ವಿವಿ ಸಾಗರಕ್ಕೆ ಸದ್ದಿಲ್ಲದೆ ಹರಿದು ಬಂತು ಎತ್ತಿನಹೊಳೆ

| Published : Oct 27 2024, 02:07 AM IST

ವಿವಿ ಸಾಗರಕ್ಕೆ ಸದ್ದಿಲ್ಲದೆ ಹರಿದು ಬಂತು ಎತ್ತಿನಹೊಳೆ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸದುರ್ಗ ತಾಲೂಕಿನ ವಿವಿ ಸಾಗರ ಜಲಾಶಯಕ್ಕೆ ಎತ್ತಿನ ಹೊಳೆ ಯೋಜನೆಯ ನೀರನ್ನು ತಾತ್ಕಾಲಿಕವಾಗಿ ಹರಿಸುವ ರಾಜ್ಯ ಸರ್ಕಾರದ ಆಶಯ ಕೊನೆಗೂ ಈಡೇರಿದ್ದು, ಕಳೆದ ಒಂದು ವಾರದಿಂದ ವೇದಾವತಿಗೆ ನದಿಗೆ ಎತ್ತಿನ ಹೊಳೆ ನೀರು ಸೇರ್ಪಡೆಯಾಗಿದೆ. ಪ್ರತಿ ನಿತ್ಯ ಐದಾರು ತಾಸು ಮಾತ್ರ ಪಂಪ್ ರನ್ ಆಗುತ್ತಿದ್ದು, 150 ಕ್ಯೂಸೆಕ್ಸ್‌ನಷ್ಟು ನೀರು ಮಾತ್ರ ವಿವಿ ಸಾಗರಕ್ಕೆ ಹರಿದು ಬರುತ್ತಿದೆ. ಆಹುತಿ ಹಳ್ಳದಿಂದ ಬರುವ ಎತ್ತಿನಹೊಳೆ ನೀರು ಕಡೂರು ತಾಲೂಕಿನ ಯಗಟಿಪುರ ಸಮೀಪ ವೇದಾವತಿ ಸೇರಿದೆ.

ಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ ಹೊಸದುರ್ಗ ತಾಲೂಕಿನ ವಿವಿ ಸಾಗರ ಜಲಾಶಯಕ್ಕೆ ಎತ್ತಿನ ಹೊಳೆ ಯೋಜನೆಯ ನೀರನ್ನು ತಾತ್ಕಾಲಿಕವಾಗಿ ಹರಿಸುವ ರಾಜ್ಯ ಸರ್ಕಾರದ ಆಶಯ ಕೊನೆಗೂ ಈಡೇರಿದ್ದು, ಕಳೆದ ಒಂದು ವಾರದಿಂದ ವೇದಾವತಿಗೆ ನದಿಗೆ ಎತ್ತಿನ ಹೊಳೆ ನೀರು ಸೇರ್ಪಡೆಯಾಗಿದೆ. ಪ್ರತಿ ನಿತ್ಯ ಐದಾರು ತಾಸು ಮಾತ್ರ ಪಂಪ್ ರನ್ ಆಗುತ್ತಿದ್ದು, 150 ಕ್ಯೂಸೆಕ್ಸ್‌ನಷ್ಟು ನೀರು ಮಾತ್ರ ವಿವಿ ಸಾಗರಕ್ಕೆ ಹರಿದು ಬರುತ್ತಿದೆ. ಆಹುತಿ ಹಳ್ಳದಿಂದ ಬರುವ ಎತ್ತಿನಹೊಳೆ ನೀರು ಕಡೂರು ತಾಲೂಕಿನ ಯಗಟಿಪುರ ಸಮೀಪ ವೇದಾವತಿ ಸೇರಿದೆ.ಏನಿದು ಎತ್ತಿನಹೊಳೆ ಯೋಜನೆ ?

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಪಶ್ಚಿಮಘಟ್ಟದ ಮೇಲ್ಪಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆಹೊಳೆ, ಕೇರಿಯೊಳೆ ಮತ್ತು ಹೊಂಗದ ಹಳ್ಳದಿಂದ ಮುಂಗಾರು ಮಳೆ ವೇಳೆ 24.01 ಟಿಎಂಸಿಯಷ್ಟು ನೀರು ಲಭ್ಯವಾಗಲಿದೆ. ಈ ಪ್ರವಾಹದ ನೀರನ್ನು ಬಳಸಿಕೊಂಡು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರು ಸೇರಿದಂತೆ ಏಳು ಜಿಲ್ಲೆಗಳಿಗೆ ಸಮಗ್ರ ಕುಡಿವ ನೀರು ಪೂರೈಸುವ ಯೋಜನೆ ಇದಾಗಿದೆ.

