ಸಾರಾಂಶ
-ಘೋಷಣೆಯಾದ ನೀರಾವರಿ ಯೋಜನೆಗಳಿಗೆ ಬೇಕಿದೆ ಅನುದಾನ
-ಸಿಎಂ ಸಿದ್ದರಾಮಯ್ಯ ಮಂಡಿಸುವ ಬಜೆಟ್ ಮೇಲೆ ಹೆಚ್ಚಿದ ನಿರೀಕ್ಷೆನಾರಾಯಣ ಹೆಗಡೆ
ಕನ್ನಡಪ್ರಭ ವಾರ್ತೆ ಹಾವೇರಿಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ.೧೬ರಂದು ಮಂಡಿಸಲಿರುವ ಈ ಬಾರಿಯ ಬಜೆಟ್ ಮೇಲೆ ಜಿಲ್ಲೆಯ ಜನರ ನಿರೀಕ್ಷೆ ಹೆಚ್ಚಿದೆ. ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆ, ನೀರಾವರಿ ಯೋಜನೆ, ಕೈಗಾರಿಕೆ ಸ್ಥಾಪನೆ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಯಾವ ಹೊಸ ಯೋಜನೆಗಳನ್ನು ಘೋಷಿಸಲಿದ್ದಾರೆ, ಎಷ್ಟು ಅನುದಾನ ನೀಡಲಿದ್ದಾರೆ ಎಂಬ ಕುತೂಹಲ ಮೂಡಿಸಿದೆ.
ಕಾಂಗ್ರೆಸ್ ಸರ್ಕಾರ ಬಂದು ವರ್ಷ ಕಳೆಯುತ್ತಿದ್ದು, ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಯಾವ ಪ್ರಮುಖ ಅಭಿವೃದ್ಧಿ ಕಾರ್ಯಗಳೂ ಆಗಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಜಿಲ್ಲೆಯ 6 ಕ್ಷೇತ್ರಗಳ ಪೈಕಿ 5 ಕಡೆ ಕಾಂಗ್ರೆಸ್ ಶಾಸಕರಿದ್ದು, ಈ ಸಲದ ಬಜೆಟ್‌ನಲ್ಲಾದರೂ ತಮ್ಮ ಕ್ಷೇತ್ರದಲ್ಲಿ ಆಗಬೇಕಾದ ಯೋಜನೆಗಳನ್ನು ಘೋಷಣೆ ಮಾಡಿಸುವಲ್ಲಿ ಕಾಂಗ್ರೆಸ್ ಶಾಸಕರು ಯಶಸ್ವಿಯಾಗುತ್ತಾರಾ ಎಂಬುದನ್ನು ಜನತೆ ಎದುರು ನೋಡುತ್ತಿದ್ದಾರೆ.ಜಿಲ್ಲೆಯಾಗಿ ೨೬ ವರ್ಷಗಳೇ ಗತಿಸಿದರೂ ಇನ್ನೂ ಜಿಲ್ಲಾ ಕೇಂದ್ರದ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿಲ್ಲ. ಮೂಲಸೌಲಭ್ಯಗಳ ಕೊರತೆ ಎಲ್ಲ ಕ್ಷೇತ್ರಗಳಲ್ಲಿ ಎದ್ದು ಕಾಣುತ್ತಿದೆ. ಗ್ರಾಮೀಣ ಭಾಗದಲ್ಲಿ ಸಾಮಾಜಿಕ, ಶೈಕ್ಷಣಿಕ ಸುಧಾರಣೆ ಅಷ್ಟಕ್ಕಷ್ಟೇ ಎಂಬಂತಾಗಿದೆ. ಜಿಲ್ಲೆಯ ಪ್ರಮುಖ ಬೇಡಿಕೆಗಳು ಪ್ರತಿ ಬಜೆಟ್‌ನಲ್ಲಿ ನಿರೀಕ್ಷೆಗಳಾಗಿಯೇ ಮುಂದುವರಿಯುತ್ತಿವೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ. ಈ ಬಾರಿಯಾದರೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಘೋಷಿಸಿ, ಅದಕ್ಕೆ ಅಗತ್ಯವಿರುವ ಅನುದಾನವನ್ನು ಘೋಷಿಸಬಹುದು ಎಂಬ ನಿರೀಕ್ಷೆಯಿದೆ. ಜಿಲ್ಲೆಯ ೮ ತಾಲೂಕುಗಳ ಸರ್ವಾಂಗೀಣ ಅಭಿವೃದ್ಧಿಗೆ ಹಲವು ಯೋಜನೆಗಳು, ಅದಕ್ಕೆ ಅನುದಾನ ಅಗತ್ಯವಿದೆ. ಜಿಲ್ಲೆಯ ಶಾಸಕರು ಇಡುವ ಬೇಡಿಕೆಗಳಿಗೆ ಬಜೆಟ್‌ನಲ್ಲಿ ಮನ್ನಣೆ ನೀಡುವ ನಿರೀಕ್ಷೆಯಿದೆ.
