ಸಾರಾಂಶ
ಬಂಗಾರಪೇಟೆ ತಾಲೂಕಿನಲ್ಲಿ ಮಳೆರಾಯನ ಕೃಪೆಯಿಲ್ಲದೆ ಈಗಾಗಲೇ ಕೆರೆಗಳು ಖಾಲಿಯಾಗುತ್ತಿರುವುದರಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಲಕ್ಷಣಗಳು ಗೋಚರಿಸುತ್ತಿರುವುದು ಜನರಲ್ಲಿ ಆತಂಕ ಮೂಡಿಸುವಂತಾಗಿದೆ.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ತಾಲೂಕಿನಲ್ಲಿ ಮಳೆರಾಯನ ಕೃಪೆಯಿಲ್ಲದೆ ಈಗಾಗಲೇ ಕೆರೆಗಳು ಖಾಲಿಯಾಗುತ್ತಿರುವುದರಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಲಕ್ಷಣಗಳು ಗೋಚರಿಸುತ್ತಿರುವುದು ಜನರಲ್ಲಿ ಆತಂಕ ಮೂಡಿಸುವಂತಾಗಿದೆ.ತಾಲೂಕಿನಲ್ಲಿ ವಾಡಿಕೆ ಮಳೆಗಿಂತಲೂ ಅತಿ ಕಡಿಮೆ ಮಳೆಯಾಗಿರುವುದರಿಂದ ಈಗಾಗಲೇ ತಾಲೂಕಿನಲ್ಲಿ ಬರ ಆವರಿಸಿದೆ, ಇದರಿಂದ ಜಾನುವಾರುಗಳಿಗೆ ಮೇವಿನ ಜೊತೆ ಕುಡಿಯುವ ನೀರಿಗೂ ಅಭಾವ ಉಂಟಾಗುವಂತಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಕ್ಷೇತ್ರದಲ್ಲಿ ಸುರಿದ ಮಳೆಗೆ ಒಮ್ಮೆಲೆಯೇ ಆಟದ ಮೈದಾನದಂತಿದ್ದ ಎಲ್ಲಾ ಕೆರೆಗಳು ಭರ್ತಿಯಾಗಿದ್ದವು. ಇದರಿಂದ ಎಲ್ಲಿ ನೋಡಿದರೂ ಹಸಿರು ಆವರಿಸಿಕೊಂಡು ಮತ್ತೆ ಗತವೈಭವ ಮೂಡುವಂತೆ ಮಾಡಿತ್ತು. ಅಲ್ಲದೆ ಮೂರು ತಾಲೂಕಿನ ಜನರ ಬಾಯಾರಿಸುವ ಯರಗೋಳ್ ನೀರಾವರಿ ಯೋಜನೆಯ ಡ್ಯಾಂ ಸಹ ಒಂದೇ ಮಳೆಗೆ ತುಂಬಿ ಕೋಡಿ ಹರಿದಿತ್ತು. ಇನ್ನೇನು ಕ್ಷೇತ್ರದಲ್ಲಿ ಬರ ಮಾಯವಾಗಿದೆ ಎಂದು ಜನರು ನೆಮ್ಮದಿಯಾಗಿ ಉಸಿರಾಡುವಂತಾಗಿತ್ತು. ಈ ಹಿಂದೆ ಸತತವಾಗಿ ಕ್ಷೇತ್ರದಲ್ಲಿ ಬರ ತಾಂಡವಾಡುತ್ತಿದ್ದರಿಂದ ಜನರು ಕೆಂಗೆಟ್ಟಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಮತ್ತೆ ಸಮೃದ್ಧಿಯಾಗಿ ಮಳೆಯಾಗದೆ ತುಂಬಿದ್ದ ಕೆರೆಗಳೆಲ್ಲಾ ಈಗ ಖಾಲಿ ಖಾಲಿಯಾಗುತ್ತಿದೆ. ಅಂತರ್ಜಲ ಮಟ್ಟ ಸಹ ಕುಸಿಯುತ್ತಿದೆ, ಇದರಿಂದ ರೈತರಿಗೆ ಹೇಗಪ್ಪ ಮಳೆ ನಂಬಿ ಕೃಷಿ ಮಾಡುವುದು ಎಂಬ ಚಿಂತೆ ಒಂದೆಡೆಯಾದರೆ ಮತ್ತೊಂದೆರೆ ನಮ್ಮನ್ನೇ ನಂಬಿಕೊಂಡಿರುವ ಜಾನುವಾರುಗಳಿಗೆ ಮೇವು, ಕುಡಿಯಲು ನೀರು ಹೇಗೆ ಪೂರೈಸುವುದು ಎಂಬ ಚಿಂತೆ ಕಾಡುತ್ತಿದೆ. ವರ್ಷದ ಆರಂಭದಲ್ಲೆ ತಾಲೂಕಿನಲ್ಲಿ ಬರದ ಛಾಯೆ ತಾಂಡವಾಡುತ್ತಿದೆ, ಮಳೆ ಕೊರತೆಯಿಂದ ಈಗಾಗಲೇ ರಾಗಿ ಬೆಳೆಯನ್ನು ಅನ್ನದಾತರು ಕೈಸುಟ್ಟುಕೊಳ್ಳುವಂತಾಗಿದೆ. ಫೆಬ್ರವರಿ ತಿಂಗಳಲ್ಲೆ ಕ್ಷೇತ್ರದಲ್ಲಿ ಅಲ್ಲಲ್ಲಿ ಕುಡಿಯುವ ನೀರಿನ ಭವಣೆ ಕಾಣಿಸಿಕೊಳ್ಳುತ್ತಿದೆ,ಇದು ಹೀಗೆ ಮುಂದುವರೆದರೆ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಪರಿಸ್ಥಿತಿ ಹೇಗಿರಬಹುದು ಎಂದು ಊಹಿಸಿದರೆ ಜನರು ಬೆಚ್ಚಿ ಬೀಳುವಂತಾಗಿದೆ. ಫೆಬ್ರವರಿ ಆರಂಭದಿಂದಲೇ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಬಿಸಿಲಿನ ಝಳಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಇದರಿಂದ ಗ್ರಾಮೀಣ ಭಾಗದಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಕಾಣಿಸಿಕೊಂಡು ಪಕ್ಕದ ತಮಿಳುನಾಡಿನಿಂದ ಒಣ ಹುಲ್ಲನ್ನು ಈಗನಿಂದಲೇ ದುಬಾರಿ ಬೆಲೆ ಕೊಟ್ಟು ಸಂಗ್ರಹಿಸುವಂತಾಗಿದೆ. ಇನ್ನೂ ಕೆಲ ರೈತರು ಜಾನುವಾರುಗಳನ್ನು ಪೋಷಿಸಲಾಗದೆ ವಾರದ ಸಂತೆಗಳಲ್ಲಿ ಮಾರಾಟ ಮಾಡಲು ಮುಂದಾಗಿದ್ದಾರೆ. ಸರ್ಕಾರವೇನೋ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಣೆ ಮಾಡಿದೆ. ಆದರೆ, ಯಾವುದೇ ಬರಪರಿಹಾರ ಕಾಮಗಾರಿಗಳನ್ನು ಕೈಗೊಂಡಿಲ್ಲ, ಗುಳೆ ಹೋಗುವ ಕೂಲಿ ಕಾರ್ಮಿಕರನ್ನು ತಡೆಯುವ ಕೆಲಸ ಸಹ ಮಾಡಿಲ್ಲ, ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ಮಾಡಿದವರಿಗೆ ಇದುವರೆಗೂ ಕೂಲಿ ಹಣ ನೀಡಿಲ್ಲ, ಇದರಿಂದ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ಹೊಟ್ಟೆ ತುಂಬಿಸಿಕೊಳ್ಳಲು ನಗರ ಪ್ರದೇಶಗಳಿಗೆ ವಲಸೆ ಹೋಗುವಂತಾಗಿದೆ. ಸರ್ಕಾರ ಬರಪರಿಹಾರ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುವ ಮೂಲಕ ವಲಸೆ ಹೋಗುವುದನ್ನು ತಡೆಯಬೇಕೆಂಬ ಕೂಗು ಕೂಲಿ ಕಾರ್ಮಿಕರಲ್ಲಿ ಕೇಳಿ ಬರುತ್ತಿದೆ.)
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))