ಧರ್ಮ ಸಂಘಟನೆಗೆ ಸಾಮೂಹಿಕ ಲಕ್ಷ ಬಿಲ್ವಾರ್ಚನೆ ಸರಳ ವರದಾನ

| Published : Aug 01 2025, 11:45 PM IST

ಸಾರಾಂಶ

ಸಮಾಜ, ಸಂಸ್ಕೃತಿ ಮತ್ತು ಧರ್ಮ ಸಂಘಟನೆಗೆ ಸಾಮೂಹಿಕ ಲಕ್ಷ ಬಿಲ್ವಾರ್ಚನೆ ಸರಳ ವರದಾನವಾಗಿದೆ ಎಂದು ಬೇಮಳಖೇಡ ಹಿರೇಮಠ ಸಂಸ್ಥಾನದ ಡಾ.ರಾಜಶೇಖರ ಶಿವಾಚಾರ್ಯರು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಬೀದರ್‌

ಸಮಾಜ, ಸಂಸ್ಕೃತಿ ಮತ್ತು ಧರ್ಮ ಸಂಘಟನೆಗೆ ಸಾಮೂಹಿಕ ಲಕ್ಷ ಬಿಲ್ವಾರ್ಚನೆ ಸರಳ ವರದಾನವಾಗಿದೆ ಎಂದು ಬೇಮಳಖೇಡ ಹಿರೇಮಠ ಸಂಸ್ಥಾನದ ಡಾ.ರಾಜಶೇಖರ ಶಿವಾಚಾರ್ಯರು ಅಭಿಪ್ರಾಯಪಟ್ಟರು.

ಶ್ರಾವಣ ಮಾಸದ ಅಂಗವಾಗಿ ಹುಮನಾಬಾದ್‌ ತಾಲೂಕಿನ ಘಾಟಬೋರಾಳದ ಮಹಾದೇವ ಮಂದಿರದಲ್ಲಿ ನಡೆದ ಸಾಮೂಹಿಕ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಶ್ರಾವಣ ಮಾಸಕ್ಕೆ ಅತ್ಯಂತ ಮಹತ್ವವಿದ್ದು, ಈ ತಿಂಗಳು ಪೂಜಾರ್ಚನೆ. ಜಪತಪ ಅನುಷ್ಠಾನ, ದಾನಧರ್ಮವನ್ನು ಕೈಗೊಳ್ಳಲು ಪ್ರಶಸ್ತವಾಗಿದೆ. ಭಗವಂತನು ಭಕ್ತರ ಪೂಜಾರ್ಚನೆಯ ಭಕ್ತಿಯನ್ನು ಸ್ವಿಕರಿಸಲು. ಈ ತಿಂಗಳು ಭೂಲೋಕದಲ್ಲಿ ಒಂದು ತಿಂಗಳು ಪರಿಭ್ರಮಣ ಮಾಡುವನೆಂದು ಅನನ್ಯ ನಂಬಿಕೆಯನ್ನು ಸನಾತನ ಕಾಲದಿಂದಲೂ ಇದೆ ಎಂದರು.

ಶಿವನ ಪೂಜೆಯಲ್ಲಿ ಬಿಲ್ವಾರ್ಚನೆಗೆ ಅತ್ಯಂತ ಮಹತ್ವವಿದೆ. ಬಿಲ್ವಪತ್ರೆ ಮಹಾದೇವನಿಗೆ ಅತ್ಯಂತ ಪ್ರೀಯವಾಗಿದ್ದು, ಶುದ್ಧ ಮನಸ್ಸಿನಿಂದ ಬಿಲ್ವಪತ್ರೆ ಅರ್ಪಿಸಿದರೆ ದೇವರು ಸಂತುಷ್ಟವಾಗಿ ಬೇಡಿದ ವರಗಳನ್ನು ಕೊಡುವನೆಂಬ ನಂಬಿಕೆ ಭಕ್ತರಲ್ಲಿದೆ. ಕಳೆದ ವರ್ಷದಂತೆ ಈ ವರ್ಷ ಅಯ್ದ ಕಡೆಗಳಲ್ಲಿ ಸಾಮೂಹಿಕ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಭಾನುವಾರ ಮತ್ತು ಸೋಮವಾರಗಳಲ್ಲಿ ಈ ವರ್ಷದ ಶ್ರಾವಣದಲ್ಲಿ ಹಮ್ಮಿಕೊಂಡಿರುವ ಈ ಲಕ್ಷ ಬಿಲ್ವಾರ್ಚನೆಯು ಅತ್ಯಂತ ಯಶಸ್ವಿಯಾಗಿ ನಡೆದಿರುವುದು ಸಾಮಾಜಿಕ ಸಂಘಟನೆಗೆ ಬಲ ತುಂಬಿದೆ ಎಂದು ಶ್ರೀಗಳು ಹೇಳಿದರು.

ಸುಮಾರು 120ಕ್ಕೂ ಅಧಿಕ ದಂಪತಿಗಳು ಸಾಮೂಹಿಕ ಲಕ್ಷ ಬಿಲ್ವಾರ್ಚನೆಯಲ್ಲಿ ಪಾಲ್ಗೊಂಡಿದ್ದರು. ಷಣ್ಮುಖಯ್ಯಸ್ವಾಮಿ ದಾಸೋಹ ಸೇವೆ ಮಾಡಿದರು. ದೇವಸ್ಥಾನದ ಅಧ್ಯಕ್ಷ ನಾರಾಯಣರಾವ್‌ ಮೂಳೆ, ಪೂಜಾರಿ ಹಣಮಂತರಾವ್‌ ಧಮ್ಮನಸೂರೆ, ಬಸವರಾಜ ಸ್ವಾಮಿ, ಶಂಕರ ಧಮ್ಮನಸೂರೆ ಹಾಗೂ ರಮೇಶ ಧಮ್ಮನಸೂರೆ ಮತ್ತಿತರ ಗಣ್ಯರು ಇದ್ದರು.