ಕುಷ್ಟಗಿ ಪಟ್ಟಣದ ಪ್ರಮುಖ ರಸ್ತೆ ಹೀಗೆ ಹಾಳಾಗಿದ್ದರೂ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದ್ದು, ಈ ರಸ್ತೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಪರಶಿವಮೂರ್ತಿ ಮಾಟಲದಿನ್ನಿ

ಕುಷ್ಟಗಿ: ಪಟ್ಟಣದ ಬಸವೇಶ್ವರ ವೃತ್ತದಿಂದ ಬಸ್ ನಿಲ್ದಾಣದ ವರೆಗೆ ಸಾಗುವ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾಗಿರುವ ಗುಂಡಿಗಳು ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿದ್ದು, ಪ್ರತಿನಿತ್ಯ ಸಾವಿರಾರು ಜನರು ಭಯದಲ್ಲೇ ಸಂಚರಿಸುವಂತಾಗಿದೆ.

ಪಟ್ಟಣದ ವ್ಯಾಪಾರ ವಹಿವಾಟು, ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು ಹಾಗೂ ಬಸ್ ನಿಲ್ದಾಣವನ್ನು ಸಂಪರ್ಕಿಸುವ ಅತ್ಯಂತ ಪ್ರಮುಖ ರಸ್ತೆ. ಪ್ರತಿದಿನ ಬೆಳಗ್ಗೆಯಿಂದ ರಾತ್ರಿ ತನಕ ಬಸ್‌ಗಳು, ಲಾರಿಗಳು, ಕಾರುಗಳು, ಆಟೋಗಳು, ದ್ವಿಚಕ್ರ ವಾಹನಗಳು ಸೇರಿದಂತೆ ಸಾವಿರಾರು ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದು, ರಸ್ತೆ ಹದಗೆಟ್ಟಿರುವುದರಿಂದ ಪ್ರಯಾಣಿಕರು ಮತ್ತು ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.

ರಸ್ತೆಯ ಹಲವೆಡೆ ಡಾಂಬರು ಸಂಪೂರ್ಣ ಕಿತ್ತು ಹೋಗಿದ್ದು, ಗುಂಡಿಗಳು ನಿರ್ಮಾಣವಾಗಿವೆ. ಕೆಲವು ಗುಂಡಿಗಳು ಎಷ್ಟು ಆಳವಾಗಿವೆಯೆಂದರೆ ಬೈಕ್‌ಗಳು ನಿಯಂತ್ರಣ ತಪ್ಪಿ ಬೀಳುವ ಅಪಾಯ ಎದುರಾಗಿದೆ. ಕಾರು, ಆಟೋ ಹಾಗೂ ಬಸ್‌ಗಳಿಗೂ ನಿಧಾನವಾಗಿ ಸಾಗುವುದನ್ನು ಬಿಟ್ಟು ಬೇರೆ ಮಾರ್ಗವೇ ಇಲ್ಲದಂತಾಗಿದೆ.

ಮಳೆಗಾಲ ಆರಂಭವಾಗಿದ್ದು, ಮಳೆ ಬಂದಾಗ ರಸ್ತೆಯ ಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಗುಂಡಿಗಳಲ್ಲಿ ನೀರು ನಿಂತು ಅವುಗಳ ಆಳವೇ ಗೋಚರಿಸುವುದಿಲ್ಲ. ಇದರಿಂದ ವಾಹನ ಸವಾರರು ಏಕಾಏಕಿ ಗುಂಡಿಗೆ ಬಿದ್ದು ಅಪಘಾತಕ್ಕೀಡಾಗುವ ಅಪಾಯ ಹೆಚ್ಚಾಗಿದೆ.

ರಾತ್ರಿ ವೇಳೆ ರಸ್ತೆ ಇನ್ನಷ್ಟು ಅಪಾಯಕಾರಿಯಾಗುತ್ತದೆ. ರಸ್ತೆ ಗೊತ್ತಿಲ್ಲದವರು ಈ ಮಾರ್ಗದಲ್ಲಿ ಸಂಚರಿಸಿದರೆ ಜೀವವನ್ನೇ ಪಣಕ್ಕಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ದ್ವಿಚಕ್ರ ವಾಹನ ಸವಾರರ ಸ್ಥಿತಿ ಅತ್ಯಂತ ದುಸ್ತರವಾಗಿದೆ. ಗುಂಡಿಗಳನ್ನು ತಪ್ಪಿಸಿಕೊಂಡು ಸಾಗುವ ಪ್ರಯತ್ನದಲ್ಲಿ ಅಪಘಾತದ ಭೀತಿ ಕಾಡುತ್ತಿದೆ. ಮಳೆ ನೀರು ತುಂಬಿರುವ ಗುಂಡಿಗಳು ಕಾಣಿಸದ ಕಾರಣ ಅನೇಕರು ಸಮತೋಲನ ಕಳೆದುಕೊಳ್ಳುತ್ತಿದ್ದಾರೆ. ಪ್ರತಿದಿನ ಜೀವಭಯದಲ್ಲೇ ಸಂಚರಿಸುವಂತಾಗಿದೆ ಎನ್ನುತ್ತಾರೆ ವಾಹನ ಸವಾರರು.

ಪಟ್ಟಣದ ಪ್ರಮುಖ ರಸ್ತೆ ಹೀಗೆ ಹಾಳಾಗಿದ್ದರೂ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದ್ದು, ಈ ರಸ್ತೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಮಳೆಗಾಲದಲ್ಲೇ ಮತ್ತಷ್ಟು ಅಪಘಾತಗಳು ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆ ತುರ್ತು ಕ್ರಮ ಕೈಗೊಂಡು ಗುಣಮಟ್ಟದ ರಸ್ತೆ ನಿರ್ಮಿಸಬೇಕು. ತಾಲೂಕು ಕೇಂದ್ರದ ಪ್ರಮುಖ ರಸ್ತೆಯ ದುಸ್ಥಿತಿಗೆ ಶಾಶ್ವತ ಪರಿಹಾರ ಒದಗಿಸುವುದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಆದ್ಯ ಕರ್ತವ್ಯವಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಕುಷ್ಟಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅನೇಕ ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ಜೀವ ಕೈಲ್ಲಿಟ್ಟುಕೊಂಡು ಸಂಚರಿಸಬೇಕಾಗಿದೆ. ಅಧಿಕಾರಿಗಳು ಗುಂಡಿ ಮುಚ್ಚುವ ಕಾರ್ಯವನ್ನು ತುರ್ತು ಕೈಗೊಳ್ಳಬೇಕು ಎಂದು ವಾಹನ ಸವಾರ ಶಿವರಾಜ ತಟ್ಟಿ ಆಗ್ರಹಿಸಿದರು.