ಏಳು ಜಿಲ್ಲೆಗಳ 29 ತಾಲೂಕಿನ 38 ಪಟ್ಟಣ ಪ್ರದೇಶಗಳ ಹಾಗೂ 6657 ಗ್ರಾಮಗಳ ಸುಮಾರು 75.59 ಲಕ್ಷ ಜನರಿಗೆ ಮತ್ತು ಜಾನುವಾರುಗಳಿಗೆ 14 ಟಿಎಂಸಿ ಕುಡಿವ ನೀರು ಒದಗಿಸುವುದು. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾಸನ ಹಾಗೂ ತುಮಕೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ 527 ಕೆರೆಗಳಿಗೆ 10 ಟಿಎಂಸಿಯಷ್ಟು ನೀರು ಬಳಕೆ ಮಾಡಿಕೊಂಡು ಅರ್ಧದಷ್ಟು ಕೆರೆ ತುಂಬಿಸುವುದು ಎತ್ತಿನಹೊಳೆ ಯೋಜನೆ ಪ್ರಮುಖ ಉದ್ದೇಶ.ತಾತ್ಕಾಲಿಕವಾಗಿ ವಿವಿ ಸಾಗರಕ್ಕೆ ನೀರು

ಎತ್ತಿನಹೊಳೆ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಮುಗಿದಿಲ್ಲದ. ಕಾರಣ ತಾತ್ಕಾಲಿಕವಾಗಿ ವೇದಾವತಿ ನದಿ ಮೂಲಕ ವಿವಿ ಸಾಗರಕ್ಕೆ ನೀರು ಹರಿಸುವ ಬಗ್ಗೆ ಸರ್ಕಾರ ಚಿಂತಿಸಿತ್ತು. ಎರಡು ತಿಂಗಳ ಹಿಂದೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಮೋಟಾರು ಪಂಪುಗಳಿಗೆ ಚಾಲನೆ ನೀಡುವುದರ ಮೂಲಕ ತಾತ್ಕಾಲಿಕವಾಗಿ ವಿವಿ ಸಾಗರಕ್ಕೆ ನೀರು ಹಾಯಿಸಿದ್ದರು. ಏಳು ಹಳ್ಳಗಳಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆ ಆದ ಹಿನ್ನಲೆ ಲಿಫ್ಟ್ ಮಾಡುವುದನ್ನು ಸ್ಥಗಿತಗೊಳಿಸಲಾಗಿತ್ತು. ಕಳೆದ ತಿಂಗಳಿನಿಂದ ಮಳೆಯಾಗುತ್ತಿರುವ ಹಿನ್ನಲೆ ಲಿಫ್ಟ್ ಮಾಡುವ ಪಂಪುಗಳನ್ನು ಪುನರ್ ಚಾಲನೆ ಮಾಡಲಾಗಿದೆ.

ಎಲ್ಲಿದೆ ನೀರು ಲಿಫ್ಟ್ ಮಾಡುವ ಪ್ರದೇಶ

ಬೇರೆ ಬೇರೆಕಡೆಯಿಂದ ಒಟ್ಟು ಏಳು ಹಳ್ಳಗಳಿಂದ ಹರಿದು ಬರುವ ನೀರಿಗೆ ಸಕಲೇಶಪುರ ಸಮೀಪದ ಹೆಬ್ಬಳ್ಳಿ ಬಳಿ ಅಡ್ಡ ಹಾಕಿ ಸಂಗ್ರಹಿಸಿ ಲಿಫ್ಟ್ ಮಾಡಲಾಗುತ್ತಿದೆ. ಲಿಫ್ಟ್ ನಿಂದ ಹರಿದು ಬರುವ ನೀರು ಮೊದಲು ಹಳೇಬೀಡು ಕೆರೆ ತುಂಬಿಸುತ್ತದೆ. ನಂತರ ಬೆಳವಾಡಿ ಕೆರೆ, ತರುವಾಯ ದೇವನೂರು ಕೆರೆ ಭರ್ತಿ ಮಾಡಿಸಿ ಆಹುತಿ ಹಳ್ಳ ತಲುಪುತ್ತದೆ. ಬಳಿಕ ಕಡೂರು ತಾಲೂಕಿನ ಯಗಟಿಪುರ ಬಳಿ ವೇದಾವತಿಗೆ ಸೇರ್ಪಡೆಯಾಗುತ್ತದೆ. ಅಲ್ಲಿಂದ ಸರಾಗವಾಗಿ ಹರಿದು ಹೊಸದುರ್ಗ ಮೂಲಕ ವಿವಿ ಸಾಗರದ ಜಲಾಶಯಕ್ಕೆ ಸೇರ್ಪಡೆಯಾಗಿದೆ. ಕಳೆದ ಒಂದು ವಾರದಿಂದ ಹೆಚ್ಚಾಗಿರುವ ವಿವಿ ಸಾಗರ ಒಳ ಹರಿವಿನಲ್ಲಿ ಎತ್ತಿನಹೊಳೆಯ 150 ಕ್ಯೂಸೆಕ್ಸ್ ಸೇರಿದೆ.

ಅಂತೂ ವಿವಿ ಸಾಗರ ಈಗ ಹಲವು ಹಳ್ಳ, ಕೊಳ್ಳಗಳ ಸಂಗಮ. ಭದ್ರೆ ಸೇರಿದಂತೆ ಏಳು ಹಳ್ಳಗಳ ನೀರು ವಿವಿ ಸಾಗರಕ್ಕೆ ಹರಿದು ಬಂದಿದೆ. ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ, ಡಿಆರ್‌ಡಿಓ ಗಳಿಗೆ ಕೊಳವೆ ಮಾರ್ಗದ ಮೂಲಕ ಹರಿದು ಕುಡಿವ ನೀರಿನ ದಾಹ ತೀರಿಸಿದೆ.