ಸಾರಾಂಶ
ಧಾರವಾಡ: ನಟ ಕಮಲ್ ಹಾಸನ್ ಭಾಷಾ ಜ್ಞಾನ ಇಲ್ಲದೇ ಕನ್ನಡ ತಮಿಳುನಿಂದ ಹುಟ್ಟಿದೆ ಎಂಬ ಹೇಳಿಕೆ ಒಪ್ಪಲು ಸಾಧ್ಯವಿಲ್ಲ. ಆ ಹೇಳಿಕೆಗೆ ಮಾನ್ಯತೆಯೂ ಬೇಡ. ಕನ್ನಡ ದ್ರಾವಿಡ ಭಾಷೆಯಿಂದ ಬೆಳೆದು ಬಂದ ಭಾಷೆ ಎಂಬುದು ಸ್ಪಷ್ಟ. ತಮಿಳು ಸಹ ಹಾಗೇಯೇ ಬೆಳೆದು ಬಂದಿದೆ ಎಂದು ಮದ್ರಾಸ್ ವಿವಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ತಮಿಳ ಸೆಲ್ವಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ ದೇಶಪಾಂಡೆ ಸಭಾ ಭವನದಲ್ಲಿ ನಡೆದ ಕನ್ನಡ ಭಾಷೆಯ ಅಸ್ಮಿತೆ ವಿಚಾರ ಸಂಕಿರಣದಲ್ಲಿ ಕನ್ನಡ ಭಾಷೆಯ ಪ್ರಾಚೀನತೆ ಕುರಿತು ಮಾತನಾಡಿದರು.ಮನುಷ್ಯನ ಧ್ವನಿಯ ಮೂಲಕ ಭಾಷೆಗಳು ಹುಟ್ಟಿವೆ. ಮನುಷ್ಯರು ಪ್ರಕೃತಿಯ ಧ್ವನಿಗಳನ್ನು ಅನುಕರಿಸಿ ಭಾಷೆಯನ್ನು ಕಲಿತಿದ್ದಾರೆ. ಅದು ಕಾಲ ಕಾಲಕ್ಕೆ ವಲಸೆಯಿಂದ ಭಾಷೆಗಳು ಸಹ ಬೆಳೆದುಬಂದಿವೆ. ಜಗತ್ತಿನ ಏಳು ಸಾವಿರ ಭಾಷೆಗಳು ಹುಟ್ಟಲು ಸಾವಿರಾರು ವರ್ಷಗಳು ಕಳೆದಿವೆ. ಹರಪ್ಪಾ -ಮೊಹೆಂಜೋದಾರೋ ನಾಗರಿಕತೆಯಲ್ಲಿ ಶಿವನ ಪ್ರಾಮುಖ್ಯತೆಯ ಪ್ರಶ್ನೆಯು ಸಿಂಧೂ ನಾಗರಿಕತೆಗೆ ಹೋಲುತ್ತದೆಯೇ ಅಥವಾ ಇಲ್ಲವೇ ಎಂಬ ಚರ್ಚೆಯನ್ನು ತೆರೆಯುತ್ತಿದೆ. ಹರ ಎಂದರೆ ಶಿವ ದ್ರಾವಿಡ ದೇವರು, ಇದನ್ನು ನಂತರ ವೈದಿಕ ತ್ರಿಕೋನ ದೇವರ ಪರಿಕಲ್ಪನೆಗೆ ಸೇರಿಸಲಾಯಿತು ಎಂದರು.
ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಎಚ್. ಶಶಿಕಲಾ ಮಾತನಾಡಿ, ಕನ್ನಡ ಭಾಷಾ ವಿಜ್ಞಾನ ಬಗ್ಗೆ ಬಹಳಷ್ಟು ಅಧ್ಯಯನ ಆಗಬೇಕು. ಕಿ.ಪೂ ಮೊದಲ ಶತಮಾನದಲ್ಲಿಯೇ ಕನ್ನಡ ಭಾಷೆಯ ಬಳಕೆ ಇತ್ತು. ಸಂಶೋಧಕರ ಹಾಗೂ ವಿದ್ವಾಂಸರ ಪ್ರಕಾರ, ಕನ್ನಡವು ಅಂದಿನಿಂದಲೂ ಮೌಖಿಕ ಭಾಷೆಯಾಗಿ ಬಳಕೆಯಲ್ಲಿದ್ದು, ಕ್ರಿ.ಶ. 5ನೇ ಶತಮಾನದ ಹಲ್ಮಿಡಿ ಶಾಸನವು ಕನ್ನಡದ ಅತ್ಯಂತ ಹಳೆಯ ಲಿಖಿತ ಪುರಾವೆಯಾಗಿದೆ. ಅಶೋಕನ ಕಾಲದಿಂದ ಹಿಂದಕ್ಕೆ ಹೋದಾಗ ಬುದ್ಧನ ಕಾಲದಲ್ಲೂ ಕರ್ನಾಟ, ಕರುನಾಡಾ ಎಂಬ ಬಳಕೆ ಇತ್ತು. ಇದಕ್ಕೂ ಹಿಂದಕ್ಕೆ ಹೋದಾಗ ಮಹಾಭಾರತ ಕಾಲದಿಂದಲೂ ಬಳಕೆ ಇತ್ತು ಎಂಬ ಕುರುಹು ನೀಡುತ್ತದೆ ಎಂದರು.ಮಹೇಶ ಹೋರಕೇರಿ ನಿರ್ವಹಿಸಿದರು, ವೀರೇಶ್ವರಿ ಹಿರೇಮಠ ನಿರೂಪಿಸಿದರು. ಇದಾದ ನಂತರ ಕನ್ನಡ ತಮಿಳು ಸಂಬಂಧ ಕುರಿತು ಭಾಷಾ ತಜ್ಞ ಡಾ. ಕೃ. ಅನ್ಬನ್ ಹಾಗೂ ಡಾ. ಪಿ.ಮಹಾದೇವಯ್ಯ ವಿಷಯ ಮಂಡಿಸಿದರು. ಸಂಜೆ ನಡೆದ ಸಮಾರೋಪದಲ್ಲಿ ಚಿಂತಕ ಡಾ. ವೀರಣ್ಣರಾಜೂರ ಸಮಾರೋಪ ನುಡಿಗಳನ್ನು ಹೇಳಿದರು. ಡಾ. ಸಂಜೀವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.