ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಮಹಾಶಿವರಾತ್ರಿ ಹಬ್ಬವನ್ನು ಭಕ್ತಿಭಾವ, ಸಡಗರದಿಂದ ಆಚರಿಸಲಾಯಿತು. ಎಲ್ಲ ಶಿವ ದೇವಾಲಯಗಳಿಗೆ ಭಕ್ತ ಸಾಗರ ಹರಿದು ಬಂದಿತ್ತು.ಬುಧವಾರ ಮುಂಜಾನೆಯಿಂದಲೇ ದೇವಾಲಯಗಳತ್ತ ತೆರಳಿದ ಭಕ್ತರು, ದೇವರಿಗೆ ವಿಶೇಷ ಅಲಂಕಾರ, ಪೂಜೆ, ಅಭಿಷೇಕ, ನೈವೇದ್ಯಗಳನ್ನು ಅರ್ಪಿಸುವ ಜೊತೆಗೆ ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಹಬ್ಬದ ಪ್ರಯುಕ್ತ ಚಿಕ್ಕಬಳ್ಳಾಪುರ, ನಂದಿ, ಚಿಂತಾಮಣಿ, ಗೌರಿಬಿದನೂರು, ಕೈವಾರ, ಇಶಾ ಕೇಂದ್ರ ಸೇರಿದಂತೆ ಜಿಲ್ಲೆಯ ಇತರೆ ತಾಲೂಕುಗಳಲ್ಲೂ ಶಿವ-ಪಾರ್ವತಿ, ಈಶ್ವರ ಹಾಗೂ ಇನ್ನಿತರ ದೇವಾಲಯಗಳನ್ನು ಹೂ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ದೇವಾಲಗಳ ಆವರಣದಲ್ಲಿ ಹಾಗೂ ಸುತ್ತಮುತ್ತ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.
ಭೋಗನಂದೀಶ್ವರಗೆ ಪೂಜೆದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ತಾಲೂಕಿನ ಶ್ರೀ ಭೋಗನಂದೀಶ್ವರ ಸ್ವಾಮಿ ದೇವಾಲಯದಲ್ಲಿ ನಂದೀಶ್ವರನಿಗೆ ವಿಶೇಷ ಪೂಜೆಗಳು ನಡೆದವು. ಬೆಂಗಳೂರು, ದೊಡ್ಡಬಳ್ಳಾಪುರ, ಕೋಲಾರ ಸೇರಿದಂತೆ ಜಿಲ್ಲೆ ಹಾಗೂ ಪಕ್ಕದ ಆಂಧ್ರದಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಅಲ್ಲದೆ, ಸಾಲಾಗಿ ನಿಂತು ಭೋಗನಂದೀಶ್ವರನ ದರ್ಶನವನ್ನು ಕೂಡ ಪಡೆದರು.
ದೇವಾಲಯದ ಒಳಗಡೆಯಿರುವ ಬೃಹತ್ ಕಲ್ಯಾಣಿಯಲ್ಲಿ ವಿಶೇಷ ಪೂಜಾ ಕೈಂಕರ್ಯವನ್ನು ನೆರೆವೇರಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸಿದ ಕಾರಣ, ಇದನ್ನು ನಿಭಾಯಿಸಲು ಪೊಲೀಸ್, ಹೋಂಗಾರ್ಡ್‌ಗಳನ್ನು ನಿಯೋಜಿಸಲಾಗಿತ್ತು. ವಾಹನಗಳ ದಟ್ಟಣೆ ಹೆಚ್ಚಾದ್ದಗಿದ್ದರಿಂದ ನಂದಿಯಿಂದ ಚಿಕ್ಕಬಳ್ಳಾಪುರ ರಸ್ತೆಯ ಅರ್ಧ ಕಿಲೋ ಮೀಟರ್ ದೂರದಲ್ಲಿ ಹಾಗೂ ಹೆದ್ದಾರಿ ಕಡೆ ಅರ್ಧ ಕಿ. ಮೀ. ದೂರದಲ್ಲಿ ಪ್ರತ್ಯೇಕ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು.ಜೋಡಿ ಬ್ರಹ್ಮ ರಥೋತ್ಸವಕ್ಕೆ ಸಿದ್ಧತೆ
ನಂದಿ ಗ್ರಾಮದ ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಇತಿಹಾಸ ಪ್ರಸಿದ್ಧ ದೇವಾಲಯದ ಆವರಣದಲ್ಲಿ ಭೋಗನಂದೀಶ್ವರ ದೇವಾಲಯದಲ್ಲಿ ಶಿವರಾತ್ರಿ ಜಾಗರಣೆಯ ಮರುದಿನ ಶನಿವಾರ ಶಿವಪಾರ್ವತಿ ಹಾಗೂ ಗಣೇಶ ಮೂರ್ತಿಗಳ ಜೋಡಿ ರಥೋತ್ಸವ ನಡೆಯುವುದು ವಾಡಿಕೆ. ಜೋಡಿ ರಥೋತ್ಸವಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಿದ್ಧತೆಗಳನ್ನು ಮಾಡಿದೆ.ಇಶಾ ಕೇಂದ್ರದಲ್ಲಿ ಜನಸಾಗರ
ತಾಲೂಕಿನ ಅಗಲಗುರ್ಕಿ ಸಮೀಪದ ಇಶಾ ಕೇಂದ್ರದ ಆದಿಯೋಗಿ ದರ್ಶನ ಪಡೆಯಲು ಲಕ್ಷಾಂತರ ಜನರು ಆಗಮಿಸಿದ್ದರು. ಯೋಗ ಲಿಂಗೇಶ್ವರ ದೇವರಿಗೆ ದೀಪ ಬೆಳಗಿಸುವ ಮತ್ತು ಜಲಾಭಿಷೇಕ ಮಾಡಲು ಭಕ್ತಾಧಿಕಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಇಶಾ ಕೇಂದ್ರಕ್ಕೆ ತಲುಪಲು ವಾಹನಗಳ ದಟ್ಟಣೆ ಹೆಚ್ಚಾಗಿತ್ತು. ಇಶಾ ಕೇಂದ್ರದಿಂದ ಹೆದ್ದಾರಿ ವರೆಗೆ ವಾಹನ ದಟ್ಟಣೆಯಿಂದಾಗಿ ಸುಮಾರು 10 ಕಿಮೀ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು. ಹಾಗೆಯೇ ಪ್ರಜಾಪಿತ ಬ್ರಹ್ಮ ಕುಮಾರಿ ಆಶ್ರಮದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ನವ ಧಾನ್ಯಗಳಿಂದ ಶಿವಲಿಂಗ ಮೂರ್ತಿಗಳನ್ನು ಸ್ಥಾಪಿಸಲಾಗಿತ್ತು.ನಗರದ ಒಕ್ಕಲಿಗ ಕಲ್ಯಾಣ ಮಂಟಪದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಪ್ರಜಾಪಿತ ಈಶ್ವರಿ ಬ್ರಹ್ಮಕುಮಾರಿ ಸಮಾಜದ ವತಿಯಿಂದ ಹುತ್ತ ದಿಂದ ಉದ್ಭವವಾಗಿರುವ ಶಿವಲಿಂಗದ ದರ್ಶನ ಪಡೆದ ಭಕ್ತರು ಪುನೀತರಾದರು.