ಸಾರಾಂಶ
ನಿರಂತರ ಮಳೆಯಿಂದ ಮಳೆಯಾಶ್ರಿತ ಭೂಮಿಯಲ್ಲಿ ಬೆಳೆದ ಬೆಳೆ ನಳನಳಿಸುತ್ತಿದೆ.
ಕುರುಗೋಡು: ಎರಡು ದಿನಗಳಿಂದ ತಾಲೂಕಿನಲ್ಲಿ ಬಿಟ್ಟುಬಿಟ್ಟು ಮಳೆ ಸುರಿಯುತ್ತಿದ್ದು, ಹದಮಳೆಗಾಗಿ ಕಾಯುತ್ತಿದ್ದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಮಂಗಳವಾರ ಬೆಳಿಗ್ಗೆಯಿಂದ ಮೋಡಮುಸುಕಿದ ವಾತಾವರಣವಿತ್ತು. ರಾತ್ರಿ ಹದಮಳೆ ಸುರಿಯಿತು. ಬುಧವಾರ ಬೆಳಿಗ್ಗೆಯಿಂದ ತುಂತುರು ಮಳೆಸುರಿಯುತ್ತಿತ್ತು. ಮಧಾಹ್ನದಿಂದ ಪ್ರಾರಂಭಗೊಂಡ ಬಿರುಸಿನಿಂದ ಕೂಡಿದ ಮಳೆ ಸಂಜೆಯವರೆಗೂ ಬಿಟ್ಟುಬಿಟ್ಟು ಸುರಿಯಿತು.ನಿರಂತರ ಮಳೆಯಿಂದ ಮಳೆಯಾಶ್ರಿತ ಭೂಮಿಯಲ್ಲಿ ಬೆಳೆದ ಬೆಳೆ ನಳನಳಿಸುತ್ತಿದೆ. ನೀರಾವರಿ ಭೂಮಿಹೊಂದಿದ ರೈತರು ಕೃಷಿ ಪೂರ್ವ ಚಟುವಟಿಕೆ ಪೂರ್ಣಗೊಳಿಸಿದ್ದು, ಕೊಟ್ಟಿಗೆ ಗೊಬ್ಬರ ಬೆರೆಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಭತ್ತ ಬೆಳೆಯುವ ರೈತರು ಸಸಿಮಡಿ ಬೆಳೆಸುವ ಕಾಯಕದಲ್ಲಿ ನಿರತರಾಗಿರುವುದು ಮಾಗಾಣಿ ಪ್ರದೇಶದಲ್ಲಿ ಕಂಡುಬರುತ್ತಿದೆ.ರಸ್ತೆಗಳಲ್ಲಿ ನಿರ್ಮಾಣವಾಗಿರುವ ಗುಂಡಿಗಳಲ್ಲಿ ಮಳೆಯನೀರು ಸಂಗ್ರಹವಾಗಿದ್ದು ದ್ವಿಚಕ್ರವಾಹನ ಸವಾರರು ಸಂಚರಿಸಲು ಪರಿತಪಿಸಬೇಕಾಯಿತು. ಶಾಲಾ ಕಾಲೇಜು ಬಿಡುವ ಸಂದರ್ಭದಲ್ಲಿ ಸುರಿದ ಮಳೆಯಲ್ಲಿಯೇ ವಿದ್ಯಾರ್ಥಿಗಳು ತೋಯ್ದು ಮನೆ ಸೇರಬೇಕಾಯಿತು.ಪಟ್ಟಣದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ಮತ್ತು ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಮಳೆ ನೀರು ಸಂಗ್ರಹವಾದ ಪರಿಣಾಮ ರೋಗಿಗಳು ಮತ್ತು ಪ್ರಯಾಣಿಕರು ಪ್ರಯಾಸಪಟ್ಟು ಒಳಪ್ರವೇಶಿಸಬೇಕಾಯಿತು.೨.೪ ಸೆಂ.ಮೀ ಮಳೆಸುರಿದ ಬಗ್ಗೆ ಪಟ್ಟಣದ ಮಳೆಮಾಪನ ಕೇಂದ್ರದಲ್ಲಿ ದಾಖಲಾಗಿದೆ.