ಕನ್ನಡಪ್ರಭ ವಾರ್ತೆ ರಾಮನಗರ

ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್ ಶಿಪ್ ) ಯೋಜನೆ ವಿರೋಧಿಸಿ ಜೆಡಿಎಸ್‌ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ನೇತೃತ್ವದಲ್ಲಿ ಭಾನುವಾರ ನಡೆದ ಪಾದಯಾತ್ರೆ ವೇಳೆ ಯೋಜನೆ ಪರ ಮತ್ತು ವಿರೋಧ ಇರುವವರ ನಡುವೆ ಮಾತಿನ ಚಕಮಕಿ ನಡೆದು ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿತು.

ಅಂಚಿಪುರ ಗ್ರಾಮದಿಂದ ಪ್ರಾರಂಭಗೊಂಡ ಪಾದಯಾತ್ರೆ ಅಂಚಿಪುರ ಕಾಲೋನಿಯತ್ತ ಹೊರಟಿತ್ತು. ಈ ವೇಳೆಗಾಗಲೇ ಕಾಲೋನಿಯ ವೃತ್ತದಲ್ಲಿ ಅಳವಡಿಸಿದ್ದ ಟೌನ್ ಶಿಪ್ ಪರವಾದ ಫ್ಲೆಕ್ಸ್ ಗಳನ್ನು ಹೋರಾಟಗಾರರು ಹರಿದಿರುವ ಸುದ್ದಿ ಯೋಜನೆ ಪರವಾಗಿರುವವರಿಗೆ ತಲುಪಿತ್ತು. ಇದು ಯೋಜನೆ ಪರವಾಗಿದ್ದ ದಲಿತ ಮುಖಂಡರನ್ನು ಕೆರಳಿಸಿತು.

ಪಾದಯಾತ್ರೆಯಲ್ಲಿ ನಿಖಿಲ್ ಕುಮಾರಸ್ವಾಮಿರವರು ಕಾಲೋನಿಯ ಮಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ, ಜನರನ್ನು ಮಾತನಾಡಿಸಲು ಮುಂದಾದರು. ಆಗ ಯೋಜನೆ ಪರವಾಗಿರುವ ತಾಪಂ ಮಾಜಿ ಅಧ್ಯಕ್ಷ ಜಯಚಂದ್ರ, ಬಿಡದಿ - ಕೂಟಗಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಪರಿಶಿಷ್ಟ ವಿಭಾಗ ಅಧ್ಯಕ್ಷ ಬಿ.ಶೇಖರ್ ನೇತೃತ್ವದಲ್ಲಿ ದಲಿತ ಮುಖಂಡರು ಕೈಯಲ್ಲಿ ಯೋಜನೆ ಪರವಾದ ಫ್ಲೆಕ್ಸ್ ಗಳನ್ನು ಹಿಡಿದು ಪಾದಯಾತ್ರಿಗಳಿಗೆ ಎದುರಾದರು.

ಆಗ ನಿಖಿಲ್ ಕಾರು ಹತ್ತಿದರೆ, ಮಾಜಿ ಶಾಸಕ ಎ.ಮಂಜುನಾಥ್‌ ಕಾಲೋನಿ ಕಡೆಗೆ ತೆರಳಿದರು. ಅಲ್ಲಿದ್ದ ಯೋಜನೆ ಪರವಾದ ಗ್ರಾಮಸ್ಥರು, ನಮ್ಮ ಭೂಮಿಯನ್ನು ಯಾರಿಗೆ ಬೇಕಾದರೂ ಕೊಡುತ್ತೇವೆ. ಅದನ್ನು ಕೇಳಲು ನೀವ್ಯಾರು. ನಾವು ಯೋಜನೆ ಪರವಾಗಿದ್ದೇವೆ. ಟೌನ್ ಶಿಪ್ ಗೆ ಭೂಮಿ ಕೊಡುತ್ತೇವೆ. ಅದನ್ನು ಪ್ರಶ್ನಿಸಲು ನೀವ್ಯಾರು ಎಂದು ಪ್ರಶ್ನಿಸಿದರು.


ಇದಕ್ಕೆ ಎ.ಮಂಜುನಾಥ್ ಗ್ರಾಮಸ್ಥರಿಗೆ, ಗ್ರಾಮದಲ್ಲಿ ಯೋಜನೆ ಪರವಾಗಿರುವ ಪ್ಲೆಕ್ಸ್ ಅಳವಡಿಸಲು ಅನುಮತಿ ಪಡೆದಿದ್ದೀರಾ ಎಂದು ಪ್ರಶ್ನಿಸಿದರು. ಅದಕ್ಕೆ ಗ್ರಾಮಸ್ಥರು, ಯೋಜನೆ ವಿರೋಧಿಸಿ ಪ್ಲೆಕ್ಸ್‌ ಅಳವಡಿಸಲು ನೀವು ಯಾರ ಅನುಮತಿ ಪಡೆದಿದ್ದೀರಿ. ನಾವು ಪರವಾಗಿದ್ದೇವೆ. ನಮ್ಮ ಮನೆಗಳ ಬೀದಿಯಲ್ಲಿ ಏಕೆ ಪಾದಯಾತ್ರೆ ಮಾಡುತ್ತೀರಿ ಎಂದು ಮರುಪ್ರಶ್ನೆ ಹಾಕಿದರು.

ಆಗ ಹೋರಾಟಗಾರರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ಕೈ ಮೀರುವುದನ್ನು ಅರಿತ ಪೊಲೀಸರು ಮಂಜುನಾಥ್ ಹಾಗೂ ದಲಿತ ಮುಖಂಡರನ್ನು ಸಮಾಧಾನಪಡಿಸಿದರು. ಮುಖ್ಯಬೀದಿಯಲ್ಲಿ ಪಾದಯಾತ್ರೆ ನಡೆಸುವಂತೆ ಮನವೊಲಿಸಿದರು. ನಂತರ ನಿಖಿಲ್ ಕುಮಾರಸ್ವಾಮಿ ಮತ್ತು ಮಂಜುನಾಥ್ ಸೇರಿದಂತೆ ಕಾಲ್ನಡಿಗೆಯಲ್ಲಿದ್ದವರು ಗ್ರಾಮದ ಪ್ರಮುಖ ವೃತ್ತ ಹಾದು ಬನ್ನಿಗಿರಿ ಗ್ರಾಮದತ್ತ ಹೊರಟರು.