ನಾಗರಹೊಳೆ ಮತ್ತು ಬಂಡೀಪುರ ಸಫಾರಿಗಳು ಪ್ರವಾಸೋದ್ಯಮ ಪ್ರಮುಖ ಕೇಂದ್ರಗಳು.

ಕನ್ನಡಪ್ರಭ ವಾರ್ತೆ ಮೈಸೂರು

ರಾಜ್ಯ ಸರ್ಕಾರವು ಹೊಸ ಎಸ್‌ಒಪಿ (ಪ್ರಾಮಾಣಿಕೃತ ಕಾರ್ಯಾಚರಣೆ ವಿಧಾನ) ಯನ್ನು ರಚಿಸಿ ಬಂಡೀಪುರ ಮತ್ತು ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿಯನ್ನು ಪುನಾರಂಭಿಸಬೇಕು ಎಂದು ಮೈಸೂರು ಟ್ರಾವಲ್ಸ್‌ ಅಸೋಷಿಯೇಷನ್‌, ಸ್ಕಾಲ್‌ ಇಂಟರ್‌ ನ್ಯಾಷನಲ್‌, ಮೈಸೂರು ಹೊಟೇಲ್‌ ಮಾಲೀಕರ ಸಂಘದ ಪದಾಧಿಕಾರಿಗಳು ಮನವಿ ಮಾಡಿದರು.

ನಗರದ ಸಂದೇಶ್ ದಿ ಪ್ರಿನ್ಸ್ ಹೊಟೇಲ್‌ ನಲ್ಲಿ ಗುರುವಾರ ಸುದ್ದಿಗೋಷ್ಠಿ ಮಾತನಾಡಿದ ಅವರು, ಸರ್ಕಾರವು ರೈತರ ಸುರಕ್ಷತೆಯನ್ನು ಗಮನದಲ್ಲಿ ಇರಿಸಿಕೊಂಡು, ಪ್ರವಾಸೋದ್ಯಮಕ್ಕೂ ಹೊಡೆತ ಬೀಳದ ರೀತಿಯಲ್ಲಿ ಪರಿಷ್ಕೃತವಾದ ಎಸ್‌ಒಪಿ ರಚಿಸಬೇಕು ಎಂದು ಕೋರಿದರು.

ಮೈಸೂರು ಟ್ರಾವೆಲ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ಬಿ.ಎಸ್‌. ಪ್ರಶಾಂತ್‌ ಮಾತನಾಡಿ, ನಾಗರಹೊಳೆ ಮತ್ತು ಬಂಡೀಪುರ ಸಫಾರಿಗಳು ಪ್ರವಾಸೋದ್ಯಮ ಪ್ರಮುಖ ಕೇಂದ್ರಗಳು. ಇಲ್ಲಿಗೆ ವಿದೇಶಿಗರು 6 ತಿಂಗಳ ಮೊದಲೇ ಮುಂಗಡವಾಗಿ ಬುಕ್‌ ಮಾಡಿದ್ದಾರೆ. ಈಗ ಸಫಾರಿ ಇಲ್ಲ ಎಂದರೇ ಅವರು ವಾಪಸ್‌ ಹೋಗುತ್ತಾರೆ. ಮತ್ತೆ ಈ ವಾತಾವರಣ ಹಳಿಗೆ ಮರಳಾಬೇಕಾದರೇ 3- 4 ವರ್ಷಗಳೇ ಬೇಕಾಗುತ್ತವೆ. ಹೀಗಾಗಿ, ಅರಣ್ಯ ಸಚಿವರು ಸಫಾರಿಯನ್ನು ಪುನರ್‌ ಆರಂಭಿಸಲು ಆದೇಶ ನೀಡಬೇಕು ಎಂದು ಮನವಿ ಮಾಡಿದರು.

