ವೃತ್ತಿ ಅಥವಾ ಕಸುಬಿನ ಆಧಾರದ ಮೇಲೆ ಜಾತಿ, ಸಮುದಾಯ ಎಂಬುದು ರೂಪುಗೊಂಡಿತ್ತು. ಕಾಲ ಬದಲಾದಂತೆ ಶಿಕ್ಷಣದಿಂದ ಸಮಾಜವೂ ಬದಲಾಗುತ್ತಿದೆ ಎಂದು ಶಾಸಕ ಎ. ಮಂಜು ನುಡಿದರು.
ಕನ್ನಡಪ್ರಭವಾರ್ತೆ, ಅರಕಲಗೂಡು
ವೃತ್ತಿ ಅಥವಾ ಕಸುಬಿನ ಆಧಾರದ ಮೇಲೆ ಜಾತಿ, ಸಮುದಾಯ ಎಂಬುದು ರೂಪುಗೊಂಡಿತ್ತು. ಕಾಲ ಬದಲಾದಂತೆ ಶಿಕ್ಷಣದಿಂದ ಸಮಾಜವೂ ಬದಲಾಗುತ್ತಿದೆ ಎಂದು ಶಾಸಕ ಎ. ಮಂಜು ನುಡಿದರು.ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಡಿವಾಳ ಮಾಚಿ ದೇವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷ ವಹಿಸಿ ಮಾತನಾಡಿದ ಶಾಸಕರು, ಸಮಾಜದಲ್ಲಿ ಸಮಾನತೆ ತರಲು ಶಿಕ್ಷಣ ಒಂದೇ ಮಾರ್ಗವಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡಿದರೆ ಸಮಾಜದಲ್ಲಿ ಗೌರವದಿಂದ ಬದುಕಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಇಡೀ ಜಗತ್ತಿನಲ್ಲಿ ಇರುವುದು ಎರಡೇ ಜಾತಿ ಮಾತ್ರ. ಅವು ಹೆಣ್ಣು ಮತ್ತು ಗಂಡು. ಉಳಿದ ಎಲ್ಲಾ ಜಾತಿಗಳನ್ನು ನಾವೇ ಸೃಷ್ಟಿಸಿಕೊಂಡಿದ್ದೇವೆ. ಸಮಾಜದ ಏಳಿಗೆಗೆ ಜಾತಿ ವ್ಯವಸ್ಥೆಯಿಂದ ಹೊರಬರಬೇಕು. ನಾನು ಸುಮಾರು 44 ವರ್ಷ ಹಿಂದೆಯೇ ಜಾತಿ ಭೇದ ಮರೆತು ವಿವಾಹವಾಗಿದ್ದೇನೆ. ಆ ಕಾಲದಲ್ಲಿ ಅದನ್ನು ದೊಡ್ಡ ವಿಷಯವಾಗಿ ನೋಡುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ಎಲ್ಲರೂ ಪರಸ್ಪರ ಗೌರವದಿಂದ ನಡೆದುಕೊಳ್ಳುವುದು ಮುಖ್ಯ ಎಂದು ತಿಳಿಸಿದರು.ಪ್ರಧಾನ ಭಾಷಣ ಮಾಡಿದ ಪ್ರಾಂಶುಪಾಲ ಗಿರೀಶ್ , ಸಮಾಜ ನಮಗೆ ಅನಿವಾರ್ಯ, ಆದರೆ ನಾವು ಸಮಾಜಕ್ಕೆ ಅನಿವಾರ್ಯವಲ್ಲ. ಆದ್ದರಿಂದ ನಮ್ಮ ಕುಲದೇವರು ನೀಡಿದ ಧಾರ್ಮಿಕ ನೆಲಗಟ್ಟಿನಲ್ಲಿ ಪ್ರಾಮಾಣಿಕವಾಗಿ ಬದುಕು ಕಟ್ಟಿಗೊಂಡು ಜೀವನ ಸಾಗಿಸಬೇಕು. ಇತರೆ ಸಮುದಾಯ ಶಿಕ್ಷಣ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿರುವಾಗ ನಮ್ಮ ಸಮಾಜದವರು ಇನ್ನೂ ಹಿಂದುಳಿದಿದ್ದಾರೆ. ಸರ್ಕಾರದಿಂದ ದೊರೆಯುವ ಸೌಲಭ್ಯ ಎಲ್ಲರಿಗೂ ತಲುಪುವಂತೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ತಹಸೀಲ್ದಾರ್ ಕೆ.ಸಿ. ಸೌಮ್ಯ, ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಕೇಶವ, ಉಪಾಧ್ಯಕ್ಷ ಮಂಜುನಾಥ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸೋಮಣ್ಣ ಬನ್ನೂರು, ಬಿ.ಸಿ.ಶಶಿಧರ್, ಉಪನ್ಯಾಸಕರು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನರಸೇಗೌಡ, ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಪುಟ್ಟರಾಜ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಕುಮಾರ್ ಸೇರಿ ಅನೇಕರು ಉಪಸ್ಥಿತರಿದ್ದರು.