾಯ ಮೀಸಲು ಪ್ರದೇಶಗಳ ವ್ಯಾಪ್ತಿಯಲ್ಲಿ ಇವು ಹರಡಿವೆ. ವನ್ಯಜೀವಿಗಳ ಸಂರಕ್ಷಣೆ, ಮರಗಳ ಸಮೃದ್ಧಿ, ಮಳೆ ಮತ್ತು ನದಿಗಳ ಉಗಮ ಸ್ಥಾನಗಳ ರಕ್ಷಣೆಗಾಗಿಯೇ ಮೀಸಲು ಅರಣ್ಯಗಳನ್ನು ನಿರ್ಮಿಸಲಾಗಿದ್ದರೂ ವನ್ಯ ಜೀವಿಗಳಿಗೀಗ ಅಲ್ಲಿ ಸಾಕಷ್ಟು ಆಹಾರ ಸಿಗುತ್ತಿಲ್ಲ. ಅರಣ್ಯಶಾಸ್ತ್ರ ಮಾರ್ಗಸೂತ್ರಗಳ ಪ್ರಕಾರ ಮೀಸಲು ಅರಣ್ಯಗಳಲ್ಲಿ ಸ್ಥಳೀಯ ಪರಿಸರ, ಮಣ್ಣಿನ ಗುಣಲಕ್ಷಣ, ಸ್ಥಳೀಯ ಹವಾಗುಣದ ಆಧಾರದ ಮೇಲೆ ಆಯಾ ಪ್ರದೇಶಕ್ಕೆ ಒಗ್ಗಿಕೊಳ್ಳುವ ಮತ್ತು ಸ್ಥಳೀಯ ಜೀವವೈವಿಧ್ಯಕ್ಕೆ ಪೂರಕವಾದ ಸ್ವಾಭಾವಿಕ ಮರಗಳನ್ನು ಬೆಳೆಸಲು ಪ್ರಾಮುಖ್ಯತೆ ನೀಡಲಾಗುತ್ತದೆ.ಮೊದಲೇ ಅರಣ್ಯ ಇಲ್ಲ, ಮಲೆನಾಡಿನ ಬಯಲು ಪ್ರದೇಶಗಳಲ್ಲೂ ಮೊದಲಿನಂತೆ ಹಣ್ಣಿನ ಮರಗಳನ್ನು ಬೆಳೆಸಲಾಗುತ್ತಿಲ್ಲ. ಅಲ್ಲೆಲ್ಲಾ ಅಡಕೆ, ತೆಂಗಿನ ಮರಗಳು ಬೆಳೆದು ನಿಂತಿವೆ. ಮೀಸಲು ಅರಣ್ಯದಲ್ಲೂ ಹಣ್ಣಿನ ಮರಗಳಿಲ್ಲ. ಅಂದ ಮೇಲೆ, ವನ್ಯಜೀವಿಗಳಿಗೆ ಆಹಾರ ಎಲ್ಲಿ ಸಿಗಬೇಕು? ಮೀಸಲು ಅರಣ್ಯದಲ್ಲಿ ಸ್ವಂತಕ್ಕಾಗಿ ಅಥವಾ ವಾಣಿಜ್ಯ ಉದ್ದೇಶಕ್ಕಾಗಿ ಹಣ್ಣಿನ ಮರಗಳನ್ನು ಬೆಳೆಸಲು ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ, ಕಾಡು ಪ್ರಾಣಿಗಳ ಆಹಾರಕ್ಕಾಗಿ ಮತ್ತು ಪರಿಸರ ಸಮತೋಲನಕ್ಕಾಗಿ ಸ್ಥಳೀಯ ಹಣ್ಣಿನ ಮರಗಳನ್ನು ಬೆಳೆಸಲು ಅವಕಾಶವಿದೆ. ವನ್ಯಪ್ರಾಣಿಗಳಿಗೆ ಬೇಕಾದ ಹುಲ್ಲು, ಮೇವಿನ ಗಿಡಗಳು ಮತ್ತು ನೀರಿನ ಕೊಳಗಳನ್ನು ಕಾಡಿನೊಳಗೆ ನಿರ್ಮಿಸಿ, ಅವಕ್ಕೆ ಸೂಕ್ತ ರಕ್ಷಣೆ ಕೊಡಲು ಅವಕಾಶವಿದೆ.

