ಸಾರಾಂಶ
ಮಂಗಳೂರು ಗಂಜಿಮಠದ ಝಾರಾ ಕನ್ವೆಂಶನ್ ಸೆಂಟರ್‌ನಲ್ಲಿ ಶನಿವಾರ ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂ (ಬಿಡಬ್ಲ್ಯುಎಫ್) 11 ಜೋಡಿಗಳ ಸರಳ ಸಾಮೂಹಿಕ ವಿವಾಹ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಅತಿಥಿಗಳಾಗಿ ಕರ್ನಾಟಕ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ, ಸಚಿವ ದಿನೇಶ್ ಗುಂಡೂರಾವ್ ಮತ್ತಿತರರು ಪಾಲ್ಗೊಂಡರು.
ಕನ್ನಡಪ್ರಭ ವಾರ್ತೆ ಮಂಗಳೂರು
ಅನಿವಾಸಿ ಭಾರತೀಯರು ಕೂಡ ನಾನಾ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ಕನ್ನಡಿಗರ ಅಹವಾಲು ಆಲಿಸಿ ಅವರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಈ ಅಧಿವೇಶನದಲ್ಲಿ ಅನಿವಾಸಿ ಕನ್ನಡಿಗ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು. ಅದಲ್ಲದೆ ‘ನಮ್ಮ ಊರು-ನಮ್ಮ ನಾಡು’ ಎಂಬ ವಿಶಿಷ್ಟ ಪರಿಕಲ್ಪನೆಯ ಯೋಜನೆ ರೂಪಿಸುವ ಉದ್ದೇಶವಿದ್ದು, ಅನಿವಾಸಿಗಳ ಸಮಸ್ಯೆ ಪರಿಹಾರ-ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆಯ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಕರ್ನಾಟಕ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ತಿಳಿಸಿದರು.ಅವರು ಮಂಗಳೂರು ನಗರ ಹೊರವಲಯದ ಗಂಜಿಮಠದ ಝಾರಾ ಕನ್ವೆಂಶನ್ ಸೆಂಟರ್‌ನಲ್ಲಿ ಶನಿವಾರ ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂ (ಬಿಡಬ್ಲ್ಯುಎಫ್) ಹಮ್ಮಿಕೊಂಡಿದ್ದ 11 ಜೋಡಿಗಳ ಸರಳ ಸಾಮೂಹಿಕ ವಿವಾಹ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಆರ್ಥಿಕ ಸಂಕಷ್ಟದಿಂದಾಗಿ ವಿವಾಹ ಕಾರ್ಯಕ್ರಮಗಳನ್ನು ಉದ್ದೇಶಿತ ರೀತಿಯಲ್ಲಿ ನಡೆಸಲು ಹಲವರಿಗೆ ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಬಿಡಬ್ಲುಎಫ್ ಮಾಡಿರುವ ಈ ಸೇವೆಯು ಶ್ಲಾಘನೀಯ ಎಂದರು.ಬಿಡಬ್ಲ್ಯುಎಫ್ ಸಂಘಟಿಸಿದ ಎಂಟನೇ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಯೇನೆಪೋಯ ವಿವಿ ಕುಲಾಧಿಪತಿ ಡಾ. ಯೇನೆಪೋಯ ಅಬ್ದುಲ್ಲ ಕುಂಞಿ ಉದ್ಘಾಟಿಸಿದರು. ಮಂಗಳೂರು ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಖಾಹ್‌ನ ನೇತೃತ್ವ ವಹಿಸಿದ್ದರು. ಉಡುಪಿ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ದುವಾ ಮತ್ತು ಆಶೀರ್ವಚನ ನೀಡಿದರು. ಬ್ಯಾರೀಸ್ ವೆಲ್ಫೇರ್ ಫೋರಂ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ಲ ಮಾದುಮೂಲೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.