ಜಿ.ಎಸ್. ಪಾಟೀಲರ ರಾಜಕೀಯ ಪಯಣದಲ್ಲಿ ರೋಣ ಕ್ಷೇತ್ರದ ಮೂಲ ಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿರುವುದು ಅವರ ಸಾಧನೆಗಳ ಪಟ್ಟಿಯಿಂದ ಸ್ಪಷ್ಟವಾಗುತ್ತದೆ.

ಪಿ.ಎಸ್. ಪಾಟೀಲ

ರೋಣ: ಸರಳ ಸ್ವಭಾವ, ಮಿತಭಾಷಿತನ ಹಾಗೂ ನಿರಂತರ ಜನಸಂಪರ್ಕದ ಮೂಲಕ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಜಿ.ಎಸ್. ಪಾಟೀಲರ ಸಾರ್ವಜನಿಕ ಜೀವನ ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ಪಯಣವನ್ನು ಹೊಂದಿದೆ.

ಗ್ರಾಮೀಣ ಭಾಗದ ಸಮಸ್ಯೆಗಳನ್ನು ಹತ್ತಿರದಿಂದ ಕಂಡು, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜಕೀಯವನ್ನು ಸೇವೆಯ ಸಾಧನವಾಗಿ ಬಳಸಿಕೊಂಡಿರುವ ಅವರ ಪಯಣದಲ್ಲಿ ರೋಣ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಹಲವು ಅಧ್ಯಾಯಗಳು ದಾಖಲಾಗಿವೆ.

1983ರಲ್ಲಿ ರೋಣ ಪಟ್ಟಣ ಪಂಚಾಯಿತಿ ಹಾಗೂ ಸವಡಿ ಎಪಿಎಂಸಿ ಕ್ಷೇತ್ರದಿಂದ ಆಯ್ಕೆಯಾಗುವ ಮೂಲಕ ಜಿ.ಎಸ್. ಪಾಟೀಲರು ರಾಜಕೀಯ ಪ್ರವೇಶಿಸಿದರು. ಬಳಿಕ 1989ರಲ್ಲಿ ರೋಣ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 1999ರ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 29 ಸಾವಿರ ಮತಗಳ ಅಂತರದಿಂದ ಗೆದ್ದು ಮತ್ತೊಮ್ಮೆ ಶಾಸಕರಾದದ್ದು ಅವರ ರಾಜಕೀಯ ಜನಪ್ರಿಯತೆಗೆ ಸಾಕ್ಷಿಯಾಯಿತು.

ಅಭಿವೃದ್ಧಿಯೇ ರಾಜಕೀಯದ ಧ್ಯೇಯ: ಜಿ.ಎಸ್. ಪಾಟೀಲರ ರಾಜಕೀಯ ಪಯಣದಲ್ಲಿ ರೋಣ ಕ್ಷೇತ್ರದ ಮೂಲ ಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿರುವುದು ಅವರ ಸಾಧನೆಗಳ ಪಟ್ಟಿಯಿಂದ ಸ್ಪಷ್ಟವಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್, ಕುಡಿಯುವ ನೀರು, ಶಿಕ್ಷಣ, ಆರೋಗ್ಯ, ಕೃಷಿ, ರಸ್ತೆ ಹಾಗೂ ಸೇತುವೆ ನಿರ್ಮಾಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದಾರೆ.

ಮಲಪ್ರಭಾ ನದಿಯಿಂದ ಚೋಳಚಗುಡ್ಡ ಬ್ಯಾರೇಜ್ ನಿರ್ಮಿಸಿ ರೋಣ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ವ್ಯವಸ್ಥೆ ಕಲ್ಪಿಸುವುದು, ವಿವಿಧ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಯೋಜನೆಗಳನ್ನು ಮಂಜೂರು ಮಾಡಿಸಿರುವುದು ಅವರ ಪ್ರಮುಖ ಕಾರ್ಯಗಳಾಗಿವೆ. ಬರಗಾಲದ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಕೆರೆಗಳನ್ನು ನಿರ್ಮಿಸುವ ಮೂಲಕ ಗ್ರಾಮೀಣ ಜನರು ಹಾಗೂ ರೈತರಿಗೆ ಉದ್ಯೋಗ ಮತ್ತು ನೀರಿನ ಸೌಲಭ್ಯ ಒದಗಿಸುವ ಕಾರ್ಯಕ್ಕೂ ಒತ್ತು ನೀಡಿದ್ದಾರೆ.

