ಹಾವೇರಿ ನಗರದ ಪತ್ರಿಕಾ ಭವನ ಕಟ್ಟಡಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸನ್ಮಾನಿಸಲಾಯಿತು.
ಹಾವೇರಿ: ಜಿಲ್ಲೆಯಲ್ಲಿ ಅನುಷ್ಠಾನಗೊಂಡಿರುವ ಮೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಶೀಘ್ರದಲ್ಲಿ ಪೂರ್ಣಗೊಳ್ಳಲಿದ್ದು, ಜಿಲ್ಲೆಯ ಬಹುತೇಕ ಹಳ್ಳಿಗಳಿಗೆ ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.ನಗರದ ಪತ್ರಿಕಾ ಭವನ ಕಟ್ಟಡಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಹಾವೇರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿದ್ದೇನೆ. ಈಗಾಗಲೇ ಹಾವೇರಿ ಮೆಡಿಕಲ್ ಕಾಲೇಜು ಉತ್ತಮವಾಗಿ ನಡೆಯುತ್ತಿದ್ದು, ರಾಜ್ಯದಲ್ಲಿಯೇ ಮಾದರಿಯಾಗಿದೆ. ಕಡಿಮೆ ಜಾಗದಲ್ಲಿ ಉತ್ತಮ ಕಾಲೇಜು ನಿರ್ಮಾಣ ಮಾಡಿದ್ದು, ಜ.7ರಂದು ಉದ್ಘಾಟನೆಗೊಳ್ಳಲಿದೆ. ಹಾವೇರಿ ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯ ಕೊರತೆ ಇರುವುದು ನಿಜ. ಈ ಹಿನ್ನೆಲೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಒತ್ತು ನೀಡಿದ್ದೇವೆ ಎಂದರು.ನಾನು ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದೇನೆ. ಜಿಲ್ಲೆಯ ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಜಿಲ್ಲೆಯ ರೈತರು ಒಂದೇ ಬೆಳೆ ನೆಚ್ಚಿಕೊಳ್ಳದೆ ಎರಡ್ಮೂರು ಬೆಳೆ ಬೆಳೆಯಬೇಕು. ಒಂದಿಲ್ಲೊಂದು ಬೆಳೆ ಕೈ ಹಿಡಿಯುತ್ತದೆ. ರೈತ ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗದಿರುವುದು ಈ ದೇಶದ ದುರಂತ. ಹಿಂದೆ 35 ಕೋಟಿ ಜನ ಒಪ್ಪತ್ತು ಇದ್ದು ಬದುಕಿದ್ದರೆ, ಇಂದು 140 ಕೋಟಿ ಜನರಿಗೆ ಕೂರಿಸಿ ಊಟ ಹಾಕುವ ಶಕ್ತಿ ಭಾರತದ ರೈತರಿಗೆ ಇದೆ. ಅವರ ಶ್ರಮಕ್ಕೆ ಪ್ರತಿಫಲ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಮೆಡಿಕಲ್ ಕಾಲೇಜು ಪ್ರಾರಂಭಕ್ಕೆ, ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಸಚಿವರ ಶ್ರಮ ಬಹಳಷ್ಟಿದೆ. ಸಚಿವರು ಜಿಲ್ಲೆಯ ಅಭಿವೃದ್ಧಿಗೆ ಬದ್ಧರಾಗಿದ್ದು, ನಮ್ಮ ಜಿಲ್ಲೆಗೆ ಸಿಕ್ಕಿರುವುದು ನಮ್ಮ ಸುದೈವ. ಜಿಲ್ಲಾ ಪತ್ರಕರ್ತರ ಸಂಘವು ರಾಜಕೀಯೇತರವಾಗಿ, ಅಭಿವೃದ್ಧಿ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿದೆ. ಬೇಡ್ತಿ ವರದಾ ನದಿ ಜೋಡಣೆಗೆ ಪೂರಕವಾಗಿ ವರದಿ ಪ್ರಕಟಿಸಿದರೆ ಅನುಕೂಲ ಆಗುತ್ತದೆ. ಅನುಷ್ಠಾನಕ್ಕೆ ಪತ್ರಕರ್ತರ ಸಹಕಾರ ಕೂಡ ಮುಖ್ಯವಾದದ್ದು. ನಾನು ಕೂಡ ಕ್ಷೇಮಾಭಿವೃದ್ಧಿ ನಿಧಿಗೆ ಒಂದು ಲಕ್ಷ ರು. ಕೊಡುತ್ತೇನೆ ಎಂದು ಭರವಸೆ ನೀಡಿದರು.ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ಕುರುವತ್ತೇರ ಮಾತನಾಡಿ, ಪತ್ರಿಕಾ ಭವನದ ಅಭಿವೃದ್ಧಿಗೆ ಅನುದಾನ, ಪತ್ರಿಕಾ ಭವನದ ಮುಂಭಾಗದಲ್ಲಿ ಒತ್ತುವರಿಯಾದ ಜಾಗ ತೆರವುಗೊಳಿಸುವುದು ಹಾಗೂ ಪತ್ರಕರ್ತರಿಗೆ ನಿವೇಶನ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದರು. ಈ ವೇಳೆ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ, ಆನಂದಸ್ವಾಮಿ ಗಡ್ಡದೇವರಮಠ, ಅಬ್ದುಲ್‌ಮುನಾಫ್ ಎರೇಶಿಮಿ, ಸಂಘದ ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚಾವಡಿ, ರಾಜ್ಯ ಸಮಿತಿ ಸದಸ್ಯಪರಸಪ್ಪ ಸತ್ಯಪ್ಪನವರ, ಖಜಾಂಚಿ ಬಸವರಾಜ ಮರಳಿಹಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರೇಶ ಮಡ್ಲೂರ ಸೇರಿದಂತೆ ಸಂಘದ ಪದಾಧಿಕಾರಿಗಳು, ಪತ್ರಕರ್ತರು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ನಾರಾಯಣ ಹೆಗಡೆ ಸ್ವಾಗತಿಸಿ, ನಿರ್ವಹಿಸಿದರು.ಜಿಲ್ಲಾ ಪತ್ರಿಕಾ ಭವನದ ಮೇಲ್ಭಾಗದಲ್ಲಿ ಸಭಾಭವನ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ನೀಡುವಂತೆ ಜಿಲ್ಲೆಯ ಶಾಸಕರ ಜತೆಗೂಡಿ ಮುಖ್ಯಮಂತ್ರಿಗಳ ಜತೆಗೆ ಚರ್ಚಿಸಿ ಅನುದಾನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.ಹಾವೇರಿಯ ಜೆ.ಎಚ್ ಪಟೇಲ್ ವೃತ್ತದಿಂದ ಎಂಜನಿಯರಿಂಗ್ ಕಾಲೇಜುವರೆಗೆ ಹಾಗೂ ವಾಲ್ಮೀಕಿ ಸರ್ಕಲ್‌ನಿಂದ ಬೈಪಾಸ್‌ವರೆಗೆ ರಸ್ತೆ ಅಗಲೀಕರಣ ಮಾಡುವುದು ಸಚಿವರ ಸಂಕಲ್ಪ. ಇದು ಶೀಘ್ರ ಸಾಕಾರಗೊಳ್ಳಲಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳ ಅಭಿವೃದ್ಧಿಗೆ ಸಚಿವರು ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ. ನಾನು ಕೂಡ ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ನಿಧಿಗೆ ಒಂದು ಲಕ್ಷ ರು. ನೆರವು ಕೊಡುತ್ತೇನೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.