ಮಹಾನಗರ ಪಾಲಿಕೆಯ ಹೆಲ್ತ್ ಇನ್ಸ್‌ಪೆಕ್ಟರ್‌ಗಳಾದ ಶಶಿಧರ್ ರಾಜ್ ಮತ್ತು ಆಶಾ ಅವರ ನೇತೃತ್ವದಲ್ಲಿ ಭಾನುವಾರ ಬೆಳಿಗ್ಗೆ ವಿಶೇಷ ಕಾರ್ಯಾಚರಣೆ ನಡೆಸಲಾಗಿದ್ದು, ಅಂಗಡಿ ಮಾಲೀಕರ ಎದುರಲ್ಲೇ ಅವರ ಅಂಗಡಿ ಮುಂಭಾಗದಲ್ಲಿ ಕಸವನ್ನು ಸುರಿದು ದಂಡ ವಿಧಿಸಲಾಯಿತು. ಇದು ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶವಾಗಿದ್ದು, ನಗರ ಸ್ವಚ್ಛತೆಯನ್ನು ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ನಗರದ 7ನೇ ಕ್ರಾಸ್, ಕೆ.ಆರ್. ಪುರಂ ಪ್ರದೇಶದಲ್ಲಿರುವ ರೆಸ್ಟೋಲೆಕ್ಸ್ ಎಂ.ಡಿ. ಫರ್ನಿಚರ್ಸ್ ಅಂಗಡಿಯವರು ಪ್ರತಿದಿನ ತ್ಯಾಜ್ಯ ವಸ್ತುಗಳನ್ನು ನಿಗದಿತಕಸದ ಗಾಡಿಗೆ ಹಾಕದೆ, ರಸ್ತೆ ಬದಿ ಹಾಗೂ ಇತರರ ಜಾಗದಲ್ಲಿ ಅಕ್ರಮವಾಗಿ ಕಸ ಸುರಿಸುತ್ತಿದ್ದ ಘಟನೆಗೆ ಸಂಬಂಧಿಸಿ ಹಾಸನ ಮಹಾನಗರ ಪಾಲಿಕೆ ಕಠಿಣ ಕ್ರಮ ಕೈಗೊಂಡಿದೆ.ಮಹಾನಗರ ಪಾಲಿಕೆಯ ಹೆಲ್ತ್ ಇನ್ಸ್‌ಪೆಕ್ಟರ್‌ಗಳಾದ ಶಶಿಧರ್ ರಾಜ್ ಮತ್ತು ಆಶಾ ಅವರ ನೇತೃತ್ವದಲ್ಲಿ ಭಾನುವಾರ ಬೆಳಿಗ್ಗೆ ವಿಶೇಷ ಕಾರ್ಯಾಚರಣೆ ನಡೆಸಲಾಗಿದ್ದು, ಅಂಗಡಿ ಮಾಲೀಕರ ಎದುರಲ್ಲೇ ಅವರ ಅಂಗಡಿ ಮುಂಭಾಗದಲ್ಲಿ ಕಸವನ್ನು ಸುರಿದು ದಂಡ ವಿಧಿಸಲಾಯಿತು. ಇದು ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶವಾಗಿದ್ದು, ನಗರ ಸ್ವಚ್ಛತೆಯನ್ನು ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂಗಡಿ ಮಾಲೀಕರಿಗೆ ಹಲವು ಬಾರಿ ಕಸದ ಸರಿಯಾದ ವಿಲೇವಾರಿಯ ಕುರಿತು ತಿಳುವಳಿಕೆ ನೀಡಲಾಗಿತ್ತು. ಆದರೆ ಎಚ್ಚರಿಕೆಗಳನ್ನು ನಿರ್ಲಕ್ಷಿಸಿ ಪ್ರತಿದಿನವೂ ರಸ್ತೆ ಬದಿಯಲ್ಲಿ ಕಸ ಸುರಿಸುವುದು ಮುಂದುವರಿದಿದ್ದರಿಂದ, ಇಂದು ಈ ರೀತಿಯ ಕಠಿಣ ಕ್ರಮ ಅನಿವಾರ್ಯವಾಯಿತು ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಪಷ್ಟಪಡಿಸಿದರು.ನಗರದ ಸ್ವಚ್ಛತೆ ಪ್ರತಿಯೊಬ್ಬನಾಗರಿಕನ ಜವಾಬ್ದಾರಿಯಾಗಿದೆ. ವಾಣಿಜ್ಯ ಸಂಸ್ಥೆಗಳು ಕಡ್ಡಾಯವಾಗಿ ಕಸವನ್ನು ಕಸದ ಗಾಡಿಗೆ ಮಾತ್ರ ಹಾಕಬೇಕು. ನಿಯಮ ಉಲ್ಲಂಘಿಸಿದರೆ ಮುಂದೆಯೂ ಇದೇ ರೀತಿಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಸ್ವಚ್ಛ ನಗರ ನಿರ್ಮಾಣಕ್ಕೆ ನಿಯಮ ಪಾಲನೆಯ ಅಗತ್ಯತೆಯನ್ನು ಮತ್ತೆ ನೆನಪಿಸಿದೆ.