ಕನ್ನಡದ ಉಳಿವಿಗಾಗಿ ಪ್ರತ್ಯೇಕ ಕಾನೂನು ಅಗತ್ಯ: ಸಚಿವ ಎಚ್.ಕೆ. ಪಾಟೀಲ

| Published : Jul 30 2024, 12:35 AM IST

ಸಾರಾಂಶ

ಕನ್ನಡಿಗರ ಅಸ್ಮಿತೆ. ಭಾಷೆ, ನೆಲ-ಜಲ, ಗಡಿ ವಿಷಯದಲ್ಲಿ ಕನ್ನಡ ಎಂಬ ಸಮಾಜ ಒಗ್ಗೂಡಿ ಬರಬೇಕು ಎಂದು ಸಚಿವ ಎಚ್‌.ಕೆ. ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಕರ್ನಾಟಕದಲ್ಲಿಯೇ ಕನ್ನಡದ ಅಳಿವು-ಉಳಿವಿನ ಪ್ರಶ್ನೆ ಎದುರಾಗಿದ್ದು, ಇದಕ್ಕಾಗಿ ಪ್ರತ್ಯೇಕ ಕಾನೂನು ಅಗತ್ಯತೆಯನ್ನು ಕಾನೂನು ಸಚಿವ ಎಚ್‌.ಕೆ. ಪಾಟೀಲ ಪ್ರಸ್ತಾಪಿಸಿದ್ದಾರೆ.

ಕರ್ನಾಟಕ ವಿದ್ಯಾವರ್ಧಕ ಸಂಘದ 135ನೇ ಸಂಸ್ಥಾಪನಾ ದಿನಾಚರಣೆಯ ಸಮಾರೋಪ ಭಾಷಣ ಮಾಡಿದ ಅವರು, ಕನ್ನಡ ಭಾಷೆಯ ಉಳಿವಿಗಾಗಿ ಯಾವುದೇ ನ್ಯಾಯಾಲಯಕ್ಕೆ ಹೋದರೂ ಕೂಡ ತಡೆಯಾಜ್ಞೆ ಸಿಗದಂತ ಕಾನೂನು ಜಾರಿಗಾಗಿ ನೀತಿ-ನಿರೂಪಣೆ ತಯಾರಿಕೆ ಜವಾಬ್ದಾರಿ ಕರ್ನಾಟಕ ವಿದ್ಯಾವರ್ಧಕ ಸಂಘವೇ ವಹಿಸಕೊಳ್ಳುವಂತೆ ಸಲಹೆ ನೀಡಿದರು.

ಕನ್ನಡ ಭಾಷೆ ಬರೀ ಸರ್ಕಾರ, ಕರ್ನಾಟಕ ವಿದ್ಯಾವರ್ಧಕ ಸಂಘ, ಕನ್ನಡಪರ ಸಂಘಟನೆಗಳ ಆಸ್ತಿಯಲ್ಲ. ಇದು ಪ್ರತಿಯೊಬ್ಬ ಕನ್ನಡಿಗರ ಅಸ್ಮಿತೆ. ಭಾಷೆ, ನೆಲ-ಜಲ, ಗಡಿ ವಿಷಯದಲ್ಲಿ ಕನ್ನಡ ಎಂಬ ಸಮಾಜ ಒಗ್ಗೂಡಿ ಬರಬೇಕು. ನಾಡೋಜ ಪಾಪು ಅವರಂತೆ ಕನ್ನಡ ಭಾಷೆ, ಗಡಿ, ನೆಲ-ಜಲ ವಿಷಯದಲ್ಲಿ ಘರ್ಜಿಸುವ ಕೆಲಸ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು ಮಾಡುವುದರ ಮೂಲಕ ಸರ್ಕಾರ ಹಾಗೂ ಪ್ರಭುತ್ವದ ಕಿವಿಹಿಂಡುವ ಕೈಂಕರ್ಯ ಮಾಡಲು ಹೇಳಿದರು.

ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ, ಗಡಿಯಲ್ಲಿ ಕನ್ನಡಕ್ಕೆ ಆಪತ್ತು ಇದೆ. ಮಧ್ಯ ಕರ್ನಾಟಕದಲ್ಲಿ ಮಾತ್ರವೇ ಕನ್ನಡ ಉಳಿದಿದೆ. ಕನ್ನಡವು ಉದ್ಯೋಗ ನೀಡುತ್ತಿಲ್ಲ. ಹೀಗಾಗಿ ಉದ್ಯೋಗಕ್ಕೆ ಆಂಗ್ಲ ಭಾಷೆ ಕಲಿಯುವ ಅನಿವಾರ್ಯತೆ ಉಂಟಾಗಿದೆ. ಕೈಗಾರಿಕೆ ಸ್ಥಾಪಿಸುವ ಉದ್ಯಮಿಗಳಿಗೆ ಸಕಲ ಸೌಲಭ್ಯ ನೀಡುವ ಸರ್ಕಾರವು, ಕನ್ನಡಿಗರಿಗೆ ಉದ್ಯೋಗ ನೀಡಲು ಕಟ್ಟಾಜ್ಞೆ ಮಾಡಬೇಕು. ಕನ್ನಡ ಕಟ್ಟಿದ ಮಹನೀಯರ ಬಗ್ಗೆ ಯುವ ಪೀಳಿಗೆಗೆ ತಿಳಿಸುವ ಕೆಲಸ ಮಾಡಲು ಸಲಹೆ ನೀಡಿದರು.

ಸಂಘದ ಅಧ್ಯಕ್ಷ ಚಂದ್ರಕಾತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷರಾದ ಪ್ರೊ. ಮಾಲತಿ ಪಟ್ಟಣಶೆಟ್ಟಿ, ಕಾರ್ಯದರ್ಶಿ ಶಂಕರ ಹಲಗತ್ತಿ, ಬಸವಪ್ರಭು ಹೊಸಕೇರಿ, ಡಾ.ಶ್ರೀಶೈಲ ಹದ್ದಾರ ಇದ್ದರು.