ಸಾರಾಂಶ
ಚನ್ನಪಟ್ಟಣ: ಪೊಲೀಸರ ಸರ್ಪಗಾವಲಿನಲ್ಲಿ ತಾಲೂಕಿನ ಯಲಿಯೂರು ಡೇರಿ ಪ್ರಭಾರ ಆಡಳಿತಾಧಿಕಾರಿಯಾಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಅಧೀಕ್ಷಕ ಎಸ್.ನಾಗೇಶ್ ಅಧಿಕಾರ ಸ್ವೀಕರಿಸಿದರು.
ಮಂಗಳವಾರ ಬೆಳಿಗ್ಗೆ ೧೧ ಗಂಟೆಗೆ ರಾಮನಗರ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಕೆ.ಎಸ್.ಹರೀಶ್ ಕುಮಾರ್ ಅವರೊಂದಿಗೆ ಎಸ್.ನಾಗೇಶ್ ಅವರು ಪೊಲೀಸರ ಸರ್ಪಗಾವಲಿನಲ್ಲಿ ಸಂಘದ ಕಚೇರಿಗೆ ಆಗಮಿಸಿದರು. ಸಂಘದ ಮಾಜಿ ಅಧ್ಯಕ್ಷ ಶಿವಣ್ಣ ಮತ್ತು ಸದಸ್ಯರಾದ ಜವರೇಗೌಡ, ಶಿವಸ್ವಾಮಿ, ಈರಣ್ಣ, ಶ್ರೀನಿವಾಸ್, ಮಹದೇವ್, ಶ್ರೀನಿವಾಸ್ ಹಾಗೂ ಗ್ರಾಮದ ಕೆಲ ಮುಖಂಡರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನದಿಂದಲೇ ಸಂಘದಲ್ಲಿ ಅವ್ಯವಹಾರ, ಹಣ ದುರುಪಯೋಗವಾಗಿದೆ. ಸಹಕಾರ ಇಲಾಖೆಯ ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸಿದ್ದರೆ ಗ್ರಾಮದಲ್ಲಿ ಇಷ್ಟು ಗೊಂದಲ, ಭಿನ್ನಾಭಿಪ್ರಾಯ, ಅಸಮಧಾನ ಉಂಟಾಗುತ್ತಿರಲಿಲ್ಲ ಎಂದು ಕಿಡಿಕಾರಿದರು.
ಕರ್ತವ್ಯ ಲೋಪವೆಸಗಿ ಸರ್ಕಾರ ಮತ್ತು ಸಂಘ ಹಾಗೂ ಹಾಲು ಉತ್ಪಾದಕರ ಲಕ್ಷಾಂತರ ರು. ಹಣ ದುರುಪಯೋಗ ಪಡಿಸಿಕೊಂಡು ಅಮಾನತಿನಲ್ಲಿರುವ, ಹಿಂದಿನ ಕಾರ್ಯನಿರ್ವಾಹಕ ವೈ.ಸಿ.ಪುಟ್ಟಸ್ವಾಮಯ್ಯ ಸಂಘಕ್ಕೆ ಸಂಬಂಧಪಟ್ಟ ದಾಖಲಾತಿಗಳು ಮತ್ತು ದುರುಪಯೋಗಪಡಿಸಿಕೊಂಡಿರುವ ೭.೮೧ ಲಕ್ಷ ರು.ಗಳನ್ನು ಹಾಗೂ ಬೋನಸ್ ಹಣವನ್ನು ಮರುಪಾವತಿಸಿ ಹಾಲು ಉತ್ಪಾದಕರಿಗೆ ವಿತರಿಸಬೇಕು. ಆತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಹಲವು ಬಾರಿ ಲಿಖಿತ ಮನವಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಂಘದ ಸದಸ್ಯರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.ಎರಡು ತಿಂಗಳ ಹಿಂದೆಯೇ ಸಂಘದ ಆಡಳಿತಾಧಿಕಾರಿಯಾಗಿ ಅಧಿಕಾರಿ ವಹಿಸಿಕೊಳ್ಳುವಂತೆ ಆದೇಶ ಮಾಡಿದ್ದರೂ ಎಸ್.ನಾಗೇಶ್ ಅಧಿಕಾರ ವಹಿಸಿಕೊಳ್ಳದೇ ಇಂದು ಅಧಿಕಾರ ವಹಿಸಿಕೊಳ್ಳಲು ಬಂದಿದ್ದಾರೆ. ಸಹಕಾರ ಸಂಘಗಳ ಸಹಾಯಕ ನಿಬಂಧಕರ ನ್ಯಾಯಾಲಯ ಸಂಘದ ಠರಾವು ಕಾರ್ಯ ನಿರ್ವಾಹಕ ವೈ.ಸಿ.ಪುಟ್ಟಸ್ವಾಮಯ್ಯ ಅವರನ್ನು ಅಮಾನತುಗೊಳಿಸಿರುವ ಆದೇಶ ವಜಾ ಮಾಡಿದೆ. ಕರ್ತವ್ಯಕ್ಕೆ ಹಾಜರಾಗಲು ವೈ.ಸಿ.ಪುಟ್ಟಸ್ವಾಮಿ ಗ್ರಾಮದಲ್ಲಿ ಗುಂಪುಗಾರಿಕೆ ಮಾಡುತ್ತಿದ್ದಾರೆ. ಅವರು ಮತ್ತೆ ಕರ್ತವ್ಯಕ್ಕೆ ಬರುವುದು ಬೇಡ. ಬಮೂಲ್ ಮಾರ್ಗ ವಿಸ್ತರಣಾಧಿಕಾರಿಗಳನ್ನು ಸಂಘದ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ಎಲ್ಲ ಗೊಂದಲಗಳಿಗೆ ತೆರೆ ಎಳೆಯಬೇಕು ಎಂದು ಆಗ್ರಹಿಸಿದರು.
ಸಂಘ ಮತ್ತು ಗ್ರಾಮದ ಎರಡು ಗುಂಪುಗಳ ಮುಖಂಡರ ಅಹವಾಲನ್ನು ಆಲಿಸಿ, ಪರಿಶೀಲಿಸುವುದಾಗಿ ಸಹಾಯಕ ನಿಬಂಧಕ ಹರೀಶ್ ಕುಮಾರ್ ಅವರೊಂದಿಗೆ ಎಸ್.ನಾಗೇಶ್ ಅಲ್ಲಿಂದ ತೆರಳಿದರು.ಗ್ರಾಮದಲ್ಲಿ ಎರಡು ಗುಂಪುಗಳು ಜಮಾವಣೆಗೊಂಡಿದ್ದ ಹಿನ್ನೆಲೆಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಡಿವೈಎಸಿ ಕೆ.ಸಿ.ಗಿರಿ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿತ್ತು. ಪೊಟೋ೧೩ಸಿಪಿಟ೧:
ರಾಮನಗರ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಕೆ.ಎಸ್.ಹರೀಶ್ ಕುಮಾರ್ ಯಲಿಯೂರು ಡೇರಿ ಸದಸ್ಯರ ಅಹವಾಲು ಆಲಿಸಿದರು.