ಡಿಸಿಸಿ ಬ್ಯಾಂಕ್ ಸ್ಥಾಪನೆ:ಜಿಲ್ಲೆಯ ಬಹು ವರ್ಷಗಳ ಬೇಡಿಕೆಗಳಲ್ಲಿ ಪ್ರಮುಖವಾದವುಗಳನ್ನು ಈ ಹಿಂದಿನ ಬಿಜೆಪಿ ಸರ್ಕಾರ ಈಡೇರಿಸಿದೆ. ಮೆಡಿಕಲ್ ಕಾಲೇಜು, ಪ್ರತ್ಯೇಕ ಹಾಲು ಒಕ್ಕೂಟವನ್ನು ಹಿಂದಿನ ಸರ್ಕಾರ ಅನುಷ್ಠಾನ ಘೋಷಿಸಿ ಅಗತ್ಯ ಅನುದಾನ ನೀಡಿದ್ದರಿಂದ ಅವು ಈಗಾಗಲೇ ಕಾರ್ಯಾರಂಭ ಮಾಡುತ್ತಿವೆ.
ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆ ಈಗಿನ ಮುಖ್ಯ ಬೇಡಿಕೆಗಳಲ್ಲಿ ಒಂದಾಗಿದೆ. ಕೃಷಿ ಪ್ರಧಾನ ಜಿಲ್ಲೆಯಲ್ಲಿ ಜಿಲ್ಲಾ ಬ್ಯಾಂಕ್ ಸ್ಥಾಪನೆ ಒತ್ತಾಯ ಹೆಚ್ಚುತ್ತಿದೆ. ಜಿಲ್ಲೆ ಪ್ರತ್ಯೇಕಗೊಂಡರೂ ಧಾರವಾಡ ಕೆಸಿಸಿ ಬ್ಯಾಂಕ್ ವ್ಯಾಪ್ತಿಯಲ್ಲೇ ಜಿಲ್ಲೆ ಕಾರ್ಯನಿರ್ವಹಿಸುತ್ತಿರುವುದರಿಂದ ಜಿಲ್ಲೆಯ ರೈತರಿಗೆ ಸಮರ್ಪಕವಾಗಿ ಬೆಳೆ ಸಾಲ ಸಿಗುತ್ತಿಲ್ಲ ಎಂಬ ಕೂಗು ಎದ್ದಿದೆ. ಬೇರೆ ಜಿಲ್ಲೆಗಳಲ್ಲಿ ರೈತರಿಗೆ ಗರಿಷ್ಠ ₹5 ಲಕ್ಷ ವರೆಗೆ ಶೂನ್ಯ ಬಡ್ಡಿದರದಲ್ಲಿ ಬೆಳೆ ಸಾಲ ಸಿಕ್ಕರೆ, ಜಿಲ್ಲೆಯಲ್ಲಿ ಇಷ್ಟು ಪ್ರಮಾಣದಲ್ಲಿ ಯಾವ ರೈತರಿಗೂ ಸಾಲ ಸಿಗುತ್ತಿಲ್ಲ. ಇದಲ್ಲದೇ ಕೃಷಿ ಅಭಿವೃದ್ಧಿಗೆ ರೈತರಿಗೆ ಸೂಕ್ತ ನೆರವು ದೊರೆಯುತ್ತಿಲ್ಲ. ಆದ್ದರಿಂದ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆಯಿಂದಲೇ ಇದಕ್ಕೆ ಪರಿಹಾರ ಸಾಧ್ಯವಿದೆ ಎಂಬ ಅಭಿಪ್ರಾಯವಿದೆ. ಈಚೆಗೆ ಜಿಲ್ಲೆಗೆ ಆಗಮಿಸಿದ್ದ ಸಹಕಾರ ಸಚಿವರು ಹಾಗೂ ಉಸ್ತುವಾರಿ ಸಚಿವರು ಪ್ರತ್ಯೇಕ ಜಿಲ್ಲಾ ಬ್ಯಾಂಕ್ ಸ್ಥಾಪನೆ ಬಗ್ಗೆ ಸಹಮತ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಈ ಸಲ ಸಿಎಂ ಸಿದ್ದರಾಮಯ್ಯ ಮಂಡಿಸಲಿರುವ ಆಯವ್ಯಯದಲ್ಲಿ ಈ ಬೇಡಿಕೆ ಬಗ್ಗೆ ಪ್ರಸ್ತಾಪವಾಗುವ ನಿರೀಕ್ಷೆ ಎಲ್ಲರಲ್ಲಿದೆ.ಕೃಷಿ ಪೂರಕ ಕೈಗಾರಿಕೆ:
ಅತ್ತ ಹುಬ್ಬಳ್ಳಿ, ಇತ್ತ ದಾವಣಗೆರೆಯಲ್ಲಿ ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಬೆಳೆದಿದ್ದರೂ ಇವೆರಡರ ನಡುವೆ ಇರುವ ಹಾವೇರಿಯಲ್ಲಿ ಮಾತ್ರ ಅಭಿವೃದ್ಧಿಯಲ್ಲಿ ಹಿಂದುಳಿದಿದೆ.