ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು
ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೂಲಭೂತ ಸೌಲಭ್ಯ, ಸೇವಾ ಸೌಲಭ್ಯ ಹಾಗೂ ಮೊಬೈಲ್ ಆಪ್ ಗಳಲ್ಲಿ ನಿರಂತರವಾಗಿ ಕೆಲಸ ಮಾಡಲು ಒತ್ತಡ ಹೇರುತ್ತಿರುವುದನ್ನು ನಿಲ್ಲಿಸಬೇಕು ಎಂದು ನಗರದ ತಾಲೂಕು ಕಚೇರಿ ಮುಂಭಾಗ ಗುರುವಾರ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ತಾಲೂಕು ಘಟಕದ ವತಿಯಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಯಿತು.ಈ ವೇಳೆ ಮುಷ್ಕರ ನಿರತ ಗ್ರಾಮ ಆಡಳಿತ ಅಧಿಕಾರಿಗಳನ್ನು ಉದ್ದೇಶಿಸಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕು ಘಟಕದ ಅಧ್ಯಕ್ಷ ಬಿ. ಗಂಗಾಧರ್ ಮಾತನಾಡಿ, ನಾವು ಒತ್ತಡದಲ್ಲಿಯೇ ಸದಾ ಕೆಲಸ ನಿರ್ವಹಿಸುವಂತಹ ವಾತಾವರಣ ಸೃಷ್ಟಿಯಾಗಿದೆ. ತಾಲೂಕಿನ ಗಡಿ ಗ್ರಾಮಗಳಿಗೆ ಒಂದೆರಡು ಗಂಟೆಗಳ ಪ್ರಯಾಣದ ನಂತರ ತಲುಪಿಕೊಳ್ಳುವ ಹೊತ್ತಿಗೆ ಮೀಟಿಂಗ್ ಇದೆ ಬನ್ನಿ, ತುರ್ತು ಯಾವುದೋ ದಾಖಲೆ ಬೇಕು ಒತ್ತಡ ಹೇರಲಾಗುತ್ತದೆ ಎಂದು ದೂರಿದರು.
ಆಗ ಹಳ್ಳಿಗಳಿಂದ ಬರುವ ಅಧಿಕಾರಿಗಳು ಕೆಲಸ ಅರ್ಧಕ್ಕೆ ಬಿಟ್ಟು ಬರಬೇಕಾಗುತ್ತದೆ. ನಮ್ಮದು ತಾಂತ್ರಿಕ ಹುದ್ದೆಯಲ್ಲದಿದ್ದರೂ ಸಹ ಸರ್ಕಾರ ಆಧಾರ್ ಸೀಡ್, ಬಗರ್ ಹುಕುಂ, ಲ್ಯಾಂಡ್ ಬೀಟ್, ಬೆಳೆ ಸಮೀಕ್ಷೆಯಂತಹ ಹಲವಾರು ಕೆಲಸಗಳನ್ನು ವೆಬ್ ಅಪ್ಲಿಕೇಶನ್ ಗಳ ಮೂಲಕ ನಿರ್ವಹಿಸಲು ಹೇಳುತ್ತದೆ. ಆ ಕೆಲಸಗಳಿಗೆ ಬೇಕಾದ ಸಮಯವನ್ನು ಸಹ ನೀಡದೇ ಇರುವುದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಾವು ಬರೀ ಒತ್ತಡದಲ್ಲೇ ಕಾರ್ಯ ನಿರ್ವಹಿಸಬೇಕಾಗುತ್ತದೆ. ಮೂಲಭೂತ ಸೌಲಭ್ಯಗಳ ಕೊರತೆ ಇದುವರೆಗೂ ನೀಗಿಸಲಾಗಿಲ್ಲ. ದಾಖಲೆಗಳ ಸುರಕ್ಷತೆಗೆ ಸುಸಜ್ಜಿತ ಕೊಠಡಿ, ಕಂಪ್ಯೂಟರ್, ಪಿಟೋಪಕರಣ, ಪ್ರಿಂಟರ್, ಸ್ಕ್ಯಾನರ್ ಒದಗಿಸಲಾಗಿಲ್ಲ. ವೆಬ್ ಅಪ್ಲಿಕೇಶನ್ ಗಳಲ್ಲಿ ಕೆಲಸ ನಿರ್ವಹಿಸುತ್ತಿರುವುದರಿಂದ ಗ್ರಾಮ ಆಡಳಿತ ಅಧಿಕಾರಿಗಳಿಗೆ ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನೀಡಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ರಜಾ ದಿನಗಳಲ್ಲಿ ಕೆಲಸ ನಿರ್ವಹಿಸುವಂತೆ ಒತ್ತಡ ಹೇರಬಾರದು. ಕೆಲಸದ ಅವಧಿಯಲ್ಲಿ ಮತ್ತು ನಂತರದ ಅವಧಿಯಲ್ಲಿ ನಡೆಸಲಾಗುವ ಎಲ್ಲಾ ಬಗೆಯ ವರ್ಚುವಲ್ ಸಭೆಗಳನ್ನು ರದ್ದುಗೊಳಿಸಬೇಕು. ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವವರೆಗೆ ಲೇಖನಿ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರೆಸಲಾಗುವುದು ಎಂದು ಎಚ್ಚರಿಸಿದರು.ಮುಷ್ಕರದ ಸ್ಥಳಕ್ಕೆ ತಹಸೀಲ್ದಾರ್ ರಾಜೇಶ್ ಕುಮಾರ್ ಭೇಟಿ ನೀಡಿ, ನಿಮ್ಮ ಎಲ್ಲಾ ಬೇಡಿಕೆಗಳನ್ನು ಮೇಲಾಧಿಕಾರಿಗಳಿಗೆ, ಸರ್ಕಾರಕ್ಕೆ ಕಳಿಸಿಕೊಡುವ ಕೆಲಸ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಕುಮಾರ್, ರಾಜ್ಯ ಪರಿಷತ್ ಸದಸ್ಯ ಎಚ್.ಎನ್ ಯಶೋಧರ್, ಗ್ರಾಮ ಆಡಳಿತ ಅಧಿಕಾರಿಗಳ ತಾಲೂಕು ಘಟಕದ ಗೌರವಾಧ್ಯಕ್ಷ ವರದರಾಜ್, ಪ್ರಧಾನ ಕಾರ್ಯದರ್ಶಿ ಆರ್ ಎಂ. ರವಿಕುಮಾರ್, ಖಜಾಂಚಿ ಕಾವ್ಯ, ಕೆಂಪಣ್ಣ, ದಯಾನಂದ ಸಾಗರ್, ರಮೇಶ್, ಎಚ್ ಟಿ. ಶ್ರೀನಿವಾಸ್, ನಾಗರಾಜ್, ಮಾಯಾವರ್ಮ, ಸ್ವಾಮಿ, ವಿಲಾಸ್ ಹಾಗೂ ಎಲ್ಲಾ ಹೋಬಳಿಗಳ ಅಟಲ್ ಜೀ ಆಪರೇಟರ್ ಗಳು ಹಾಜರಿದ್ದರು.----
ಚಿತ್ರ 1,2: ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೂಲಭೂತ ಸೌಲಭ್ಯ, ಸೇವಾ ಸೌಲಭ್ಯ, ಮೊಬೈಲ್ ಆಪ್ ಗಳಲ್ಲಿ ನಿರಂತರವಾಗಿ ಕೆಲಸ ಮಾಡಲು ಒತ್ತಡ ಹೇರುತ್ತಿರುವುದನ್ನು ನಿಲ್ಲಿಸಬೇಕು ಎಂದು ತಾಲೂಕು ಕಚೇರಿ ಮುಂಭಾಗ ಗುರುವಾರ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ತಾಲೂಕು ಘಟಕದ ವತಿಯಿಂದ ತಹಸೀಲ್ದಾರ್ ರಾಜೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿಗಳಿಗೆ ಕೆಲಸದಲ್ಲಿ ತಾಂತ್ರಿಕ ಆಧಾರಿತ ಆಪ್ ಗಳ ಅಳವಡಿಕೆಯಿಂದಾಗಿ ಮಾನಸಿಕ ಹಿಂಸೆಯಾಗುತ್ತಿದೆ. ನಿಗದಿಪಡಿಸಿದ ಅವಧಿಯಲ್ಲೇ ಸೂಚಿಸಿರುವ ಕೆಲಸಗಳನ್ನು ನಿರ್ವಹಣೆ ಮಾಡಬೇಕಾಗಿರುವುದರಿಂದ ಮಹಿಳಾ ನೌಕರರಾದ ನಮಗೆ ತೊಂದರೆಯಾಗುತ್ತಿದ್ದು ಕುಟುಂಬಕ್ಕೆ, ಮಕ್ಕಳಿಗೆ ಸಮಯ ನೀಡಲು ಹರಸಾಹಸ ಪಡುವಂತಾಗಿದೆ.
ರೇಖಾವತಿ ವಿಎಓ ಜಿ ಬ್ಯಾಡರಹಳ್ಳಿ