ಕಾಫಿ ನಾಡಿಗೆ ಮರೀಚಿಕೆಯಾದ ವಿಶೇಷ ಕೊಡುಗೆ

| Published : Mar 07 2025, 11:47 PM IST

ಸಾರಾಂಶ

ಚಿಕ್ಕಮಗಳೂರು, ಕಾಂಗ್ರೆಸ್‌ನ ಭದ್ರ ಕೋಟೆ, ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರಿಗೆ ರಾಜಕೀಯ ಪುನರ್‌ ಜನ್ಮ ನೀಡಿರುವ ಕಾಫಿಯ ನಾಡಿಗೆ ರಾಜ್ಯದ ಕಾಂಗ್ರೆಸ್‌ ಸರ್ಕಾರ ಬಜೆಟ್‌ನಲ್ಲಿ ಶೂನ್ಯ ಕೊಡುಗೆ ನೀಡಿದೆ.

- ಮತ್ತೆ ಪ್ರಾದೇಶಿಕ ಅಸಮತೋಲನ । ಬಜೆಟ್‌ನಲ್ಲಿ ಮುಂದುವರಿದ ಮಲತಾಯಿ ಧೋರಣೆ । ಒಂದೆರಡು ಕಡೆ ಮಾತ್ರ ಪ್ರಸ್ತಾಪಆರ್‌. ತಾರಾನಾಥ್‌ ಅಟೋಕರ್‌

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕಾಂಗ್ರೆಸ್‌ನ ಭದ್ರ ಕೋಟೆ, ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರಿಗೆ ರಾಜಕೀಯ ಪುನರ್‌ ಜನ್ಮ ನೀಡಿರುವ ಕಾಫಿಯ ನಾಡಿಗೆ ರಾಜ್ಯದ ಕಾಂಗ್ರೆಸ್‌ ಸರ್ಕಾರ ಬಜೆಟ್‌ನಲ್ಲಿ ಶೂನ್ಯ ಕೊಡುಗೆ ನೀಡಿದೆ.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಕಾಫಿಯ ನಾಡು ಸಂಪ್ರದಾಯದಂತೆ ಕೆಲವು ನಿರೀಕ್ಷೆಯಲ್ಲಿತ್ತು. ಹಲವು ವರ್ಷಗಳ ಬೇಡಿಕೆಯಾದ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ ಈ ಬಾರಿಯೂ ಬಜೆಟ್‌ನಲ್ಲಿ ಪ್ರಕಟ ಮಾಡಲಿಲ್ಲ. ಕಳೆದ ವರ್ಷ ಸುಮಾರು 80 ಲಕ್ಷ ಪ್ರವಾಸಿಗರು ಬಂದು ಹೋಗಿರುವ ಚಿಕ್ಕಮಗಳೂರು ಜಿಲ್ಲೆಯ ಪ್ರವಾಸೋದ್ಯ ಮಕ್ಕೆ ನಯಾ ಪೈಸೆ ಕೊಟ್ಟಿಲ್ಲ.

ಕಿರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ರೈತರಿಂದ ಭೂಮಿ ಖರೀದಿಗೆ ₹24 ಕೋಟಿ ಬೇಕಾಗಿದೆ. ಸದ್ಯ ಜಿಲ್ಲಾಡಳಿತದಲ್ಲಿ ₹7 ಕೋಟಿ ಇದೆ. ಇನ್ನುಳಿದ ಹಣ ಮಂಜೂರು ಮಾಡುವ ಬಗ್ಗೆ ಪ್ರಸ್ತಾಪ ಮಾಡಿಲ್ಲ.

ಜಿಲ್ಲೆಗೆ ಪ್ರತ್ಯೇಕವಾಗಿ ವಿಶೇಷವಾಗಿ ರಾಜ್ಯ ಸರ್ಕಾರ ಯಾವುದೇ ಕೊಡುಗೆ ನೀಡಿಲ್ಲ, ಆದರೆ, ಕೆಲವು ಐತಿಹಾಸಿಕ ನಿರ್ಧಾರವನ್ನು ಘೋಷಣೆ ಮಾಡಿದೆ. ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಎರಡು ದಶಕಗಳ ಕಾಲ ಬೇರು ಬಿಟ್ಟಿರುವ ನಕ್ಸಲ್ ಕಾರ್ಯಾಚರಣೆಗೆ ಇತಿಶ್ರೀ ಹಾಡಲು ಪ್ರತ್ಯೇಕವಾಗಿ ನಿಯೋಜನೆಗೊಂಡಿದ್ದ ನಕ್ಸಲ್‌ ನಿಗ್ರಹ ಪಡೆಯನ್ನು ರಾಜ್ಯ ಸರ್ಕಾರ ವಿಸರ್ಜಿಸಿದೆ.

