ಸಾರಾಂಶ
ಚಿಕ್ಕಮಗಳೂರಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಮಾಜದಲ್ಲಿ ವಿವಿಧ ಹಂತದ ಜವಾಬ್ದಾರಿಗಳನ್ನು ನಿಭಾಯಿಸುವ ಮಹಿಳೆ ಸಮಾಜದ ಶಿಲ್ಪಿ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಪುರುಷ ಪ್ರಧಾನ ಸಮಾಜ ಇದ್ದ ಸಂದರ್ಭ ಮಹಿಳೆಯರಿಗೆ ಆಗುತ್ತಿದ್ದ ಶೋಷಣೆ ಮನ ಗಂಡು ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಾರಂಭ ಮಾಡಿತು. 1997 ರಲ್ಲಿ ಮಹಿಳಾ ದಿನ ಪ್ರಾರಂಭಿ ಸಿದ್ದರೂ ಅದಕ್ಕೂ ಮೊದಲೇ ನಮ್ಮ ಸಮಾಜದಲ್ಲಿ ನಡೆಯತ್ತಿದ್ದ ಮಹಿಳಾ ಶೋಷಣೆ ತಡೆಯಲು ಹಾಗೂ ಮಹಿಳೆಯರು ಧಾರ್ಮಿಕ ಮತ್ತು ಸಾಮಾಜಿಕವಾಗಿ ಮುಂದೆ ಬಂದು ಸಮ ಸಮಾಜ ನಿರ್ಮಿಸಬೇಕು ಎಂಬ ಸದುದ್ದೇಶದಿಂದ 12 ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣ ಕ್ರಾಂತಿಕಾರಿ ಹೆಜ್ಜೆ ಇಟ್ಟರು. 19 ನೇ ಶತಮಾನದಲ್ಲಿ ದೇಶದ ಮಹಿಳೆಯರಿಗೆ ಮತದಾನದ ಹಕ್ಕು ಇರಲಿಲ್ಲ. ಆಗ ಮಹಿಳೆಯರಿಗೆ ಮತದಾನದ ಹಕ್ಕು ಕೊಡಿಸಿದ್ದು ಡಾ.ಬಿ.ಆರ್.ಅಂಬೇಡ್ಕರ್ ಎಂದು ಹೇಳಿದರು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಹೆಣ್ಣು ಮಗಳಾಗಿ, ಪತ್ನಿಯಾಗಿ, ತಾಯಿಯಾಗಿ, ಅಜ್ಜಿಯಾಗಿ ಅನೇಕ ಜವಾಬ್ದಾರಿಗಳನ್ನು ನಿಭಾಯಿಸಿ ಜೀವನವನ್ನು ಬೆಳಗುತ್ತಾರೆ ಎಂದರು.ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಕಾರಿ ಡಾ.ಬಿ.ಗೋಪಾಲಕೃಷ್ಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಜಾ ನಾಯ್ಕ, ಸಿಡಿಪಿಒ ಚರಣ್‌ರಾಜ್ ಉಪಸ್ಥಿತರಿದ್ದರು.
-- ಬಾಕ್ಸ್---ಅಂಗಾಂಗ ದಾನ ಕುರಿತು ಕಾರ್ಯಾಗಾರ
ಅಂಗಾಂಗ ದಾನ ಇನ್ನೊಬ್ಬರ ಜೀವ ಉಳಿಸಲು ಸಹಕಾರಿ, ಕೆಲ ದಿನಗಳ ಹಿಂದೆ ಮೆದುಳು ನಿಷ್ಕ್ರಿಯ ಗೊಂಡಿದ್ದ ಮಹಿಳೆ ಕೈಯನ್ನು ಪೈಂಟರ್ ಒಬ್ಬರಿಗೆ ಜೋಡಿಸಿದ್ದು ಆ ವ್ಯಕ್ತಿಗೆ ಜೀವ ನೀಡಿದಂತಾಗಿದೆ. ಆದ್ದರಿಂದ ಎಲ್ಲರೂ ಅಂಗಾಂಗ ದಾನ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಜೆಸಿಐ ಚಿಕ್ಕಮಗಳೂರು ಮಲ್ನಾಡ್ ಘಟಕ ಅಧ್ಯಕ್ಷೆ ಪುಷ್ಪ ವಿಜಯ್ ಹೇಳಿದರು.ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದಲ್ಲಿ ಜೆಸಿಐ ಚಿಕ್ಕಮಗಳೂರು ಮಲ್ನಾಡ್, ಭೂಮಿಕ ಸಂಸ್ಥೆಯ ಆಶ್ರಯದಲ್ಲಿ ಶುಕ್ರವಾರ ಅಂಗಾಂಗ ದಾನ ಮಹತ್ವ ಕುರಿತ ಕಾರ್ಯಾಗಾರವನ್ನು ಜೆಸಿಐ ಅಧ್ಯಕ್ಷೆ ಪೂರ್ಣಿಮಾ ಅನಿಲ್ ಅಂಗಾಂಗ ದಾನ ನೋಂದಣಿ ಮಾಡುವ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಜೆಸಿಐ ತರಬೇತಿದಾರಾದ ವಿಜಯಕುಮಾರ್ ಮಾತನಾಡಿ, ಮೃತ ವ್ಯಕ್ತಿಯ ದೇಹದ ಹೃದಯ, ಶ್ವಾಸಕೋಶ, ಕಣ್ಣು, ಚರ್ಮ, ಮೂತ್ರಪಿಂಡ ಹೀಗೆ ಮನುಷ್ಯನ ದೇಹದ ವಿವಿಧ ಅಂಗಗಳು 15ಕ್ಕೂ ಹೆಚ್ಚು ಜನರ ಜೀವಕ್ಕೆ ಆಧಾರವಾಗುವುದು ಎಂದು ಅಂಗಾಂಗ ದಾನದ ಮಹತ್ವ ತಿಳಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಭೂಮಿಕಾ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಅನಿಲ್ ಆನಂದ್, ದಾನಗಳಲ್ಲಿ ಶ್ರೇಷ್ಠವಾದ ರಕ್ತ ದಾನ ಎಂದು ಹೇಳುತ್ತಿದ್ದು ಇಂದು ಸಾವಿನ ನಂತರ ಮನುಷ್ಯನ ದೇಹ ಮಣ್ಣಿಗೆ ಹೋಗುವ ಬದಲು ಬೇರೆಯವರ ದೇಹ ದಲ್ಲಿ ಎಲ್ಲಾ ಅಂಗಾಂಗಗಳು ಪುನರ್ ಜೀವಿಸಿ ಅವರ ಜೀವನಕ್ಕೂ ಬೆಳಕಾಗುತ್ತದೆ ಇದರಿಂದ ನಮ್ಮ ಜೀವನ ಸಾರ್ಥಕ ವಾಗುತ್ತದೆ. ಹಾಗಾಗಿ ಸರ್ಕಾರ ಜೀವನ ಸಾರ್ಥಕತೆ ಎಂಬ ಜಾಲತಾಣ ರೂಪಿಸಿದ್ದು ಅದರಲ್ಲಿ ನಾವೇ ಸ್ವಯಂ ನೋಂದಣಿ ಮಾಡಿಕೊಳ್ಳಬಹುದು ಎಂದು ಹೇಳಿದರು. ಜಿಲ್ಲಾ ಸರ್ಕಾರಿ ಆಸ್ಪತ್ರೆ ರೋಹಿತ್ ಅಂಗಾಂಗ ದಾನ ನೊಂದಣಿ ಕಾರ್ಯ ನಡೆಸಿಕೊಟ್ಟರು. 15ಕ್ಕೂ ಹೆಚ್ಚು ಮಂದಿ ದೇಹ ದಾನ ನೋಂದಣಿ ಮಾಡಿಸಿದರು. ಕಾರ್ಯಕ್ರಮದಲ್ಲಿ ಸ್ವಾಸ್ಥ್ಯ ಭೂಮಿ ಪ್ರತಿಷ್ಠಾನದ ಗೌರವಾಧ್ಯಕ್ಷ ಗುರುಮೂರ್ತಿ ನಾಡಿಗ್, ಜೂನಿಯರ್ ಜೆಸಿ ಅಧ್ಯಕ್ಷ ಆಯುಷ್ ಅನಿಲ್, ಜೆಸಿಐನ ಪ್ರದೀಪ್, ಶೋಭಾ ಭಾಸ್ಕರ್, ಸಚಿನ್, ರೋಹಿತ್, ಮನೋಜ್, ನಿಸರ್ಗ ಹಾಜರಿದ್ದರು. 8 ಕೆಸಿಕೆಎಂ 3ಚಿಕ್ಕಮಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಎಚ್.ಡಿ. ತಮ್ಮಯ್ಯ ಉದ್ಘಾಟಿಸಿದರು.