ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಕೆಕೆಆರ್‌ಡಿಬಿಯಂತೆ ನಮಗೂ ಒಂದು ಪ್ರತ್ಯೇಕ ಮಂಡಳಿ ಅಗತ್ಯವಿದೆ ಎಂದು ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಕೆಕೆಆರ್‌ಡಿಬಿಯಂತೆ ನಮಗೂ ಒಂದು ಪ್ರತ್ಯೇಕ ಮಂಡಳಿ ಅಗತ್ಯವಿದೆ ಎಂದು ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ತಿಳಿಸಿದರು.ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಮಾತನಾಡಿದ ಶಾಸಕರು, ಉತ್ತರ ಕರ್ನಾಟಕದಲ್ಲೇ ವಿಜಯಪುರ ಜಿಲ್ಲೆ ಅತಿ ಹಿಂದುಳಿದ ಜಿಲ್ಲೆಯಾಗಿದೆ. ಆದ್ದರಿಂದ ಜಿಲ್ಲೆ ಇನ್ನೂ ಸಾಕಷ್ಟು ಅಭಿವೃದ್ಧಿ ಆಗಬೇಕಿದೆ. ನಮ್ಮ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ವ್ಯವಸ್ಥೆ ಇಲ್ಲ. ಜಿಲ್ಲೆಯಿಂದ ಬೆಂಗಳೂರಿಗೆ ಪ್ರಯಾಣಿಸಲು ಸಾರ್ವಜನಿಕರಿಗೆ ಸರಿಯಾದ ರೈಲಿನ ವ್ಯವಸ್ಥೆ ಕೂಡ ಇಲ್ಲ. ಪ್ರಯಾಣಿಕರು ಬೆಂಗಳೂರಿಗೆ ತಲುಪಲು 9 ರಿಂದ 10 ಗಂಟೆಯವರೆಗೆ ಪ್ರಯಾಣಿಸಬೇಕಾಗುತ್ತದೆ. ಆದ್ದರಿಂದ ಸರ್ಕಾರ ಆಲಮಟ್ಟಿಯಿಂದ ಚಿತ್ರದುರ್ಗ ಮಾರ್ಗವಾಗಿ ರೈಲು ಮಾರ್ಗ ಮಾಡಬೇಕೆಂಬುದು ಬಹು ಮುಖ್ಯ ಬೇಡಿಕೆಯಾಗಿದೆ ಎಂದು ತಿಳಿಸಿದರು.
ಈ ಬಾರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗಿರುವುದರಿಂದ ರೈತರ ಹೊಲಗಳಿಗೆ ಹೋಗಲು ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಆ ರಸ್ತೆಗಳ ಸುಧಾರಣೆಗೆ ಜಿಲ್ಲಾ ಪಂಚಾಯಿತಿಗೆ ಅನುದಾನ ನೀಡಬೇಕೆಂದು ಎಂದು ಮನವಿ ಮಾಡಿದರು.ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರಿಗೆ ಸರ್ಕಾರ ವಿಮಾ ಪರಿಹಾರ ಬಿಡುಗಡೆ ಮಾಡಿದೆ, ಕೆಲವು ರೈತರಿಗೆ ಬಂದಿದೆ. ಇನ್ನೂ ಕೆಲವು ರೈತರಿಗೆ ಬಂದಿಲ್ಲ. ಅದನ್ನು ಸಹ ಶೀಘ್ರದಲ್ಲಿಯೇ ಸರಿಪಡಿಸಬೇಕು. ಕೆನಾಲ್‌ಗೆ ತಮ್ಮ ಜಮೀನುಗಳನ್ನು ಕಳೆದುಕೊಂಡ ರೈತರಿಗೆ ಕೋರ್ಟ್‌ನಿಂದ ಅವಾರ್ಡ್ ಆದರೂ ಇನ್ನೂವರೆಗೂ ಬಿಡುಗಡೆಯಾಗಿಲ್ಲ, ಕೂಡಲೇ ಮುಖ್ಯಮಂತ್ರಿಗಳು ಜಮೀನು ಕಳೆದುಕೊಂಡ ರೈತರಿಗೆ ಹಣ ಬಿಡುಗಡೆ ಮಾಡಬೇಕು. ತಮ್ಮ ಮತಕ್ಷೇತ್ರ ದೇವರಹಿಪ್ಪರಗಿ ನೂತನ ತಾಲೂಕು ಆಗಿದೆ. ಪ್ರಜಾಸೌಧದಲ್ಲಿ ಎಲ್ಲ ಕಚೇರಿಗಳು ಇನ್ನೂವರೆಗೂ ಪೂರ್ಣವಾಗಿ ಕಾರ್ಯರೂಪಕ್ಕೆ ಬಂದಿಲ್ಲ. ಅದನ್ನು ಸಹ ಶೀಘ್ರ ಸರಿಪಡಿಸಬೇಕು ಎಂದು ಸದನದ ಗಮನ ಸೆಳೆದರು.
ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಲ್ಯಾಬ್ ಟೆಕ್ನಿಷಿಯನ್ ಸೇರಿದಂತೆ ಅನೇಕ ಸಣ್ಣ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುವವರನ್ನು ರದ್ದುಪಡಿಸಿ ಮತ್ತೆ ಹೊಸದಾಗಿ ಬೇರೆಯವರನ್ನು ಇಲಾಖೆಯ ನಿರ್ದೇಶಕರು ತೆಗೆದುಕೊಳ್ಳಲು ಹೊರಟಿದ್ದಾರೆ. ಇದರಿಂದಾಗಿ 36 ಸಾವಿರ ಜನರು ಬೀದಿಗೆ ಬರುತ್ತಾರೆ. ಇದರ ಬಗ್ಗೆ ಆರೋಗ್ಯ ಸಚಿವರು ಗಮನ ಹರಿಸಬೇಕು. ಬಿಪಿಎಲ್ ಕಾರ್ಡ್ ಹೊಂದಿದವರು ಹೃದಯಾಘಾತಕ್ಕೆ ಒಳಗಾದ ಸಂದರ್ಭದಲ್ಲಿ ಆ ಕಾರ್ಡ್ ಜನರೇಟ್ ಆಗಬೇಕೆಂದರೆ ಎರಡ್ಮೂರು ದಿನ ಬೇಕಾಗುತ್ತದೆ. ಒಂದು ವೇಳೆ ದಾಖಲಾದ ರೋಗಿ ಮೃತಪಟ್ಟರೆ ಅವರು ಹಣ ಕಟ್ಟಬೇಕಾಗುತ್ತದೆ. ಇದನ್ನು ತಪ್ಪಿಸಲು ಸರ್ಕಾರ ಬಿಪಿಎಲ್ ಕಾರ್ಡ್ ಹೊಂದಿರುವವರು ಆಸ್ಪತ್ರೆಗೆ ದಾಖಲಾದರೆ ಕೂಡಲೇ ಅದು ಜನರೇಟ ಆಗುವಂತೆ ಕ್ರಮ ತೆಗೆದುಕೊಳ್ಳುವಂತೆ ಮಾಡಬೇಕಿದೆ. ನಮ್ಮ ಭಾಗದ ಕೋರವಾರ, ಕಲಕೇರಿ ಎರಡು ಹೋಬಳಿ ಕೇಂದ್ರ ಮಾಡಬೇಕು. ದೋಣಿ ನದಿ ಹೂಳು ಸರ್ಕಾರ ತೆಗೆಯಲು ಕ್ರಮ ವಹಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.