ಸಾರಾಂಶ
ಹಿಂದೂ ಧರ್ಮದ ಮೇಲೆ ವೈಚಾರಿಕ ಆಕ್ರಮಣ: ಬಿಜೆಪಿ ಸಂಘಟನಾ ಕಾರ್ಯದರ್ಶಿ ಆಕ್ರೋಶ
ಕನ್ನಡಪ್ರಭ ವಾರ್ತೆ ಉಡುಪಿಹಿಂದೂ ಧರ್ಮದ ಮೇಲೆ ವೈಚಾರಿಕ ಅಕ್ರಮಣಗಳನ್ನು ಎದುರಿಸುವ ಸವಾಲೀಗ ಬಿಜೆಪಿ ಮುಂದಿದೆ. ಈ ಅಕ್ರಮಣಕಾರರಿಗೆ ಮುಟ್ಟಿ ನೋಡುವಂತಹ ಉತ್ತರ ನೀಡುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದ್ದಾರೆ.
ಶುಕ್ರವಾರ ನಗರದ ಗುಂಡಿಬೈಲುನಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಇತ್ತೀಚೆಗೆ ಧರ್ಮಸ್ಥಳದ ಮೇಲೆ ವೈಚಾರಿಕ ಆಕ್ರಮಣ ನಡೆಯುತ್ತಿದೆ, ಕೆಲವು ವರ್ಷಗಳ ಹಿಂದೆ ಉಡುಪಿ ಕೃಷ್ಣಮಠದ ವಿರುದ್ಧವೂ ನಡೆಯಿತು, ನಂತರ ಶಬರಿಮಲೆ, ಈಶ ಫೌಂಡೇಶನ್, ಶನಿಶಿಂಗಣಾಪುರ, ಕುಂಭತ್ರಮೇಳಗಳ ಮೇಲೆಯೂ ಇಂತಹ ಆಕ್ರಮಣದ ಪ್ರಯತ್ನ ನಡೆಯಿತು, ಮುಂದೆ ಇನ್ನಷ್ಟು ಪುಣ್ಯ ಕ್ಷೇತ್ರಗಳ ಮೇಲೆಯೂ ನಡೆಯುತ್ತದೆ. ಯಾಕೆಂದರೆ ಹುಲಿಗೆ ರಕ್ತದ ರುಚಿ ಸಿಕ್ಕಿದೆ ಎಂದವರು ಹೇಳಿದರು.ಇದು ಕೇವಲ ದೇವಾಲಯಗಳ ವಿಷಯದಲ್ಲಿ ಮಾತ್ರವಲ್ಲ. ಗೋಹತ್ಯೆ, ಕೌಟುಂಬಿಕ ವ್ಯವಸ್ಥೆ, ನಮ್ಮ ಧಾರ್ಮಿಕ ಮೌಲ್ಯಗಳ ವಿಷಯಗಳಲ್ಲಿಯೂ ಇಂತಹ ಅಕ್ರಮಣ ನಡೆಯುತ್ತಲೇ ಇದೆ, ಇದನ್ನು ಸರಿಯಾಗಿ ಎದುರಿಸಲು ಸಂಕಲ್ಪವನ್ನ ನಾವು ನಮ್ಮ ಕಾರ್ಯಾಲಯದಲ್ಲಿ ಮಾಡಬೇಕು ಎಂದವರು ಹೇಳಿದರು.
