ಬಂಗ್ರಕೂಳೂರಲ್ಲಿ ಏಕಾಏಕಿ ಬಾಯ್ದೆರೆದ ರಸ್ತೆ, ಸಂಚಾರ ಬಂದ್‌

| Published : Jul 03 2024, 12:22 AM IST

ಬಂಗ್ರಕೂಳೂರಲ್ಲಿ ಏಕಾಏಕಿ ಬಾಯ್ದೆರೆದ ರಸ್ತೆ, ಸಂಚಾರ ಬಂದ್‌
Share this Article
  • FB
  • TW
  • Linkdin
  • Email

ಸಾರಾಂಶ

ರಸ್ತೆ ಇನ್ನಷ್ಟು ಕುಸಿಯದಂತೆ ಮರಳು ಚೀಲಗಳನ್ನು ಪೇರಿಸಿಡಲಾಗಿದೆ. ಇದರ ಪಕ್ಕದ ರಾಜಕಾಲುವೆಗೆ ಕಟ್ಟಿರುವ ತಡೆಗೋಡೆ ಹಳೆದಾಗಿದ್ದು, ನಡುವೆ ತಗ್ಗು ಜಾಗ ಇರುವುದರಿಂದ ಈ ರಸ್ತೆ ಕುಸಿತಗೊಂಡಿದೆ ಎಂದು ಅಂದಾಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ನಗರದ ಬಂಗ್ರಕೂಳೂರಿನ ಎ.ಜೆ. ಎಂಜಿನಿಯರಿಂಗ್ ಕಾಲೇಜು ರಸ್ತೆ ಮಂಗಳವಾರ ಏಕಾಏಕಿ ಕುಸಿದು ಅಪಾಯಕಾರಿಯಾಗಿ ಪರಿಣಮಿಸಿದೆ. ರಸ್ತೆ ಇನ್ನಷ್ಟು ಕುಸಿಯುವ ಭೀತಿಯೂ ಎದುರಾಗಿದೆ.

ಈ ರಸ್ತೆಯಲ್ಲಿ ವಾರದ ಹಿಂದೆಯೇ ಸಣ್ಣ ಬಿರುಕು ಕಂಡುಬಂದಿತ್ತು. ಇದನ್ನು ಗಮನಿಸಿದ ಸ್ಥಳೀಯ ಕಾರ್ಪೊರೇಟರ್ ಕಿರಣ್ ಕುಮಾರ್ ಅವರು ಮೆಸ್ಕಾಂಗೆ ಮಾಹಿತಿ ನೀಡಿ ಅಲ್ಲಿದ್ದ ವಿದ್ಯುತ್ ಕಂಬಗಳನ್ನು ತೆರವು ಮಾಡಿಸಿದ್ದರು. ಮಂಗಳವಾರ ಬೆಳಗ್ಗೆ ರಸ್ತೆಯು 50 ಮೀಟರ್‌ ಉದ್ದಕ್ಕೂ ಬಾಯ್ತೆರೆದು ನಿಂತಿದೆ. ಕುಸಿತಗೊಂಡ ರಸ್ತೆಯಲ್ಲಿ ಯಾರೂ ಹೋಗದಂತೆ ಹಗ್ಗ ಕಟ್ಟಿ ತಡೆ ಹಾಕಲಾಗಿದೆ.

ರಸ್ತೆ ಇನ್ನಷ್ಟು ಕುಸಿಯದಂತೆ ಮರಳು ಚೀಲಗಳನ್ನು ಪೇರಿಸಿಡಲಾಗಿದೆ. ಇದರ ಪಕ್ಕದ ರಾಜಕಾಲುವೆಗೆ ಕಟ್ಟಿರುವ ತಡೆಗೋಡೆ ಹಳೆದಾಗಿದ್ದು, ನಡುವೆ ತಗ್ಗು ಜಾಗ ಇರುವುದರಿಂದ ಈ ರಸ್ತೆ ಕುಸಿತಗೊಂಡಿದೆ ಎಂದು ಅಂದಾಜಿಸಲಾಗಿದೆ.

ಈ ರಸ್ತೆಯನ್ನೇ ಸಂಪರ್ಕ ರಸ್ತೆಯಾಗಿ ಅವಲಂಬಿಸಿರುವ ಸುಮಾರು 10 ಮನೆಗಳಿದ್ದು, ಅವರಿಗೆ ತಾತ್ಕಾಲಿಕವಾಗಿ ಪರ್ಯಾಯ ರಸ್ತೆಯ ವ್ಯವಸ್ಥೆ ಮಾಡಲಾಗಿದೆ.

ಸ್ಥಳೀಯ ಕಾರ್ಪೊರೇಟರ್‌ ಕಿರಣ್ ಕುಮಾರ್ ಹಾಗೂ ಪಾಲಿಕೆಯ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇನ್ನಷ್ಟು ಅನಾಹುತ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ.