ಎಡನೀರು ಮಠದ ಸಾಮಾಜಿಕ ಬದ್ಧತೆ ಶ್ಲಾಘನೀಯ: ಗೋವಾ ರಾಜ್ಯಪಾಲ ಶ್ರೀಧರನ್‌ ಪಿಳ್ಳೆ

| Published : Feb 14 2024, 02:17 AM IST

ಎಡನೀರು ಮಠದ ಸಾಮಾಜಿಕ ಬದ್ಧತೆ ಶ್ಲಾಘನೀಯ: ಗೋವಾ ರಾಜ್ಯಪಾಲ ಶ್ರೀಧರನ್‌ ಪಿಳ್ಳೆ
Share this Article
  • FB
  • TW
  • Linkdin
  • Email

ಸಾರಾಂಶ

ಧಾರ್ಮಿಕ, ಶಿಕ್ಷಣ ಹಾಗೂ ಅಧ್ಯಾತ್ಮಕತೆಯೊಂದಿಗೆ ಮುಂದುವರಿಯುವ ಈ ಮಠದ ಹಿರಿಮೆಯನ್ನು ಎತ್ತಿ ಹಿಡಿಯಲು ಬ್ರಹ್ಮಕ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಬಳಿಕ ಇದೀಗ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಕೈಂಕರ್ಯ ಶ್ಲಾಘನೀಯ ಎಂದು ಗೋವಾ ರಾಜ್ಯಪಾಲ ಶ್ರೀಧರನ್‌ ಪಿಳ್ಳೆ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕಾಸರಗೋಡಿನ ಎಡನೀರು ಶ್ರೀಮಠದಲ್ಲಿ ನೂತನವಾಗಿ ಸಿ.ಎಚ್. ಲಕ್ಷ್ಮೀ ಪಾಡಿ ಸ್ಮರಣಾರ್ಥ ನಿರ್ಮಿಸಿದ ರಂಗಮಟಪ ಭಾರತೀ ಕಲಾಸದನವನ್ನು ಸೋಮವಾರ ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೆ ಲೋಕಾರ್ಪಣೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಇತಿಹಾಸ ಪುಟಗಳಲ್ಲಿ ಅಚ್ಚಳಿಯದೇ ಉಳಿಯುವ ಕೆಲವೇ ಚರಿತ್ರೆಯಲ್ಲಿ ದಾಖಲೆಗಳಲ್ಲಿ ಕೇಶವಾನಂದ ಭಾರತೀ ಕೇಸ್ ಪ್ರಕರಣವಾಗಿದೆ. ಪ್ರಕರಣದಲ್ಲಿ ಮಠಕ್ಕೆ ಏನೂ ಲಾಭವಿಲ್ಲದಿದ್ದರೂ ಸಾಮಾಜಿಕ ಬದ್ಧತೆಯನ್ನು ತೋರಿಸುವಂತಾಗಿದೆ. ಇಂತಹ ಅಪೂರ್ವದಲ್ಲಿ ಅಪೂರ್ವವಾದ ತೀರ್ಪು ಇಡೀ ಕಾನೂನಿನ ಆಧಾರಸ್ತಂಭವಾಗಿದೆ. ಈ ಮೂಲಕ ಶ್ರೀಮಠ ಪ್ರಸಿದ್ಧಿ ಪಡೆದುಕೊಂಡಿದೆ. ಧಾರ್ಮಿಕ, ಶಿಕ್ಷಣ ಹಾಗೂ ಅಧ್ಯಾತ್ಮಕತೆಯೊಂದಿಗೆ ಮುಂದುವರಿಯುವ ಈ ಮಠದ ಹಿರಿಮೆಯನ್ನು ಎತ್ತಿ ಹಿಡಿಯಲು ಬ್ರಹ್ಮಕ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಬಳಿಕ ಇದೀಗ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಕೈಂಕರ್ಯ ಶ್ಲಾಘನೀಯ ಎಂದರು.ಕರ್ನಾಟಕ ಮಾನವ ಹಕ್ಕುಗಳ ಆಯೋಗ ಸದಸ್ಯ ಟಿ. ಶಾಮ್ ಭಟ್ ಅಧ್ಯಕ್ಷತೆ ವಹಿಸಿದರು.ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನದಲ್ಲಿ, ಶ್ರೀಮಠದ ಪರಮಭಕ್ತೆಯಾಗಿದ್ದ ಸಿ.ಎಚ್‌.ಲಕ್ಷ್ಮಿ ಅವರ ಕೊಡುಗೆ ಜತೆಗೆ ಭಕ್ತರ ಸಹಕಾರದಿಂದ ಕಲಾಸದನ ನಿರ್ಮಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇದು ಉತ್ತಮ ವೇದಿಕೆಯಾಗಿ ಬಳಕೆಯಾಗಲಿದೆ ಎಂದರು.

ಹಿರಿಯ ಸಂಗೀತ ವಿದ್ವಾಂಸ, ಖ್ಯಾತ ಮಲಯಾಳ ಚಲನಚಿತ್ರ ನಿರ್ದೇಶಕ ಪದ್ಮಶ್ರೀ ಕೈದಪ್ರಂ ದಾಮೋದರನ್ ನಂಬೂದಿರಿ, ಶಾಂತಲಾ ಪ್ರಶಸ್ತಿ ವಿಜೇತ ಮತ್ತು ಹಿರಿಯ ನೃತ್ಯ ಗುರು ಉಳ್ಳಾಲ ಮೋಹನ ಕುಮಾರ್, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ, ಹಿರಿಯ ಯಕ್ಷಗಾನ ಕಲಾವಿದ ಸೂರಿಕುಮೇರು ಗೋವಿಂದ ಭಟ್ ಇದ್ದರು.

ಈ ಸಂದರ್ಭ ಪದ್ಮಶ್ರೀ ಗೌರವಕ್ಕೆ ಭಾಜನರಾದ ಸತ್ಯನಾರಾಯಣ ಬೆಳೇರಿ ಹಾಗೂ ವಿದ್ವಾನ್ ವಿಠಲ್ ರಾಮಮೂರ್ತಿ ಚೆನ್ನೈ ಅವರನ್ನು ಸನ್ಮಾನಿಸಲಾಯಿತು.

ಭಾರತೀ ಕಲಾಸದನಕ್ಕೆ ಸಹಕಾರ ನೀಡಿದ ಡಾ. ಕೃಷ್ಣ ಕುಮಾರ್ ಪಿ.ಎಸ್‌. ಪುತ್ತೂರು ಹಾಗೂ ಕಾಮಗಾರಿ ನಡೆಸಿದ ಉಮೇಶ್ ಅವರನ್ನು ಗೌರವಿಸಲಾಯಿತು.ಕಾಸರಗೋಡಿನ ನ್ಯಾಯವಾದಿ ನಾರಾಯಣ ಭಟ್ ಸ್ವಾಗತಿಸಿದರು. ಸಂಗೀತ ವಿದ್ವಾನ್ ಯೋಗೀಶ್ ಶರ್ಮಾ ಬಳ್ಳಪದವು ಪ್ರಾರ್ಥನೆ ಹಾಡಿದರು. ಮಠದ ಆಡಳಿತಾಧಿಕಾರಿ ರಾಜೇಂದ್ರ ಕಲ್ಲೂರಾಯ ವಂದಿಸಿದರು. ಡಾ. ಶ್ರೀಪತಿ ಕಲ್ಲೂರಾಯ ನಿರೂಪಿಸಿದರು.ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಶ್ರೀ ಮಠದ ನೂತನ ರಂಗಮಂದಿರದಲ್ಲಿ ಪಿಟೀಲು-ಕೊಳಲು ದ್ವಂದ್ವ ಕಛೇರಿ ನಡೆಯಿತು.ಸಂಜೆ ಬೆಂಗಳೂರಿನ ಸಂಗೀತ ನೃತ್ಯ ಭಾರತಿ ಅಕಾಡೆಮಿಯ ಗುರು ಪದ್ಮಾ ಹೇಮಂತ್ ಮತ್ತು ಶೀತಲ್ ಹೇಮಂತ್ ಇವರ ಶಿಷ್ಯಂದಿರು ನಾಟ್ಯಾಂಜಲಿ ನೃತ್ಯ ಕಾರ್ಯಕ್ರಮ ಪ್ರಸ್ತುತಪಡಿಸಿದರು.