ಬಿಜೆಪಿ ಕಚೇರಿಗಳು ಸಾಮಾನ್ಯ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವಂತಾಗಬೇಕು. ಇಲ್ಲಿಗೆ ಬಂದರೆ ತಮ್ಮ ಸಮಸ್ಯೆಗಳು ಪರಿಹಾರವಾಗುತ್ತವೆ ಎಂಬ ವಿಶ್ವಾಸ ಜನಸಾಮಾನ್ಯರಲ್ಲಿ ಮೂಡಬೇಕು ಎಂದವರು ಪಕ್ಷದ ನಾಯಕರಿಗೆ ಸೂಚನೆ ನೀಡಿದರು. ಪಕ್ಷದಲ್ಲಿ ಶಕುನಿಗಳು!:ಈಗೀಗ ಪಕ್ಷದಲ್ಲಿ ಶಕುನಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದ ಸಂತೋಷ್, ಪಕ್ಷದ ನಾಯಕರಿಗೆ ಬದ್ಧತೆ ಮತ್ತು ಸಂಯಮ ಇರಬೇಕು, ಪಕ್ಷದ ಕಾರ್ಯಕರ್ತರು ಕೇವಲ ಪ್ರಶಿಕ್ಷಣದಿಂದ ಮಾತ್ರವಲ್ಲ, ಕೆಲವನ್ನು ಪಕ್ಷದ ನಾಯಕರನ್ನು ನೋಡಿ ತಿಳಿದುಕೊಳ್ಳುತ್ತಾರೆ, ಈ ಬಗ್ಗೆ ನಾಯಕರಿಗೆ ಎಚ್ಚರವಿರಬೇಕು ಎಂದರು.ಸಂಸದ ಕೋಟ ಶ್ರೀನಿವಾಸ ಪೂಜಾರಿ, ಪಕ್ಷದ ಹಿರಿಯರಾದ ಗುಜ್ಜಾಡಿ ಪ್ರಭಾಕರ ನಾಯಕ್ ಮಾತನಾಡಿದರು. ಶಾಸಕರಾದ ಸುನಿಲ್ ಕುಮಾರ್, ಯಶ್‌ಪಾಲ್ ಸುವರ್ಣ, ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ ಶೆಟ್ಟಿ ಗಂಟಿಹೊಳೆ, ಪಕ್ಷ ಮತ್ತು ಸಂಘ ಪರಿವಾರದ ಹಿರಿಯರಾದ ಬೋಳ ಪ್ರಭಾಕರ ಕಾಮತ್, ಕೆ. ಟಿ. ಪೂಜಾರಿ, ಶೀಲಾ ಶೆಟ್ಟಿ, ಮಾಜಿ ಅಧ್ಯಕ್ಷರಾದ ಉದಯಕುಮಾರ್ ಶೆಟ್ಟಿ, ಮಟ್ಟಾರ್ ರತ್ನಾಕರ ಹೆಗ್ಡೆ ಮತ್ತು ಸುರೇಶ್ ನಾಯಕ್ ಕುಯಿಲಾಡಿ, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಾಜಿ ಶಾಸಕ ಲಾಲಾಜಿ ಮೆಂಡನ್ ವೇದಿಕೆಯಲ್ಲಿದ್ದರು.ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ಸ್ವಾಗತಿಸಿದರು. ರೇಶ್ಮಾ ಉದಯ ಶೆಟ್ಟಿ ಮತ್ತು ಕುತ್ಯಾರು ಪ್ರಸಾದ್ ಶೆಟ್ಟಿ ನಿರೂಪಿಸಿದರು. ಕಾರ್ಯದರ್ಶಿ ಪ್ರಿಯದರ್ಶಿನಿ ವಂದಿಸಿದರು. .......
ಉತ್ತರ ಕರ್ನಾಟಕ ನೋಡಿ ಕಲಿಯಿರಿಉಡುಪಿಯವರಾದ ಬಿ. ಎಲ್. ಸಂತೋಷ್ ಕರಾವಳಿಯಲ್ಲಿ ಪಕ್ಷ ಸಂಘಟನೆಯ ಬಗ್ಗೆ ವೇದಿಕೆಯಲ್ಲಿಯೇ ಅಸಮಾಧಾನ ವ್ಯಕ್ತಪಡಿಸಿದರು. ಹಿಂದೆ ಸಂಘಟನೆ, ನಾಯಕತ್ವಕ್ಕೆ ಉಡುಪಿ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಿತ್ತು, ಆದರೆ ಇವತ್ತು ಉಡುಪಿ ಜಿಲ್ಲೆ ಎಲ್ಲಾ 5 ವಿಧಾನ ಸಭಾ ಕ್ಷೇತ್ರಗಳನ್ನು, ಲೋಕಸಭೆ, ಜಿ.ಪಂ.ಗಳಲ್ಲಿ ಸತತವಾಗಿ ಗೆಲ್ಲುತ್ತಿದೆ, ಅದಕ್ಕೆ ದ.ಕ. ಜಿಲ್ಲೆ ಪ್ರತಿಸ್ಪರ್ಧೆಯನ್ನು ಒಡ್ಡುತ್ತಿದೆ, ಈ ಗೆಲ್ಲುವುದೊಂದನ್ನು ಬಿಟ್ಟು, ಪಕ್ಷ ಸಂಘಟನೆ, ನಾಯಕತ್ವವನ್ನು ಕರಾವಳಿ ಜಿಲ್ಲೆಗಳು ಉತ್ತರ ಕರ್ನಾಟಕ ಜಿಲ್ಲೆಗಳಿಂದ ಕಲಿಯಬೇಕು ಎಂದು ಚಾಟಿ ಬೀಸಿದರು.