ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಸಣ್ಣ ಆಲಸ್ಯವೂ ದೊಡ್ಡ ರೋಗಕ್ಕೆ ಕಾರಣವಾಗಬಹುದು. ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಪ್ರತಿಯೊಬ್ಬರಿಗೂ ಕಡ್ಡಾಯ ಎಂದು ಶ್ರೀ ತುಳಸಿಗಿರೀಶ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ, ಖ್ಯಾತ ಮಧುಮೇಹ ತಜ್ಞ ಡಾ.ಬಾಬುರಾಜೇಂದ್ರ ನಾಯಿಕ ಹೇಳಿದರು.ತಾಲೂಕಿನ ಮನಗೂಳಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭೀಮವಾದ ದಲಿತ ಸಂಘರ್ಷ ಸಮಿತಿಯ ಸಹಯೋಗದಲ್ಲಿ ಶ್ರೀ ತುಳಸಿಗಿರೀಶ ಫೌಂಡೇಶನ್ ವತಿಯಿಂದ ಪಟ್ಟಣ ಪಂಚಾಯತಿ ಪೌರಕಾರ್ಮಿಕರಿಗೆ ಹಾಗೂ ಸಾರ್ವಜನಿಕರಿಗೆ ನಡೆದ ಆರೋಗ್ಯ ಉಚಿತ ತಪಾಸಣೆ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿತ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೇ ಸಂಭವನೀಯ ಜೀವಘಾತಕ ಸಮಸ್ಯೆಗಳಿಂದ ಉಳಿಯಬಹುದು ಎಂದು ಸಲಹೆ ನೀಡಿ ಪೌರಕಾರ್ಮಿಕರು ಹಾಗೂ ಸಾರ್ವಜನಿಕರಿಗೆ ಮಧುಮೇಹ ಮತ್ತು ಹೃದಯ ಆರೋಗ್ಯದ ಮಹತ್ವವನ್ನು ವಿವರಿಸಿದರು.ಶಿಬಿರದ ಯಶಸ್ವಿ ಆಯೋಜನೆಯಲ್ಲಿ ಭೀಮವಾದ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಮಹೇಶ ಪಿರಗಾ, ಶ್ರೀ ತುಳಸಿಗಿರೀಶ್ ಫೌಂಡೇಶನ್ ಸದಸ್ಯರು ರಾಕೇಶ ರಜಪೂತ, ಅನೀಲ ಚವ್ಹಾಣ, ಅರವಿಂದ ನಾಯಕ, ಕಿಶನ್ ರಾಠೋಡ, ಅನೀಲ ಕರಾಬಿ ಅವರೊಂದಿಗೆ ಪಟ್ಟಣ ಪಂಚಾಯತಿ ಪೌರಕಾರ್ಮಿಕರು ಹಾಗೂ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡರು. ಕಾರ್ಯಕ್ರಮದ ನಿರೂಪಣೆಯನ್ನು ಭೀಮ ನಗರ ಶಾಲೆಯ ಮುಖ್ಯೋಪಾಧ್ಯಾಯ ಕುಲಕರ್ಣಿ ನಡೆಸಿಕೊಟ್ಟರು.ಪೌರಕಾರ್ಮಿಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ವೈದ್ಯಕೀಯ ತಂಡದಿಂದ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿತ ತಪಾಸಣೆಗಳು ಉಚಿತವಾಗಿ ನಡೆದವು. ಭಾಗವಹಿಸಿದ ಜನತೆ ಇಂತಹ ಶಿಬಿರಗಳು ಮುಂದೆಯೂ ನಡೆಯಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಜೆಡಿಎಸ್ ಧುರೀಣ ಸೊಮನಗೌಡ ಬಿ.ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ವಿಶ್ವನಾಥಗೌಡ ಬಿ.ಪಾಟೀಲ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ನಿಖಿಲೇಶ ಪಾಟೀಲ, ಭೀಮಗೊಂಡ ಹತ್ತರಿಕಿ, ಭೀಮು ಸವದಿ, ಪ್ರದೀಪ ಜಾನಕರ, ಎಂ.ಕೆ.ಎಳಗುಂಟಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.ತಮ್ಮ ಶ್ರೀ ತುಳಸಿಗಿರೀಶ್ ಫೌಂಡೆಶನ್ ಹಾಗೂ ಆಸ್ಪತ್ರೆಯ ವತಿಯಿಂದ ಪಟ್ಟಣ ಪಂಚಾಯತಿ ಪೌರಕಾರ್ಮಿಕರಿಗೆ ಮಧುಮೇಹಕ್ಕೆ ಸಂಬಂಧಿಸಿದ ಕಾಯಿಲೆಗಳ ಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು. ಮುಂದಿನ ದಿನಗಳಲ್ಲಿ ಇನ್ನಷ್ಟು ಆರೋಗ್ಯ ಶಿಬಿರಗಳು ನಡೆಯಲಿವೆ.
-ಡಾ.ಬಾಬುರಾಜೇಂದ್ರ ನಾಯಿಕ, ಶ್ರೀ ತುಳಸಿಗಿರೀಶ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ, ಮಧುಮೇಹ ತಜ್ಞ.