ಕೃಷಿ ಹಾಗೂ ನೀರಾವರಿಗೆ ಬಲ: ನರೇಗಲ್, ಕಣಗಿನಹಾಳ ಹಾಗೂ ಗಜೇಂದ್ರಗಡ ಭಾಗಗಳಲ್ಲಿ ಚೆಕ್‌ ಡ್ಯಾಂಗಳ ನಿರ್ಮಾಣ, ಮಲಪ್ರಭಾ ಬಲದಂಡೆ ಕಾಲುವೆಯನ್ನು ವಿಸ್ತರಿಸಿ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ರೋಣ ಭಾಗದಲ್ಲಿ 4 ಸಾವಿರ ಟನ್ ಸಾಮರ್ಥ್ಯದ ಬೃಹತ್ ಉಗ್ರಾಣ ನಿರ್ಮಿಸಿದ್ದಾರೆ. ಅಲ್ಲದೆ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ 10 ಸಾವಿರ ಟನ್ ಧಾನ್ಯ ಸಂಗ್ರಹ ಸಾಮರ್ಥ್ಯದ 16 ಉಗ್ರಾಣಗಳನ್ನು ಸ್ಥಾಪಿಸಿದ್ದಾರೆ.

ಶಿಕ್ಷಣಕ್ಕೆ ವಿಶೇಷ ಒತ್ತು: ಜಿ.ಎಸ್. ಪಾಟೀಲರ ಸಾರ್ವಜನಿಕ ಬದುಕಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಗಮನಾರ್ಹವಾಗಿದೆ. ರೋಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಹಲವು ಶಿಕ್ಷಣ ಸಂಸ್ಥೆಗಳ ಆರಂಭಕ್ಕೆ ಕಾರಣರಾಗಿರುವ ಅವರು, ಹಿಂದುಳಿದ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಶಾಲೆ, ಕಾಲೇಜು, ವಸತಿನಿಲಯ ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಒತ್ತು ನೀಡಿರುವುದನ್ನು ದಾಖಲೆಯಲ್ಲಿನ ವಿವರಗಳು ತೋರಿಸುತ್ತವೆ.

ಡಿಪಿಇಪಿ ಯೋಜನೆಯಡಿ ರೋಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಒಟ್ಟು 85 ಶಾಲಾ ಕೊಠಡಿಗಳು, ಶಾಲೆಗಳಿಗೆ ಕುಡಿಯುವ ನೀರು, ಶೌಚಾಲಯ, ಕಂಪ್ಯೂಟರ್, ವಿದ್ಯುತ್ ಹಾಗೂ ಇತರ ಮೂಲ ಸೌಕರ್ಯ ಕಲ್ಪಿಸುವ ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ಗ್ರಾಮೀಣ ಮಕ್ಕಳಿಗೆ ವಸತಿ ಸೌಲಭ್ಯ ಕಲ್ಪಿಸಲು ವಿವಿಧ ಕಡೆ ವಸತಿನಿಲಯಗಳ ನಿರ್ಮಾಣಕ್ಕೂ ಆದ್ಯತೆ ನೀಡಿದ್ದಾರೆ.

ರಸ್ತೆ ಸಂಪರ್ಕಕ್ಕೆ ಹೊಸ ಆಯಾಮ: ಹಿರೇಅಳಗುಂಡಿ, ಹೊನ್ನಿಗನೂರು, ಯರೆಬೆಲೆರಿ, ಕುರಡಗಿ ಹಾಗೂ ಗುಜಮಾಗಡಿ ಸೇರಿದಂತೆ ಗ್ರಾಮಗಳಲ್ಲಿ ಸೇತುವೆ ನಿರ್ಮಿಸಿ ಸಾರ್ವಜನಿಕರಿಗೆ ಸಾರಿಗೆ ಸಂಪರ್ಕ ಕಲ್ಪಿಸಿರುವುದು ಗ್ರಾಮೀಣಾಭಿವೃದ್ಧಿಯ ಪ್ರಮುಖ ಹೆಜ್ಜೆಗಳಾಗಿವೆ.

ಬರಗಾಲದಲ್ಲೂ ಜನರ ಕೈ ಹಿಡಿದ ನಾಯಕ: ಬರಗಾಲದ ಸಂದರ್ಭಗಳಲ್ಲಿ ಜನರಿಗೆ ಉದ್ಯೋಗ ಮತ್ತು ನೀರಿನ ಸೌಲಭ್ಯ ಒದಗಿಸುವ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದು ಜಿ.ಎಸ್. ಪಾಟೀಲರ ಸಾಧನೆಗಳ ಪಟ್ಟಿಯಲ್ಲಿ ಪ್ರಮುಖವಾಗಿ ಕಾಣುತ್ತದೆ. ಹಲವು ಗ್ರಾಮಗಳಲ್ಲಿ ಹೊಸ ಕೆರೆಗಳ ನಿರ್ಮಾಣದ ಮೂಲಕ ರೈತ ಕೂಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸುವುದರ ಜತೆಗೆ ಬರದ ಸಂಕಷ್ಟದಿಂದ ಬಳಲುತ್ತಿದ್ದ ಗ್ರಾಮೀಣ ಜನರಿಗೆ ನೆರವು ನೀಡಿದ್ದಾರೆ.