ಪ್ರವಾಸೋದ್ಯಮಕ್ಕೆ ಅತೀ ಪ್ರಮುಖ ಹಾಗೂ ಲಾಭದಾಯಕವಾಗಿರುವ ಚಳಿಗಾಲದ ಸಮಯದಲ್ಲಿಯೇ ಸಫಾರಿಗೆ ಸಂಪೂರ್ಣ ನಿಷೇಧ ವಿಧಿಸಿರುವುದು ಈ ಉದ್ಯಮದ ಮೇಲೆ ಆಘಾತ ತಂದಿದೆ. ಇದರಿಂದಾಗಿ ಈ ಕ್ಷೇತ್ರವನ್ನು ಅವಲಂಬಿಸಿರುವ ಸಾವಿರಾರು ಕುಟುಂಬಗಳ ಜೀವನೋಪಾಯ ಸಂಕಷ್ಟಕ್ಕೆ ಸಿಲುಕಿದೆ ಎಂದರು.

ಸ್ಕಾಲ್‌ ಇಂಟರ್‌ ನ್ಯಾಷನಲ್‌ ಮೈಸೂರು ಅಧ್ಯಕ್ಷ ಸಿ.ಎ. ಜಯಕುಮಾರ್‌ ಮಾತನಾಡಿ, ಜಂಗಲ್ ಸಫಾರಿಯೂ ಪ್ರವಾಸೋದ್ಯಮದ ಅತ್ಯಂತ ಅಮೂಲ್ಯ ಹಾಗೂ ಪ್ರವಾಸಿಸ್ನೇಹಿ ಉದ್ಯೋಗಗಳಲ್ಲಿ ಒಂದಾಗಿದ್ದು, ಚಾಲಕರು, ಮಾರ್ಗದರ್ಶಕರು, ಬುಕ್ಕಿಂಗ್ ಸಿಬ್ಬಂದಿ, ಜೀಪ್ ಮಾಲೀಕರು ಹಾಗೂ ಅನೇಕ ನೆಲಮಟ್ಟದ ಕಾರ್ಮಿಕರು ಈ ಕ್ಷೇತ್ರದ ಆದಾಯದ ಮೇಲೆಯೇ ಸಂಪೂರ್ಣವಾಗಿ ಅವಲಂಬಿತರಾಗಿದ್ದಾರೆ. ಪ್ರಸ್ತುತ ಸ್ಥಿತಿಯಲ್ಲಿ ಅವರ ಜೀವನೋಪಾಯ ಸಂಪೂರ್ಣವಾಗಿ ಸ್ಥಗಿತಗೊಂಡಂತಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ರೈತರು ಹಾಗೂ ಉದ್ಯಮಿಗಳ ಆಶಯಗಳನ್ನು ಪರಿಗಣಿಸಿ, ಒಂದು ತೀರ್ಮಾನಕ್ಕೆ ಬರಬೇಕು ಎಂದು ಕೋರಿದರು.

ಹೊಟೇಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಮಾತನಾಡಿ, ಮೈಸೂರಿನಲ್ಲಿ ಎಲ್ಲಾ ಹೊಟೇಲ್‌ ಗಳಲ್ಲಿ ಸುಮಾರು 10500 ರೂಮ್‌ ಗಳಿವೆ. ಈಗ ಇವುಗಳಲ್ಲಿ ಶೇ.10 ರಷ್ಟು ರೂಮ್‌ ಗಳು ಭರ್ತಿಯಾಗುತ್ತಿಲ್ಲ. ಪ್ರವಾಸಿಗರೇ ಬಾರದೇ ಇದ್ದರೆ ಉದ್ಯಮ ನಡೆಸುವುದು ಕಷ್ಟವಾಗುತ್ತದೆ. ಹೀಗಾಗಿ, ಸರ್ಕಾರ ಸಫಾರಿಯನ್ನು ಮತ್ತೆ ಆರಂಭಿಸಬೇಕು ಎಂದು ಮನವಿ ಮಾಡಿದರು.

ರೆಸಾರ್ಟ್‌ ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಾದ ಸ್ವಾಮಿ ಹೊಸಮಾಳ, ಮಂಜು, ರಾಜಶೇಖರ್‌ ರೆಡ್ಡಿ, ಚಾಮರಾಜು, ಪುಟ್ಟಸ್ವಾಮಿ ನಾಯಕ, ತಿಮ್ಮಪ್ಪ ಗೌಡ ಇದ್ದರು.