ಕೃಷಿ ಪ್ರಧಾನ ಜಿಲ್ಲೆಯಾಗಿರುವ ಹಿನ್ನೆಲೆ ರೈತರು ಬೆಳೆದಂತ ಉತ್ಪನ್ನಗಳಿಗೆ ಪೂರಕವಾಗುವಂತಹ ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎಂಬುದು ರೈತ ಮುಖಂಡರ ಒತ್ತಾಯವಾಗಿದೆ. ಕೃಷಿ ಪೂರಕ ಕೈಗಾರಿಕೆ ಸ್ಥಾಪಿತಗೊಂಡರೆ ರೈತರು ಬೆಳೆದ ಉತ್ಪನ್ನಗಳಿಗೆ ಉತ್ತಮ ಬೆಲೆ, ಸ್ಥಳೀಯವಾಗಿ ಮಾರುಕಟ್ಟೆ ಸೌಲಭ್ಯ ಸಿಗಲಿದೆ. ಜೊತೆಗೆ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗುವಂತೆ ಬಹೃತ್ ಕೈಗಾರಿಕೆಗಳ ಸ್ಥಾಪನೆಗೂ ಒತ್ತು ನೀಡಿ ಕೈಗಾರಿಕಾ ಹಬ್ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕಿದೆ. ಹಾವೇರಿ ಸಮೀಪದ ಕೋಳೂರು, ಗಣಜೂರು ಬಳಿ ಕೈಗಾರಿಕಾ ಕಾರಿಡಾರ್ ಸ್ಥಾಪನೆಯಾಗಬೇಕು ಎಂಬುದು ಹಳೆಯ ಬೇಡಿಕೆಯಾಗಿದೆ.
ಕುಡಿವ ನೀರಿನ ಯೋಜನೆ:ಜಿಲ್ಲಾ ಕೇಂದ್ರವಾದ ಹಾವೇರಿ ನಗರಕ್ಕೆ ಇದುವರೆಗೂ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ೨೦೧೬ರಲ್ಲಿ ಆರಂಭವಾಗಿರುವ ೨೪-೭ನೀರು ಪೂರೈಸುವ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಅಲ್ಲದೇ ನಗರದಲ್ಲಿ ಆರಂಭಗೊಂಡಿದ್ದ ಯುಜಿಡಿ ಕಾಮಗಾರಿ ಹಲವು ವರ್ಷಗಳು ಕಳೆದಿದ್ದರೂ, ಕಾಮಗಾರಿ ಪೂರ್ಣಗೊಳ್ಳದೇ ನನೆಗುದಿಗೆ ಬಿದ್ದಿದೆ. ಈ ಯೋಜನೆಗಳನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸುವುದು ಸೇರಿದಂತೆ ಹಾವೇರಿ ಜಿಲ್ಲಾ ಕೇಂದ್ರದ ಸಮಗ್ರ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡಬೇಕಿದೆ.
ಪ್ರವಾಸಿ ತಾಣಗಳ ಅಭಿವೃದ್ಧಿ, ಕುಡಿಯುವ ನೀರಿನ ಯೋಜನೆ, ಕೆರೆ ತುಂಬಿಸುವ ಯೋಜನೆ, ಹಾವೇರಿ ನಗರಕ್ಕೆ ರಿಂಗ್ ರೋಡ್ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಹಲವು ಯೋಜನೆಗಳು ಆಗಬೇಕಿವೆ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಏನೇನು ಕೊಡುಗೆ ನೀಡಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.ಹಾವೇರಿ ಸಮೀಪದ ಕೋಳೂರು-ಗಣಜೂರಿನಲ್ಲಿ ಕೈಗಾರಿಕಾ ಕಾರಿಡಾರ್ ಸ್ಥಾಪನೆಗೆ ಹಿಂದಿನ ಸರ್ಕಾರ 400 ಎಕರೆ ಭೂಸ್ವಾಧೀನ ಮಾಡಿತ್ತು. ಆದರೆ, ಮುಂದಿನ ಪ್ರಕ್ರಿಯೆ ಸ್ಥಗಿತಗೊಂಡಿತು. ಇರುವ ಅಡೆತಡೆ ನಿವಾರಿಸಿ ಕೈಗಾರಿಕೆ ಸ್ಥಾಪನೆಯಾದರೆ, ಸಣ್ಣ ಕೈಗಾರಿಕೆಗಳಿಗೂ ಪ್ರೋತ್ಸಾಹ ಸಿಗುತ್ತದೆ. ಸಿಎಂ ಸಿದ್ದರಾಮಯ್ಯ ಅವರು ಕಾರಿಡಾರ್ ಆರಂಭಿಸುವ ಕುರಿತು ಬಜೆಟ್‌ನಲ್ಲಿ ಘೋಷಣೆ ಮಾಡುವ ನಿರೀಕ್ಷೆಯಿದೆ ಎಂದು ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ರವಿ ಮೆಣಸಿನಕಾಯಿ.