ಬೇರೆ ರಾಜ್ಯಗಳಲ್ಲಿ ಹೇಗಿದೆ?:ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ರಾಜ್ಯಗಳ ಮೀಸಲು ಅರಣ್ಯದಲ್ಲಿ ಕಾಡು ಮಾವು, ಕುಸುಮ್ ಮತ್ತು ಮಹಾ ಮರಗಳು ವ್ಯಾಪಕವಾಗಿವೆ. ಒಡಿಶಾ ಮತ್ತು ಜಾರ್ಖಂಡ್ ನಲ್ಲಿ ಮಹುವಾ ಮತ್ತು ನಾನಾ ರೀತಿಯ ಕಾಡು ಹಣ್ಣಿನ ಮರಗಳನ್ನು ಬೆಳೆಸಲಾಗುತ್ತಿದೆ. ಮಹಾರಾಷ್ಟ್ರ, ಕೇರಳದ ಮೀಸಲು ಅರಣ್ಯಗಳಲ್ಲಿ ಸೀತಾಫಲ, ಮಾವು, ಹುಣಸೆ, ನೇರಳೆ, ಇತರ ಅರಣ್ಯ ಹಣ್ಣಿನ ಮರಗಳು ಬೆಳೆಯುತ್ತಿವೆ. ಈಶಾನ್ಯ ಭಾರತದ ರಾಜ್ಯಗಳಾದ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ಹೊಲಾಂಗ್, ತ್ರಿಪುರದಲ್ಲಿ ಸುಗಂಧ ದ್ರವ್ಯಗಳಿಗೆ ಬಳಕೆಯಾಗುವ ಅಗರ್, ನಾಗಾಲ್ಯಾಂಡ್‌ನಲ್ಲಿ ಮಣ್ಣಿನ ಸಾರವನ್ನು ಹೆಚ್ಚಿಸುವ ಅಲ್ಡರ್, ಮಣಿಪುರದಲ್ಲಿ ಉನಿಂಗ್ಥೌ ಮರಗಳನ್ನು ಬೆಳೆಸಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ಆಗಬೇಕು. ಅತ್ಯಂತ ಹೆಚ್ಚು ಬರಗಾಲಕ್ಕೆ ತುತ್ತಾಗುವ ಕೋಲಾರ, ಸುತ್ತಮುತ್ತಲ ಪ್ರದೇಶಗಳಲ್ಲಿ ಅತಿ ಹೆಚ್ಚು ಅಂತರ್ಜಲ ಸೆಳೆಯುವ ಅಕೇಶಿಯಾ, ನೀಲಗಿರಿ ಮರಗಳನ್ನು ಹಿಂದೆ ಬೆಳೆಸಲಾಗಿತ್ತು. ಇದರ ವಿರುದ್ಧ ಪ್ರತಿಭಟನೆ ನಡೆದು 2017ರಲ್ಲಿ ನೀಲಗಿರಿ ಸಸಿಗಳ ನಾಟಿಗೆ ಸರ್ಕಾರ ನಿಷೇಧ ಹೇರಿತು. ಬಳಿಕ, ರೈತರು ಸ್ವತಃ ನೀಲಗಿರಿ ಮರಗಳನ್ನು ಅಲ್ಲಿ ಕಿತ್ತು ಹಾಕಲು ಮುಂದಾದರು.ವನ್ಯಜೀವಿಗಳಿಗೆ ಕಾಯ್ದಿರಿಸಿದ ಅರಣ್ಯಗಳು ಇಂದು ಸುಸ್ಥಿತಿಯಲ್ಲಿಲ್ಲ. ವಿವಿಧ ಕಾರಣಗಳಿಂದ ಛಿದ್ರಗೊಂಡು ದ್ವೀಪಗಳಂತೆ ಬಿಡಿ ಬಿಡಿಯಾಗಿವೆ. ಕಾಡು-ಕಾಡುಗಳ ನಡುವೆ ಸಂಪರ್ಕವೇ ಇಲ್ಲದಂತಾಗಿದೆ. ಕಾಡಿನ ಮಧ್ಯೆ ನಗರ, ಹಳ್ಳಿಗಳು ಹುಟ್ಟಿಕೊಂಡಿವೆ. ಇದರಿಂದಾಗಿ ಪ್ರಾಣಿಗಳ ಸಹಜ ಸಂಚಾರಕ್ಕೆ ಕಾರಿಡಾರ್ ಗಳೇ ಇಲ್ಲ. ಜೊತೆಗೆ, ಕಾಡಿನ ಸಸ್ಯ ಸಂಯೋಜನೆ ಕೂಡ ಬದಲಾಗಿದೆ. ಲಂಟಾನದಂತಹ ವಿದೇಶಿ ಕಳೆಗಳು ಕಾಡನ್ನು ಆವರಿಸಿಕೊಂಡಿದ್ದು, ಸ್ಥಳೀಯ ಸಸ್ಯಗಳ ಅಸ್ತಿತ್ವಕ್ಕೆ ಸವಾಲಾಗಿದೆ. ಕಾಡು ಮುಂಚಿಗಿಂತಲೂ ದಟ್ಟವಾಗಿರುವಂತೆ ಮೇಲ್ನೋಟಕ್ಕೆ ಕಂಡರೂ, ಜೀವ ವೈವಿಧ್ಯತೆ ಕದಡಿದೆ. ಉದಾಹರಣೆಗೆ, ಜಿಂಕೆ ಹುಲ್ಲಿನ ಜೊತೆಗೆ ಗಿಡ, ಅದರ ಚಿಗುರು, ಹಣ್ಣು ಕಾಯಿ, ಒಣಗಿದ ಎಲೆ, ಹೂವು ಎಲ್ಲವನ್ನೂ ತಿನ್ನುತ್ತದೆ. ಆದರೆ, ಈ ಜೀವ ವೈವಿಧ್ಯತೆಗೇ ಈಗ ಭಂಗ ಬಂದಿದೆ.