ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡವ ಕುಟುಂಬಗಳ ನಡುವಿನ 24ನೇ ಹಾಕಿ ಹಬ್ಬ ಪ್ರತಿಷ್ಠಿತ ‘ಕುಂಡ್ಯೋಳಂಡ ಹಾಕಿ ಕಾರ್ನಿವಲ್ 2024’ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಗಿನ್ನಿಸ್ ವಿಶ್ವ ದಾಖಲೆ ಬರೆಯುವ ಮೂಲಕ ಸಣ್ಣ ಕುಟುಂಬವೊಂದು ದೊಡ್ಡ ಸಾಧನೆ ಮಾಡಿದೆ ಎಂದು ಕುಂಡ್ಯೋಳಂಡ ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಂಡ್ಯೋಳಂಡ ಹಾಕಿ ಹಬ್ಬದ ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಹಾಗೂ ಸಂಚಾಲಕ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ ಮಾತನಾಡಿ, ಕೇವಲ 103 ಸದಸ್ಯ ಬಲದ ಕುಟುಂಬವೊಂದು ಇಷ್ಟು ದೊಡ್ಡ ಸಾಧನೆ ಮಾಡಿರುವುದು ಹೆಮ್ಮೆಯ ವಿಚಾರವೆಂದರು.
ಒಂದು ವರ್ಷದ ಸಿದ್ಧತೆ:ಕಳೆದ ಒಂದು ವರ್ಷದಿಂದ ಹಾಕಿ ಹಬ್ಬದ ಯಶಸ್ಸಿಗಾಗಿ ಎಲ್ಲರ ಸಹಕಾರ ಪಡೆದು ಶ್ರಮಿಸಲಾಗಿದೆ. 30 ದಿನಗಳ ಕಾಲ ನಡೆದ ಕುಂಡ್ಯೋಳಂಡ ಹಾಕಿ ಕಾರ್ನಿವಲ್‌ನಲ್ಲಿ 346 ಕುಟುಂಬಗಳ 4,834 ಆಟಗಾರರು ಪಾಲ್ಗೊಂಡಿದ್ದರು. 360 ಕೊಡವ ಕುಟುಂಬ ತಂಡಗಳು ಹೆಸರು ನೋಂದಾಯಿಸಿಕೊಂಡಿದ್ದರು. ಇದು ಗಿನ್ನಿಸ್ ವಿಶ್ವ ದಾಖಲೆ ಬರೆಯಲು ಸಹಕಾರಿಯಾಯಿತು. ಗಿನ್ನಿಸ್ ಪ್ರವೇಶ ಅಷ್ಟು ಸುಲಭವಾಗಿರಲಿಲ್ಲ, ಎಲ್ಲಾ ತಾಂತ್ರಿಕ ಅಡಚಣೆಗಳನ್ನು ಎದುರಿಸಿ ಕೊನೆಗೂ ಗುರಿ ಸಾಧಿಸಿದೆವು ಎಂದರು.
ಈ ಬಾರಿಯ ಕುಂಡ್ಯೋಳಂಡ ಹಾಕಿ ಹಬ್ಬ ವಿಭಿನ್ನವಾಗಿರಬೇಕೆಂದು ಚಿಂತನೆ ನಡೆಸಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹಾಕಿ ಕಾರ್ನಿವಲ್ ನ ಹೊಸ ರೂಪ ನೀಡಿದೆವು. ಯುವ ಪೀಳಿಗೆಗೆ ಶ್ರೀಮಂತ ಕೊಡವ ಜಾನಪದ ಸಂಸ್ಕೃತಿಯನ್ನು ಪರಿಚಯಿಸಿ ತರಬೇತುಗೊಳಿಸುವ ಪ್ರಯತ್ನವಾಗಿ ಸಾಂಪ್ರದಾಯಿಕ ಬಾಳೋಪಾಟ್ ಪಡಿಪು ಕಾರ್ಯಾಗಾರವನ್ನು ಪ್ರತಿದಿನ ನಡೆಸಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಯುವ ಸಮೂಹ ಪಾಲ್ಗೊಂಡು ನುರಿತ ಜಾನಪದ ಕಲಾವಿದರಿಂದ ತರಬೇತಿ ಪಡೆದರು ಎಂದು ಅವರು ಮಾಹಿತಿ ನೀಡಿದರು.30 ದಿನಗಳ ಕಾಲವೂ ನಾಪೋಕ್ಲುವಿನ ಜ. ತಿಮ್ಮಯ್ಯ ಕ್ರೀಡಾ ಮೈದಾನದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಹಾಕಿ ಜನಕ ಪಾಂಡಂಡ ಕುಟ್ಟಪ್ಪ ಸ್ಮರಣಾರ್ಥ ಪುತ್ಥಳಿ ಸ್ಥಾಪನೆ, ಕಳೆದ 23 ವರ್ಷಗಳ ಕೊಡವ ಕೌಟುಂಬಿಕ ಹಾಕಿ ಉತ್ಸವದ ವೈಭವ ಮೆಲುಕು ಹಾಕುವ ಮೊದಗೂಡ್(ಮ್ಯೂಸಿಯಂ) ಐನ್‌ಮನೆಯನ್ನು ಹೋಲುವ ಮುಖ್ಯ ವೇದಿಕೆ, ಬೃಹದಾಕಾರದ ಸುಸಜ್ಜಿತ ಗ್ಯಾಲರಿ, ಸುವ್ಯವಸ್ಥಿತ 3 ಮೈದಾನಗಳು, ಸುತ್ತಲೂ ವಿವಿಧ ಕಂಪನಿಗಳ ಮಾರಾಟ ಮಳಿಗೆಗಳು, ಸ್ಥಳೀಯ ಉದ್ಯಮಿಗಳನ್ನು ಉತ್ತೇಜಿಸುವ ವ್ಯಾಪಾರ ಮಳಿಗೆಗಳು ಎಲ್ಲವೂ ಆಕರ್ಷಣೀಯವಾಗಿತ್ತು ಎಂದು ಅಭಿಪ್ರಾಯಪಟ್ಟರು.
ಪ್ರತಿದಿನ ಪಂದ್ಯಾವಳಿಯಿಂದ ಹೊರಬೀಳುತ್ತಿದ್ದ ಕುಟುಂಬಗಳಿಗೆ ಕೃತಜ್ಞತಾಪೂರ್ವವಾಗಿ ಕೊಡವ ಸಾಂಪ್ರದಾಯಿಕ ಗೆಜ್ಜೆತಂಡ್ ನೀಡಿ ಗೌರವಪೂರ್ವಕವಾಗಿ ಅಭಿನಂಧಿಸಲಾಗುತ್ತಿತ್ತು. ಇದೆಲ್ಲವೂ ‘ಕುಂಡ್ಯೋಳಂಡ ಹಾಕಿ ಕಾರ್ನಿವಲ್ 2024’ನ್ನು ವಿಶಿಷ್ಟ, ವಿಭಿನ್ನ ಮತ್ತು ವಿಶ್ವ ವಿಖ್ಯಾತಗೊಳಿಸಲು ಸಹಕಾರಿಯಾಯಿತು ಎಂದು ದಿನೇಶ್ ಕಾರ್ಯಪ್ಪ ವಿವರಿಸಿದರು.ಖಜಾಂಚಿ ಕುಂಡ್ಯೋಳಂಡ ವಿಶು ಪೂವಯ್ಯ, ಪ್ರಮುಖರಾದ ಕುಂಡ್ಯೋಳಂಡ ಗಣೇಶ್ ಮುತ್ತಪ್ಪ, ಬಿಪಿನ್ ಬೆಳ್ಯಪ್ಪ ಹಾಗೂ ಕುಂಡ್ಯೋಳಂಡ ಕಾಶಿ ತಮ್ಮಯ್ಯ ಹಾಜರಿದ್ದರು.