ಕೊರೋನಾ ಸಂಕಷ್ಟದಲ್ಲೂ ಸೇವೆ: ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ರೋಣ ಕ್ಷೇತ್ರದಲ್ಲಿ ಆಹಾರ ಸಾಮಗ್ರಿ ವಿತರಣೆ, ವಿದ್ಯಾರ್ಥಿಗಳಿಗೆ ಪರೀಕ್ಷಾ ಸಹಾಯ, ಆರೋಗ್ಯ ಕಿಟ್‌ಗಳ ವಿತರಣೆ ಸೇರಿದಂತೆ ಹಲವು ಸೇವಾ ಕಾರ್ಯಗಳನ್ನು ಕೈಗೊಂಡಿದ್ದಾರೆ. ರೋಣ ಆಯುರ್ವೇದ ಮಹಾವಿದ್ಯಾಲಯದಲ್ಲಿ 25 ವೆಂಟಿಲೇಟರ್ ಹಾಸಿಗೆ ಹಾಗೂ 25 ಸಾಮಾನ್ಯ ಹಾಸಿಗೆ ಸೇರಿದಂತೆ 50 ಹಾಸಿಗೆಗಳ ಕೋವಿಡ್ ಆಸ್ಪತ್ರೆ ಆರಂಭವಾಗಿತ್ತು. ಗದಗ ಜಿಲ್ಲೆಯಲ್ಲಿ ನಾಲ್ಕು ಆ್ಯಂಬುಲೆನ್ಸ್‌ಗಳ ಸೇವೆಯೂ ಒದಗಿಸಲಾಗಿತ್ತು.

ಅಧಿಕಾರಕ್ಕಿಂತ ಅಭಿವೃದ್ಧಿ ಮತ್ತು ರಾಜಕೀಯಕ್ಕಿಂತ ಜನಸೇವೆ ಎಂಬ ಧೋರಣೆಯೊಂದಿಗೆ ಸಾಗಿದ ಜಿ.ಎಸ್. ಪಾಟೀಲರ ನಾಲ್ಕು ದಶಕಗಳ ಸಾರ್ವಜನಿಕ ಬದುಕು, ರೋಣದ ಅಭಿವೃದ್ಧಿಯ ಹಲವು ಮೈಲಿಗಲ್ಲುಗಳೊಂದಿಗೆ ಗುರುತಿಸಿಕೊಂಡಿರುವ ಪಯಣವಾಗಿದೆ.ಭವ್ಯ ಸ್ವಾಗತಕ್ಕೆ ಸಿದ್ಧತೆ...

ವಿಧಾನಸಭೆಯ ಸಭಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ನಂತರ ಮೊದಲ ಬಾರಿಗೆ ರೋಣ ಕ್ಷೇತ್ರಕ್ಕೆ ಆಗಮಿಸುತ್ತಿರುವ ಜಿ.ಎಸ್. ಪಾಟೀಲ ಅವರಿಗೆ ಭವ್ಯ ಸ್ವಾಗತ ನೀಡಲು ಅಭಿಮಾನಿಗಳ ಪಡೆ ಸಿದ್ಧತೆ ನಡೆಸಿದೆ.

ಆ. 22ರಂದು ಬೆಳಗ್ಗೆ ಹೊಸಪೇಟೆ ಮೂಲಕ ರೋಣ ಕ್ಷೇತ್ರದ ಗಜೇಂದ್ರಗಡಕ್ಕೆ ಆಗಮಿಸಲಿದ್ದು, ಅಲ್ಲಿ ಕಾರ್ಯಕರ್ತರು ಸ್ವಾಗತ ಕೋರಲಿದ್ದಾರೆ. ನಂತರ ಅಲ್ಲಿಂದ ರಾಜೂರು, ಸೂಡಿ, ಹೊಸಳ್ಳಿ ಮೂಲಕ ರೋಣ ಪಟ್ಟಣಕ್ಕೆ ಆಗಮಿಸಲಿದ್ದಾರೆ. ರೋಣದ ಶಿವಾನಂದ ಮಠದಿಂದ ಅದ್ಧೂರಿ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಿದ್ದು, ಪಟ್ಟಣದ ಸೂಡಿ ಕ್ರಾಸ್‌ನಲ್ಲಿ ಕ್ರೇನ್ ಮೂಲಕ ಬೃಹತ್ ಹಾರ ಹಾಕಿ ಭವ್ಯ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಂತರ ಸಭಾಧ್ಯಕ್ಷರಾಗಿ ಆಯ್ಕೆಯಾಗಲು ಕಾರಣಿಕರ್ತರಾದ ಮತಕ್ಷೇತ್ರದ ನಾಗರಿಕರಿಗೆ ಜಿ.ಎಸ್. ಪಾಟೀಲರು ಕೃತಜ್ಞತೆ ಸಲ್ಲಿಸಲಿದ್ದಾರೆ.