ರಾಜ್ಯದಲ್ಲಿ ನಕ್ಸಲ್‌ ಸಂಘಟನೆ ಪ್ರಾಬಲ್ಯಕ್ಕೆ ಕಡಿವಾಣ ಹಾಕಲು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮೂಲಭೂತ ಸವಲತ್ತು ನೀಡಲು ಕಳೆದ ಒಂದು ದಶಕಗಳ ಹಿಂದೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್‌ ನೀಡಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಪ್ರಸ್ತಾವನೆ ಕೈಬಿಡಲಾಗಿತ್ತು. ಆದರೆ, ಇದೀಗ ಮತ್ತೆ ರಾಜ್ಯ ಸರ್ಕಾರ ನಕ್ಸಲ್‌ ಪೀಡಿತ ಪ್ರದೇಶಗಳ ಮೂಲ ಸೌಕರ್ಯಕ್ಕೆ ₹10 ಕೋಟಿ ವಿಶೇಷ ಪ್ಯಾಕೇಜ್‌ ನೀಡಿದೆ.

2005ರಲ್ಲಿ ಸ್ಥಾಪನೆಗೊಂಡು ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಜಿಲ್ಲೆಗಳಲ್ಲಿ 17 ಕ್ಯಾಂಪ್‌ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ನಕ್ಸಲ್‌ ನಿಗ್ರಹ ಪಡೆ ಎರಡು ದಶಕಗಳ ನಂತರ ವಿಸರ್ಜಿಸಲಾಗಿದೆ.

ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಭೂ ಕುಸಿತ ಉಂಟಾಗಿ ಹಲವೆಡೆ ಹಾನಿ ಸಂಭವಿಸುತ್ತಿತ್ತು. ಭೂ ಕುಸಿತ ತಡೆಯಲು ರಾಜ್ಯ ಸರ್ಕಾರ ಚಿಕ್ಕಮಗಳೂರು ಸೇರಿದಂತೆ ಮಲೆನಾಡು ಹಾಗೂ ಕರಾವಳಿಯ 7 ಜಿಲ್ಲೆಗಳಿಗೆ ₹200 ಕೋಟಿ ಬಜೆಟ್‌ನಲ್ಲಿ ಘೋಷಣೆ ಮಾಡಿದೆ.-- ಬಾಕ್ಸ್‌ --

ಭದ್ರಾದಲ್ಲಿ ಆನೆ ಧಾಮ

ಮಾನವ - ಆನೆ ಸಂಘರ್ಷ ತಡೆಯುವ ಉದ್ದೇಶದಿಂದ ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿನ 20 ಚದರ ಕಿ.ಮೀ. ಪ್ರದೇಶ ದಲ್ಲಿ ಆನೆ ಧಾಮ ನಿರ್ಮಾಣ ಮಾಡಲಾಗುವುದು. ಇದಕ್ಕೆ ₹20 ಕೋಟಿ ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಇದಕ್ಕೆ ಪರಿಸರ ವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ- ಚಿಕ್ಕಮಗಳೂರು ಜಿಲ್ಲೆಯ 500 ಚ. ಕಿ.ಮೀಟರ್‌ ವ್ಯಾಪ್ತಿಯಲ್ಲಿರುವ ಭದ್ರಾ ಅಭಯಾರಣ್ಯ ಪ್ರದೇಶ ಇದೆ. ಇಲ್ಲಿನ 20 ಚ. ಕಿ.ಮೀ. ವ್ಯಾಪ್ತಿಯಲ್ಲಿ ರೈಲ್ವೆ ಬ್ಯಾರಿಕೇಡ್‌ ನಿರ್ಮಾಣ ಮಾಡಿ ಸಂಘರ್ಷದ ಆನೆಗಳನ್ನು ಬಿಡಲಾಗುವುದು ಎಂಬ ಸರ್ಕಾರದ ಉದ್ದೇಶ ಅವೈಜ್ಞಾನಿಕ ಎಂದು ಹೇಳುತ್ತಿದ್ದಾರೆ.

ಒಂದು ಆನೆಗೆ ದಿನಕ್ಕೆ ಕನಿಷ್ಠ 250 ರಿಂದ 300 ಕೆ.ಜಿ. ಆಹಾರ ಬೇಕು. ಒಂದು ಕಿ.ಮೀ. ಬ್ಯಾರಿಕೇಡ್‌ ನಿರ್ಮಾಣಕ್ಕೆ ಕನಿಷ್ಟ ₹2 ಕೋಟಿ ರುಪಾಯಿ ಬೇಕಾಗಬಹುದು. 5000 ಎಕರೆ ಪ್ರದೇಶದಲ್ಲಿ ಬ್ಯಾರಿಕೇಡ್‌ ನಿರ್ಮಾಣಕ್ಕೆ ₹100 ಕೋಟಿ ಹಣ ವ್ಯಯ ವಾಗಲಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಯ ಉದ್ದೇಶ ಈಡೇರುವುದಿಲ್ಲ ಎಂದು ಹೇಳಲಾಗುತ್ತಿದೆ. 7 ಕೆಸಿಕೆಎಂ 2

--

7 ಕೆಸಿಕೆಎಂ 1ಚಿಕ್ಕಮಗಳೂರು ಜಿಲ್ಲೆ.