ಕನ್ನಡಪ್ರಭ ವಾರ್ತೆ ಮೈಸೂರು

ಗೌತಮ ಬುದ್ಧರು ಇಡೀ ಜಗತ್ತಿಗೆ ಜ್ಞಾನದ ಮಹಿಮೆಯನ್ನು ತುಂಬಲು ಜನಿಸಿದ ದಾರ್ಶನಿಕ ಎಂದು ಶಾಸಕ ಎ.ಆರ್‌. ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ನಗರದ ನಮನ ಕಲಾಮಂಟಪದಲ್ಲಿ ಟಿ. ನರಸೀಪುರದ ಯಾಚೇನಹಳ್ಳಿಯ ನನ್ನವ್ವ ಸಾಂಸ್ಕೃತಿಕ ಕಲಾತಂಡದ ವತಿಯಿಂದ ಬುದ್ಧ ಜಯಂತಿ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಯುದ್ದಕ್ಕೆ ಪರಿಹಾರ ಬುದ್ಧ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಬುದ್ಧರು ಧಮ್ಮವನ್ನು ಜೀವನದ ಮಾರ್ಗ ಎಂದು ಸಾರಿದ್ದಾರೆ. ಧಮ್ಮ ಎಂದರೆ ಇತರ ಧರ್ಮಗಳಂತೆ ಅದರಲ್ಲಿರುವ ತತ್ವಶಾಸ್ತ್ರವಲ್ಲ. ಅದೊಂದು ಜೀವನದ ಮಾರ್ಗ ಮತ್ತು ಧಮ್ಮದಿಂದ ಸಾಕ್ಷಾತ್ಕಾರ ಪಡೆಯುವುದು. ಅವರ ಉಪದೇಶವನ್ನು ಜ್ಞಾನ ಮಾರ್ಗವಾಗಿ ಬೋಧಿಸಿದ್ದಾರೆ. ಮಾರ್ಗಸಿದ್ಧಿಗಾಗಿ ತ್ರಿಪಿಠಕಗಳನ್ನು ಬೋಧಿಸಿದ್ದಾರೆ. ಸರ್ವರನ್ನು ಸಮೃದ್ಧಿಗೊಳಿಸುವ, ಸರ್ವರನ್ನೂ ಸಂಪೂರ್ಣವಾಗಿಸುವ ಮುಖ್ಯ ಗುರಿಯೇ ಬುದ್ಧನ ಧಮ್ಮವಾಗಿದೆ ಎಂದರು.

ಮಹಾನ್‌ ಮಾನವತವಾದಿ ಗೌತಮ ಬುದ್ಧರು ಪ್ರಪಂಚದ ಬೆಳಕಾಗಿದ್ದರು. ಅವರು ಪಾಳಿ ಭಾಷೆಯಲ್ಲಿ ತಮ್ಮ ಧರ್ಮವನ್ನು ಬೋಧಿಸಿದರು. ಧರ್ಮದ ಉದ್ದೇಶವನ್ನು ಜನಸಾಮಾನ್ಯರಿಗೆ ತಿಳಿಸುವಂತಹ ರೀತಿಯಲ್ಲಿ ಅವರು ಬೋಧಿಸಿದರು. ತಾನು ಬೋಧಿಸುವುದರಲ್ಲಿ ಹೊಸದೇನೂ ಇಲ್ಲ ಹಾಗೂ ಸತ್ಯವನ್ನು ಕಂಡುಕೊಳ್ಳುವುದರಲ್ಲಿ ನಾನು ಮೊದಲನೆಯವನೂ ಅಲ್ಲ, ಕೊನೆಯವನೂ ಅಲ್ಲ ಎಂದು ಅವರು ಜಗತ್ತಿಗೆ ಸಾರಿದ್ದಾಗಿ ಅವರು ಹೇಳಿದರು.


ಗೌತಮ ಬುದ್ಧರು ವಿಚಾರವನ್ನು ಪ್ರಸ್ತುತಪಡಿಸಿದ ನಂತರ, ಅಂಬೇಡ್ಕರ್ ಅವರು ಬೌದ್ಧ ಮಾರ್ಗವನ್ನು 1956 ರಲ್ಲಿ ಸ್ವೀಕರಿಸಿ ಮತ್ತೊಮ್ಮೆ ಧಮ್ಮ ಬೋಧಿಸಿದರು. ಬುದ್ಧ ಒಬ್ಬ ಶಾಂತಿ ದೂತ. ಜೀವನದ ಅಷ್ಟಾಂಗ ಮಾರ್ಗವನ್ನು ಬೋಧಿಸಿದ ಅವರು. ಹಾಗಾಗಿ ಆಸೆಯೇ ದುಃಖಕ್ಕೆ ಮೂಲ. ಆಸೆಗಳನ್ನು ತ್ಯಜಿಸುವುದೇ ದುಃಖ ನಿವಾರಣೆಗೆ ಇರುವ ಏಕೈಕ ಮಾರ್ಗ ಎಂದು ಪ್ರತಿಪಾದಿಸಿರುವುದಾಗಿ ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್‌ ಮಾತನಾಡಿ, ಬುದ್ದನ ಪಂಚ ಶೀಲ ತತ್ತ್ವಗಳು, ಅಹಿಂಸಾ ವಾದ, ಆಸೆಯೇ ದುರ್ಖಕ್ಕೆ ಕಾರಣ ಎಂಬ ಉದಾತ್ತ ವಿಚಾರಗಳನ್ನು ವಿಶ್ವಕ್ಕೆ ತಲುಪಿಸುವಲ್ಲಿ ನಾವು ಸೋತಿದ್ದೇವೆ. ಅಂಬೇಡ್ಕರ್‌ ಅವರು ಬುದ್ಧನ ಅನುಯಾಯಿ ಆಗದಿದ್ದರೆ ಬುದ್ದನ ವಿಚಾರಗಳಿಗೆ ಇಷ್ಟು ಪ್ರಾಮುಖ್ಯತೆ ಬರುತ್ತಿರಲಿಲ್ಲ ಎಂದರು.

ತ್ರಿಭಾಷಾ ಕವಯತ್ರಿ ಪ್ರಭಾಶಾಸ್ತ್ರಿ ಜೋಶ್ಯುಲ, ಉಪನ್ಯಾಸಕಿ ಡಾ.ಟಿ. ಪದ್ಮಶ್ರೀ, ಕರುನಾಡ ರಕ್ಷಣಾ ವೇದಿಕೆ ರಾಜ್ಯ ಕಾರ್ಯದರ್ಶಿ ಸತೀಶ್ ಹೆಗ್ಗೂರು, ಸುತ್ತೂರು ಗ್ರಾಪಂ ಅಧ್ಯಕ್ಷ ಜೀಮಾರಹಳ್ಳಿ ರಂಗಸ್ವಾಮಿ, ಯಾಚೇನಹಳ್ಳಿ ಮಹದೇವ್‌ ಮೊದಲಾದವರು ಇದ್ದರು.